Wednesday, December 11, 2024

ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ: ಮುಖ್ಯಮಂತ್ರಿ ಸಿದ್ದರಾಮಯ್ಯ‌

Most read

ಚಾಮರಾಜನಗರ: ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ. ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ. ಎಲ್ಲರಲ್ಲಿಯೂ  ಪ್ರತಿಭೆಯಿದ್ದು  ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮಮ್ಮ ಸೋಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಎರಡು ಕೋಟಿ ರೂ.ಗಳನ್ನು ವೆಚ್ಚ ಮಾಡಿ ನಿರ್ಮಾಣವಾಗಿರುವ ಶಾಲೆಯಲ್ಲಿ  ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಮರಿಸ್ವಾಮಿ ಸ್ವಂತ ಶ್ರಮದಿಂದ ಐಪಿಎಸ್ ಆಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವಂತೆ ಮಾಡಿದ್ದಾರೆ. ಸ್ವಾತಂತ್ಯ್ರಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತ್ರ. ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತರಾಗಲೇಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ನಾವು ವಿದ್ಯಾರ್ಥಿಗಳಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತರಳುತ್ತಿದ್ದೆವು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತçವನ್ನು ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕವನ್ನು ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಓದಬೇಕು. ವಿದ್ಯೆಯಿಂದ ವಂಚಿತರಾಗಬಾರದು ಎಂದರು. ಮಕ್ಕಳಿಗೆ ಆರ್ಥಿಕವಾಗಿ ತೊಂದರೆಯಾಗಬಾರದು ಎಂದು ಗೃಹಲಕ್ಷ್ಮೀ ಕಾರ್ಯಕ್ರಮವನ್ನು ಜಾರಿ ಮಾಡಿದ್ದೇವೆ. ಜನರಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು ಎಂದು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ. ಗ್ಯಾರಂಟಿಗಳಿಗೆ 56 ಸಾವಿರ ಕೊಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರು.

ನಾನು ಓದದೇ ಹೋಗಿದ್ದರೆ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ರಾಚಯ್ಯನವರು ಕಾನೂನು ಓದಿದ್ದರಿಂದ ಸಚಿವರು ಹಾಗೂ ರಾಜ್ಯಪಾಲರಾದವರು. ಮರಿಸ್ವಾಮಿಯವರು ಓದಿದ್ದರಿಂದ ಐ.ಪಿ.ಎಸ್ ಅಧಿಕಾರಿಯಾದರು. ಅದಕ್ಕೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು  ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಆರ್ಥಿಕ ಶಕ್ತಿ ತುಂಬವ ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮೀ ಹಣದಿಂದ ಬಂಗಾರದಂತಹ ಬೆಳೆ ಬೆಳೆದಿರುವ ಬಗ್ಗೆ ಪತ್ರಿಕಾ ತುಣುಕನ್ನು ಸಿಎಂ ಪ್ರಸ್ತಾಪಿಸಿ, 1 ಕೋಟಿ 22 ಲಕ್ಷ ಕುಟುಂಬದ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ರೂ.ಗಳನ್ನು ಕೊಡಲಾಗುತ್ತಿದೆ ಎಂದರು.  ಐದು ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಮೂಲಕ ಉಚಿತವಾಗಿ ಕೊಡುವ ಕೆಲಸವನ್ನು  ಸಿದ್ದರಾಮಯ್ಯ ಜಾರಿಮಾಡಿದ್ದು ಎಂದರು. ಅಕ್ಕಿಗೆ 34 ರೂ.ಗಳನ್ನು ಕೊಡುತ್ತೇವೆ ಎಂದಾಗ ನರೇಂದ್ರ ಮೋದಿ ನಿರಾಕರಿಸಿದರು. ಪ್ರತಿ ವ್ಯಕ್ತಿಗೆ 34 ರೂ.ಗಳಂತೆ 170 ರೂ.ಗಳನ್ನು ನೀಡಲಾಗುತ್ತಿದೆ. 4.50 ಕೋಟಿ ಜನರಿಗೆ ಈ ಸೌಲಭ್ಯ ತಲುಪಿಸಲಾಗುತ್ತಿದೆ. 1 ಕೋಟಿ 62 ಲಕ್ಷ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ನಾನು ಹಳ್ಳಿಯಲ್ಲಿ ಹುಟ್ಟಿ ಕಷ್ಟ ಗೊತ್ತಿರುವುದರಿಂದ ಈ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದರು.

ಮರಿಸ್ವಾಮಿಯವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸತ್ತೇಗಾಲ ಗ್ರಾಮದ ಗ್ರಾಮಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆಯ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯವನ್ನು ಪಡೆದು ಶಾಲೆಯನ್ನು ನಿರ್ಮಾಣ ಮಾಡಿರುವುದನ್ನು ಮುಖ್ಯಮಂತ್ರಿಗಳೂ ಮೆಚ್ಚಿದರು.  ಚಾಮರಾಜನಗರದಲ್ಲಿ  ಒಟ್ಟು ಪ್ರಾಥಮಿಕ ಶಾಲೆಗಳು 1102 ಶಾಲೆಗಳಿದ್ದು  ಪೈಕಿ  805 ಸರ್ಕಾರಿ ಶಾಲೆಗಳಿವೆ. ಸರ್ಕಾರವೇ ಎಲ್ಲವನ್ನೂ ಅಭಿವೃದ್ಧಿ ಪಡೆಸುವುದು ಕಷ್ಟವಾಗುತ್ತದೆ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ. ನಾವು ಓದಿದ ಶಾಲೆ ಹೊಸದಾಗಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿರುವಾಗ ಈ ಕೆಲಸ ಮಾಡಿದವರಿಗೆ ಆಗುವ ಖುಷಿ, ಸಮಾಧಾನ ಬೇರೆಯಾರಿಗೂ ಆಗಲು ಸಾಧ್ಯವಿಲ್ಲ. ಮರಿಸ್ವಾಮಿ ಹಾಗೂ ಅವರ ಕುಟುಂಬದವರಲ್ಲದೇ ಶಾಲಾ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ 63 ಜನರನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಸುಸಜ್ಜಿತ ಶಾಲೆ ನಿರ್ಮಾಣ ಮಾಡಿದ್ದು ಅದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮರಿಸ್ವಾಮಿಯವರು ಮಾಡಿದಂತೆ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ನೆರವಾಗಬೇಕು. ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ತಳ್ಳಿಕೊಂಡು ಹೋಗಿ, ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು ಎಂದರು.  ಮೀಸಲಾತಿ ಲಾಭವನ್ನು ಪಡೆದ ಮೇಲೆ ಇತರರಿಗೂ ನೆರವು ನೀಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಸ್ಪೂರ್ತಿಯನ್ನು ಪಡೆದುಕೊಂಡು ಜನರಿಗಾಗಿ ಕೆಲಸ ಮಾಡಬೇಕು ಎಂದರು. 

ಚಾಮರಾಜನಗರ ಜಿಲ್ಲಾ ಉಸ್ತುವರಿ, ಪಶುಸಂಗೋಪನೆ  ಹಾಗೂ ರೇಷ್ಮೆ ಸಚಿವರಾದ ಕೆ.  ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ:ಹೆಚ್.ಸಿ ಮಹದೇವಪ್ಪ, ಪ್ರಾಥಮಿಕ ಶಿಕ್ಷಣ ತ್ತು ಸಆಕ್ಷರತಾ ಇಲಾಕೆ ಸಚಿವರಾದ ಮಧು ಬಂಗಾರಪ್ಪ. ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಸಚಿವರು ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಾಸಕ ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ನರೇಂದ್ರ, ನಂಜುಂಡಸ್ವಾಮಿ, ಮಾಜಿ ಸಚಿವ ಲಿಂಗಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಎಸ್. ಮರಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

More articles

Latest article