ಸೋಮೇಶ್ವರ ವನ್ಯಜೀವಿಧಾಮ: ಅನಧಿಕೃತ ಕಾಳಿಂಗ ಪ್ರವಾಸೋದ್ಯಮ ನಿಲ್ಲಿಸಲು ಪರಿಸರವಾದಿ ನಾಗರಾಜ ಕೂವೆ ಆಗ್ರಹ

Most read

ಶಿವಮೊಗ್ಗ: ಸೋಮೇಶ್ವರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಸುತ್ತಿರುವ ಅನಧಿಕೃತ ಕಾಳಿಂಗ ಪ್ರವಾಸೋದ್ಯಮದ  ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು  ಪರಿಸರ ಕಾರ್ಯಕರ್ತ ನಾಗರಾಜ ಕೂವೆ ಆಗ್ರಹಪಡಿಸಿದ್ದಾರೆ.

ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿಕೊಂಡಿರುವ ಅವರು, ಕಾಳಿಂಗ ಸರ್ಪಗಳು ತೋಟ, ಮನೆಯ ಬಳಿ ಕಂಡುಬಂದರೆ ಅರಣ್ಯ ಇಲಾಖೆ ಸಿಬ್ಬಂದಿಯೇ ಅವುಗಳನ್ನು ಹಿಡಿಯಬೇಕು. ಮಲೆನಾಡು ಜಿಲ್ಲೆಗಳಲ್ಲಿ ( ಕೊಡಗಿನಿಂದ ಉತ್ತರ ಕನ್ನಡದವರೆಗೆ) ಪ್ರತೀ ಅರಣ್ಯ ವಲಯದಲ್ಲಿ , RFO ಕನಿಷ್ಠ ಐದು ಸಿಬ್ಬಂದಿಗೆ ಕಾಳಿಂಗ ಸರ್ಪ ರಕ್ಷಣೆಯ ತರಬೇತಿ ಕೊಡಿಸಬೇಕು. ಕಾಳಿಂಗ ಸರ್ಪಗಳ ರಕ್ಷಣೆಗೆ ಖಾಸಗಿ ಸಂಸ್ಥೆಗಳ ನೆರವು ಪಡೆಯಬಾರದು ಎಂದು ಆದೇಶಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ನಿರ್ಧಾರ ಎಂದಿದ್ದಾರೆ.

ಶಿವಮೊಗ್ಗ ಜಿಲ್ಲೆ ಆಗುಂಬೆ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ 20 ವರ್ಷಗಳಿಂದ ಕಾಳಿಂಗ ಸಂಶೋಧನೆ ಮುಖವಾಡ ಧರಿಸಿಕೊಂಡು ನಡೆಯುತ್ತಿರುವ ಕಾಳಿಂಗ ಸರ್ಪ ಶೋಷಣೆ ಸಂಪೂರ್ಣವಾಗಿ ನಿಲ್ಲಬೇಕು. ಇಲ್ಲಿನ ‘ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ(Agumbe Rainforest Research Station) ಮತ್ತು ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್(Kalinga Centrefor Rainforest Ecology)’ ಎಂಬ ಖಾಸಗಿ ಸಂಸ್ಥೆಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ಪರಿಸರ, ವನ್ಯಜೀವಿ ಕಾಯ್ದೆ ಕಾನೂನುಗಳನ್ನು ಉಲ್ಲಂಘಿಸಿವೆ. ಈ ಸಂಸ್ಥೆಗಳ ಮುಖ್ಯಸ್ಥರಾದ ಅಜಯ್ ಗಿರಿ, ಗೌರಿಶಂಕರ್, ಪ್ರದೀಪ್ ಹೆಗಡೆ ಮತ್ತಿತರರ ಮೇಲೆ ಕಾಳಿಂಗ ಸರ್ಪ ಬಂಧನ, ಫೋಟೋಶೂಟ್, ವಿಡಿಯೋ ಚಿತ್ರೀಕರಣ, ಕೃತಕವಾಗಿ ಮರಿ ಮಾಡಿ ಕಾಡಿಗೆ ಬಿಡುವುದು, ಅನುಮತಿ ಇಲ್ಲದೆ ಸಂಶೋಧನೆ, ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ ವಾಣಿಜ್ಯಿಕ ಕಟ್ಟಡಗಳು, ಕಾಡು ಒತ್ತುವರಿ, ಅನುಮತಿ ಇಲ್ಲದೆ ಶಿಬಿರ, ಕಾರ್ಯಾಗಾರ, ಸಂಶೋಧನೆ ಹೆಸರಿನಲ್ಲಿ ಆರ್ಥಿಕ ಚಟುವಟಿಕೆಗಳು, ಪ್ರವಾಸೋದ್ಯಮ ಸೇರಿದಂತೆ ಹತ್ತು ಹಲವು ಕಾನೂನು ಉಲ್ಲಂಘನೆ ಮಾಡುತ್ತಲೇ ಬಂದಿದ್ದಾರೆ.  ಇವರು ಎಲ್ಲ ರೀತಿಯ ಭಾರತೀಯ ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸುತ್ತಾ ಬಂದಿದ್ದಾರೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಆ ಮೂಲಕ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಮೇಲಿನ ಹಿಂಸೆ ಶಾಶ್ವತವಾಗಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

 ಈ ಸಂಸ್ಥೆಗಳು ಅಧ್ಯಯನದ ಹೆಸರಿನಲ್ಲಿ ವಿದೇಶಿ ದೇಣಿಗೆಗಾಗಿ ‘ಮಲೆನಾಡಿಗರು ಕಾಳಿಂಗ ಕೊಲ್ಲುವವರು’ ಎಂಬಂತೆ ಸಂಶೋಧನಾ ಪ್ರಬಂಧಗಳಲ್ಲಿ ಬಿಂಬಿಸಿದ್ದಾರೆ. ಈ ಸುಳ್ಳು ಆರೋಪದ ಮೂಲಕ ಮಲೆನಾಡಿಗರನ್ನು ಅಪರಾಧಿಗಳಂತೆ ತೋರಿಸಿದ್ದಾರೆ. ಇಲ್ಲಿಯವರೆಗೆ ಮಲೆನಾಡಿಗರು ಒಂದೇ ಒಂದು ಕಾಳಿಂಗ ಸರ್ಪ ಕೊಂದ ಉದಾಹರಣೆ ಇಲ್ಲ. ಹಾಗೆಯೇ ಕಾಳಿಂಗ ಸರ್ಪ ಸಹಜವಾಗಿ ಕಚ್ಚಿ ಜನ ಸತ್ತ ನಿದರ್ಶನಗಲೂ ಇಲ್ಲ. ಆದರೂ ತಮ್ಮ ವೈಯಕ್ತಿಕ ಲಾಭಕ್ಕಾಗಿ ‘ಮಾನವ-ಕಾಳಿಂಗ ಸರ್ಪ ಸಂಘರ್ಷ’ ಎಂಬ ಸುಳ್ಳು ಸಂಕಥನ ಸೃಷ್ಠಿಸಲಾಗಿದೆ. ಸಂರಕ್ಷಣೆ ಹೆಸರಿನಲ್ಲಿ ಕೃತಕವಾಗಿ ಕಾಳಿಂಗದ ಮೊಟ್ಟೆಗಳನ್ನು ಮರಿ ಮಾಡಿ ಕಾಡಿಗೆ ಬಿಟ್ಟು ಪರಿಸರ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸಲಾಗಿದೆ. ಈ ನಿಸರ್ಗ ವಿರೋಧಿ ಕೃತ್ಯದಿಂದಾಗಿ ಹಿಂದೆ ಅಪರೂಪವಾಗಿ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗಗಳು ಈಗ ಹೆಚ್ಚಾಗಿ ಕಂಡುಬರುತ್ತಿವೆ ಎಂದೂ ಅವರು ಆಪಾದಿಸಿದ್ದಾರೆ.

ಇಲ್ಲಿನ ಮಲಬಾರ್ ಪಿಟ್ ವೈಪರ್, ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಮಂಡಲ ಜಾತಿಯ ಹಾವುಗಳನ್ನು ಹಿಡಿದು ತಂದು ತಮ್ಮ ಕೇಂದ್ರಗಳಲ್ಲಿ ಕೃತಕವಾಗಿ ಸಾಕುತ್ತಿರುವುದು ; ಮತ್ತದರ ಫೋಟೋ, ವಿಡಿಯೋ ಚಿತ್ರೀಕರಣ ಮಾಡುತ್ತಿರುವುದು ಸೇರಿದಂತೆ ಹಲವಾರು ಅರಣ್ಯೇತರ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಈ ಕೂಡಲೇ ಸರ್ಕಾರ ಈ ಎಲ್ಲಾ ಅಂಶಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು ಎಂದೂ ಅವರು ಕೋರಿದ್ದಾರೆ.

More articles

Latest article