ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದ ಏಳು ಅಪರಾಧಿಗಳಿಗೆ ಬೆಂಗಳೂರಿನ 72ನೇ ಸಿಸಿಎಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಆಂಜಿನಪ್ಪ ಗಾರ್ಡನ್ ನಲ್ಲಿ ವಾಸವಾಗಿದ್ದ ಛಲವಾದಿ ಪಾಳ್ಯದ ಮಾಜಿ ಸದಸ್ಯೆ ರೇಖಾ ಅವರನ್ನು 2021ರ ಜೂನ್ ತಿಂಗಳಲ್ಲಿ ಅವರ ಕಚೇರಿ ಎದುರೇ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪೀಟರ್, ಸೂರ್ಯ ಅಲಿಯಾಸ್ ಸೂರಜ್, ಸ್ಟೀಫನ್, ಪುರುಷೋತ್ತಮ, ಅಜಯ್, ಅರುಣ್‌ಕುಮಾರ್ ಹಾಗೂ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಅಪರಾಧಿ 63 ವರ್ಷದ ಮಾಲಾ ವಿಚಾರಣೆ ನಡೆಯುತ್ತಿರುವಾಗಲೇ ಮೃತಪಟ್ಟಿದ್ದರು.
ಎಲ್ಲ ಆರೋಪಿಗಳನ್ನು ಬಂಧಿಸಿದ್ದ ಕಾಟನ್‌ಪೇಟೆ ಪೊಲೀಸರು 2021ರ ಸೆಪ್ಟೆಂಬರ್‌ನಲ್ಲಿ ನಗರದ 31ನೇ ಎಸಿಎಂಎಂ ನ್ಯಾಯಾಲಯಕ್ಕೆ 780 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳು ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿದೆ. ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ನಂತರ ರೇಖಾ ಪ್ರತ್ಯೇಕವಾಗಿ ವಾಸವಾಗಿದ್ದರು. ರೇಖಾ ತಮ್ಮನ್ನು ರಾಜಕೀಯವಾಗಿ ಬೆಳೆಸುತ್ತಿಲ್ಲ ಎಂದು ಕದಿರೇಶ್ ಅಕ್ಕ ಮಾಲಾ ಹಾಗೂ ಸಂಬಂಧಿಕರು ಆಕ್ರೋಶಗೊಂಡಿದ್ದರು.
ಕದಿರೇಶ್ ಗೆ ಪೀಟರ್ ಹತ್ತಿರವಾಗಿದ್ದ. ಕದಿರೇಶ್ ಕೊಲೆಯಾದ ನಂತರ ಪೀಟರ್, ರೇಖಾ ಅವರಿಗೆ ಅಂಗರಕ್ಷಕನಂತೆ ಸಂಚರಿಸುತ್ತಿದ್ದ. ಆದರೆ ರೇಖಾ ಆತನನ್ನು ದೂರವಿಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಸಿಟ್ಟಾಗಿದ್ದ ಪೀಟರ್ ಮಾಲಾ ಹಾಗೂ ಅವರ ಮಗ ಅರುಣ್‌ಕುಮಾರ್ ಅವರನ್ನು ಸಂಪರ್ಕಿಸಿದ್ದ. ಎಲ್ಲರೂ ಸೇರಿಕೊಂಡು ರೇಖಾ ಹತ್ಯೆಗೆ ಸಂಚು ರೂಪಿಸಿದ್ದರು. ಸಹೋದರ ಕದಿರೇಶ್ ನಂತರ ನಾನೇ ಪಾಲಿಕೆ ಸದಸ್ಯೆಯಾಗಬೇಕು ಎನ್ನುವುದು ಮಾಲಾ ಅವರ ಬಯಕೆಯಾಗಿತ್ತು.ಹಾಗಾಗಿ ರೇಖಾ ಅವರನ್ನು ಮುಗಿಸುವ ಸಂಚು ರೂಪಿಸಿದ್ದರು ಎನ್ನಲಾಗಿದೆ.