ಶಿವಮೊಗ್ಗ: ಸ್ವತಃ ನರೇಂದ್ರ ಮೋದಿ ಹೇಳಿದರೂ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಬಂಡಾಯ ತಣ್ಣಗಾಗುವಂತೆ ತೋರುತ್ತಿದ್ದು, ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ದಿಲ್ಲಿಗೆ ತೆರಳಿದ್ದಾರೆ.
ಇಂದು ಸಂಜೆ 7.45ಕ್ಕೆ ದಿಲ್ಲಿ ತಲುಪಲಿರುವ ಕೆ.ಎಸ್.ಈಶ್ವರಪ್ಪ ನಂತರ ಪಕ್ಷದ ಉನ್ನತ ಮಟ್ಟದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ವರಿಷ್ಠರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿರುವ ಅವರು, ಯಾವುದೇ ಕಾರಣಕ್ಕೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯಪಾಲರ ಹುದ್ದೆ ಸೇರಿದಂತೆ ಈಶ್ವರಪ್ಪ ಅವರಿಗೆ ಹಲವು ಬಗ್ಗೆಯ ಆಮಿಷಗಳನ್ನು ಒಡ್ಡಲಾಗುವ ಸಂಭವವಿದ್ದು, ಈಶ್ವರಪ್ಪ ದಿಲ್ಲಿ ಭೇಟಿಯ ನಂತರ ತಮ್ಮ ನಿರ್ಧಾರ ಬದಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ನೀಡಲು ನಿರಾಕರಿಸಿದ ನಂತರ ಕ್ರೋಧದಿಂದ ಬುಸುಗುಡುತ್ತಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ನಡೆಸಿ, ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯಡಿಯೂರಪ್ಪ ಕಾಂಗ್ರೆಸ್ ಪಕ್ಷದೊಂದಿಗೆ ಶಾಮೀಲಾಗಿ ಮ್ಯಾಚ್ ಫಿಕ್ಸಿಂಗ್ ಆಟ ಆಡುತ್ತಿದ್ದಾರೆ. ಅಪ್ಪ-ಮಕ್ಕಳ ರಾಜಕಾರಣವನ್ನು ಕೊನೆಗಾಣಿಸುತ್ತೇನೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೆದ್ದು, ಗೆಲುವನ್ನು ಪ್ರಧಾನಿ ಮೋದಿ ಅವರಿಗೆ ಅರ್ಪಿಸಿ ಎರಡೇ ತಿಂಗಳಲ್ಲಿ ಬಿಜೆಪಿಗೆ ವಾಪಾಸ್ ಬರುತ್ತೇನೆ ಎಂದು ಈಶ್ವರಪ್ಪ ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.