ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಕೋವಿಡ್-19 ಅವಧಿಯಲ್ಲೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪುರುಷರು ಮೃತಪಟ್ಟಿರುವುದಾಗಿ ದಾಖಲೆಗಳು ಹೇಳುತ್ತವೆ. ಕೋವಿಡ್ ಅವಧಿಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಪ್ರಯಾಣ ಮತ್ತು ತುರ್ತು ಅಲ್ಲದ ಕಾಮಗಾರಿಗಳನ್ನು ನಿಷೇಧಿಸಲಾಗಿದ್ದರೂ, ಮೈಸೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪುರುಷರು ಅಸುನೀಗಿರುವುದಾಗಿ ದಾಖಲೆಗಳು ಸಾಬೀತು ಮಾಡುತ್ತವೆ ಎಂದು ಬಿಎಲ್ ಆರ್ ಪೋಸ್ಟ್ ವಿಸ್ತೃತ ವರದಿ ಮಾಡಿದೆ.
2020 ರಲ್ಲಿ ನಾಲ್ಕು ಹಂತಗಳಲ್ಲಿ ಕೋವಿಡ್ -19 ಲಾಕ್ ಡೌನ್ ವಿಧಿಸಲಾಗಿತ್ತು. ಮೊದಲ ಹಂತವು ಮಾರ್ಚ್ 25ರಿಂದ ಆರಂಭವಾಗಿ ಏಪ್ರಿಲ್ 14ರವರೆಗೆ 21 ದಿನ ಮುಂದುವರೆದಿತ್ತು. ಎರಡನೇ ಹಂತವು ಏಪ್ರಿಲ್ 15 ರಿಂದ ಮೇ 3ರವರೆಗೆ ಅಂದರೆ 19 ದಿನಗಳ ಅವಧಿಗೆ ವಿಸ್ತರಣೆಯಾಗಿತ್ತು. ಈ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ರಾಷ್ಟ್ರೀಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಬದ್ಧವಾಗಿದ್ದವು.
ಮೂರನೇ ಹಂತವು ಮೇ4 ರಿಂದ ಮೇ 17ರವರೆಗೆ 14 ದಿನ ಮುಂದುವರೆದಿತ್ತು. ಅಂತಿಮ ನಾಲ್ಕನೇ ಹಂತವು ಮೇ18 ರಿಂದ ಮೇ 31 ರವರೆಗೆ ಮತ್ತೆ 14 ದಿನಗಳ ಅವದಿಗೆ ಮುಂದುವರೆಸಲಾಗಿತ್ತು. ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸತತ ಲಾಕ್ ಡೌನ್ ಗಳ ಗುರಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಲಾಕ್ ಡೌನ್ ಅನ್ನು ಜೂನ್ 7ರವರೆಗೆ ಮುಂದುವರೆಸಿದ್ದರು. ಕಂದಾಯ ಮತ್ತು ಆಡಳಿತಾತ್ಮಕ ದಾಖಲೆಗಳ ಪ್ರಕಾರ ಧರ್ಮಸ್ಥಳ ಗ್ರಾಮವೂ ಕರ್ನಾಟಕ ಮತ್ತು ಭಾರತದ ಭಾಗವಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ (ಯುಡಿಆರ್) ಸಂಖ್ಯೆ-17/2020 ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಯುಡಿಆರ್ ದಾಖಲಿಸಿಕೊಳ್ಳಲಾದ ದಿನದಂದೇ 20 ರಿಂದ 40 ವರ್ಷದೊಳಗಿನ ಪುರುಷನೊಬ್ಬನ ಶವ ಬಾಹುಬಲಿ ಬೆಟ್ಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ವ್ಯಕ್ತಿಯು 2020ರ ಮಾರ್ಚ್ 7ರಿಂದ ಏಪ್ರಿಲ್ 8ರ ಅವಧಿಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ.
ಬಾಹುಬಲಿ ಬೆಟ್ಟ ಸದಾ ಭಕ್ತರಿಂದ ತುಂಬಿರುತ್ತದೆ. ಒಂದು ವೇಳೆ ಆತ ಲಾಕ್ ಡೌನ್ ಆರಂಭವಾದ 2020ರ ಮಾರ್ಚ್ 25 ಕ್ಕೂ ಮುನ್ನ ಆತ್ಮಹತ್ಯೆಗೆ ಶರಣಾಗಿದ್ದರೆ ಯಾರೊಬ್ಬರೂ ಆತನ ದೇಹವನ್ನು ಏಕೆ ಗುರುತಿಸಲಿಲ್ಲ? ಯಾರೊಬ್ಬರೂ ಭೇಟಿ ನೀಡದ ಲಾಕ್ ಡೌನ್ ಅವಧಿಯಲ್ಲೇ ಏಕೆ ಪ್ರಕರಣ ದಾಖಲಾಯಿತು ಎಂಬ ಸಂಶಯ ಉಂಟಾಗುತ್ತದೆ.
ಲಾಕ್ ಡೌನ್ ಆರಂಭವಾಗುವುದಕ್ಕೂ ಮುನ್ನ ಯಾರೊಬ್ಬರೂ ಗುರುತಿಸದೇ ಇದ್ದಾಗ ಕಾಣದ ಮೃತದೇಹ ಲಾಕ್ ಡೌನ್ ಗಂಭೀರವಾಗಿ ಮುಂದುವರೆದಿದ್ದಾಗ, ಕೋವಿಡ್ ಭಯ ಆವರಿಸಿದ್ದಾಗ ಪತ್ತೆಯಾಗಿರುವುದು ಅನುಮಾನ ಹುಟ್ಟುಹಾಕುತ್ತದೆ.
47 ವರ್ಷದ ಸಂಜೀವ ಎಂಬಾತ ಬಿದ್ದು ಮೃತಪಟ್ಟಿದ್ದಾನೆ ಎಂದು 2020ರ ಮೇ15 ರಂದು ಮತ್ತೊಂದು ಯುಡಿಆರ್ (ನಂ. 19/2020) ದಾಖಲಾಗಿದೆ. ಕಾರ್ ಮ್ಯೂಸಿಯಂ ಸಮೀಪ ಛಾವಣಿಯ ಶೀಟ್ ಬದಲಾಯಿಸುವಾಗ ಕಟ್ಟಡದ ಮೇಲಿಂದ ಬಿದ್ದಿದ್ದಾನೆ ಎಂದು ನಮೂದಾಗಿದೆ. ಈ ಕಾರ್ ಮ್ಯೂಸಿಯಂ ಅನ್ನು ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿ ನಿರ್ವಹಿಸುತ್ತಿದೆ. ಸಂಜೀವ ಉತ್ತರಕನ್ನಡ ಜಿಲ್ಲೆಯ ಕಾರವಾರದ ನಿವಾಸಿ. ಸಂಜೀವ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಮಾಡುತ್ತಿದ್ದದ್ದು ಏಕೆ ಮತ್ತು ಆತನಿಗೆ ಕೆಲಸ ಮಾಡಲು ಸೂಚಿಸಿದ್ದು ಯಾರು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
ಆರು ದಿನಗಳ ನಂತರ ಅಂದರೆ ಮೇ 21ರಂದು ಮೈಸೂರಿನ ಎಚ್.ಡಿ.ಕೋಟೆ ನಿವಾಸಿ 59 ವರ್ಷದ ಪುಟ್ಟೇಗೌಡ ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದ್ದಾನೆ. ಯುಡಿಆರ್ ನಂ.20/2020ರ ಪ್ರಕಾರ ನೇಣುಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಎಲ್ಲಾ ಜಿಲ್ಲೆಗಳ ಗಡಿಗಳನ್ನು ಮುಚ್ಚಿ ಸಂಚಾರದ ಮೇಲೆ ನಿಗಾ ವಹಿಸಿದ್ದರೂ ಪುಟ್ಟೇಗೌಡ ಹೇಗೆ ಅಷ್ಟು ದೂರ ಪ್ರಯಾಣಿಸಿದ? ಪೊಲೀಸರು ಪ್ರತಿ ಗಡಿಯಲ್ಲೂ ಆತನನ್ನು ಬಿಟ್ಟು ಕಳುಹಿಸಿದ್ದು ಏಕೆ? ಆತ ಧರ್ಮಸ್ಥಳಕ್ಕೆ ಬಂದ ಉದ್ದೇಶವಾದರೂ ಏನು? ಧರ್ಮಸ್ಥಳದ ಅರಣ್ಯದಲ್ಲಿ ಆತ ಶವವಾಗಿದ್ದಾದರೂ ಹೇಗೆ ? ಈ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು?