ಚಿಕ್ಕಮಗಳೂರು: ಸಂವಿಧಾನ ಜಾರಿಗೊಳಿಸಿ ಸಮಾನತೆಯ ಅವಕಾಶ ನೀಡಿದ್ದರೂ ದೇಶದುದ್ದಗಲಕ್ಕೂ ಅಸ್ಪೃಶ್ಯತೆ ಇನ್ನೂ ಆಚರಣೆಯಲ್ಲಿದೆ. ದೇವಾಲಯಗಳಿಗೆ ಪ್ರವೇಶ ನಿಕಾರಿಸುತ್ತಿರುವ ಘಟನೆಗಳು ದಿನಂಪ್ರತಿ ನಡೆಯುತ್ತಲೇ ಇವೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹುದೇ ನಾಚಿಕೆಗೇಡಿನ ಘಟನೆ ವರದಿಯಾಗಿದೆ. ದಲಿತ ಯುವಕರು ದೇಗುಲ ಪ್ರವೇಶ ಮಾಡಿದ್ದರು ಎಂಬ ಕಾರಣಕ್ಕೆ ತಾಲ್ಲೂಕಿನ ನರಸೀಪುರ ಗ್ರಾಮದ ತಿರುಮಲ ದೇವಾಲಯದಲ್ಲಿ ಕಳೆದ ಎರಡು ದಿನಗಳಿಂದ ಪೂಜೆ ನಿಲ್ಲಿಸಲಾಗಿದೆ. ಅಧಿಕಾರಿಗಳು ಪೂಜೆಯನ್ನು ಮರು ಆರಂಭಿಸಲು ಗ್ರಾಮಸ್ಥರ ಮನವೊಲಿಕೆ ಮಾಡುತ್ತಿದ್ದಾರೆ.
ಮಂಗಳವಾರ ತಹಶೀಲ್ದಾರ್ ಸುಮಂತ್ ಅವರು ಗ್ರಾಮಕ್ಕೆ ಆಗಮಿಸಿ ಇಬ್ಬರು ದಲಿತರನ್ನು ದೇವಾಲಯದೊಳಗೆ ಕರೆದೊಯ್ದಿದ್ದರು. ಗ್ರಾಮಸ್ಥರು ದೇವಸ್ಥಾನದ ಕೀ ನೀಡಿದ್ದರು. ದಲಿತರು ಹೋಗಿ ಬಂದ ನಂತರ ಗ್ರಂಸ್ಥತು ಪೂಜೆಯನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಬೆಳವಾಡಿ ಸಮೀಪದ ನರಸೀಪುರದಲ್ಲಿ 250ಕ್ಕೂ ಹೆಚ್ಚು ಕುರುಬ ಸಮುದಾಯದ ಕುಟುಂಬಗಳು ಮತ್ತು ಪರಿಶಿಷ್ಟ ಜಾತಿಯ (ಆದಿ ಕರ್ನಾಟಕ) 13 ಕುಟುಂಬಗಳು ವಾಸಿಸುತ್ತಿವೆ. ತಿರುಮಲ, ಬೀರಪ್ಪ, ಲಕ್ಷ್ಮೀದೇವಿ ಸೇರಿ ಸಣ್ಣಸಣ್ಣ 9 ದೇವಸ್ಥಾನಗಳಿವೆ. ತಿರುಮಲ ದೇವರ ಗುಡಿಯೇ ಊರ ಪ್ರಮುಖ ದೇಗುಲವಾಗಿದ್ದು, ಮುಜರಾಯಿ ಇಲಾಖೆ ಮೂಲಕ ಅರ್ಚಕರನ್ನು ನೇಮಿಸಲಾಗಿದೆ. ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ, ಎಲ್ಲಾ ಜಾತಿಯ ಜನರಿಗೂ ದೇಗುಲದಲ್ಲಿ ಮುಕ್ತ ಅವಕಾಶ ಇದೆ ಎಂಬ ಫಲಕವನ್ನು ಮುಜರಾಯಿ ಇಲಾಖೆಯ ಈ ದೇವಸ್ಥಾನದಲ್ಲಿ ಅಳವಡಿಸಿಲ್ಲ.
ಆರಂಭದಲ್ಲಿ ಗ್ರಾಮಸ್ಥರು ದಲಿತರ ಪ್ರವೇಶಕ್ಕೆ ಸಮ್ಮತಿ ಸೂಚಿಸಲಿಲ್ಲ. ಪೂಜೆ ಸೇರಿದಂತೆ ಎಲ್ಲ ಆಚರಣೆಗಳನ್ನು ದಲಿತರೇ ನಿರ್ವಹಿಸಲಿ ಎಂದು ಪಟ್ಟು ಹಿಡಿದರು. ನಾವು ಪೂಜೆಯ ಅವಕಾಶ ಕೇಳುತ್ತಿಲ. ಕೇವಲ ದೇವರಿಗೆ ಕೈ ಮುಗಿಯುವ ಅವಕಾಶ ಕೇಳುತ್ತಿದ್ದೇವೆ ಎಂದು ದಲಿತ ಮುಖಂಡ ಹೇಮಂತ್ ಕುಮಾರ್ ಹೇಳಿದರು.
ಅಂತಿಮವಾಗಿ ಅಧಿಕಾರಿಗಳು ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ. ಗ್ರಾಮಸ್ಥರು ಅರ್ಥ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಲಿಲ್ಲ. ಸಂಜೆ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಡಿವೈಎಸ್ ಪಿ ಶೈಲೇಂದ್ರ ಮೊದಲಾದ ಆಧಿಕಾರಿಗಳು ಆಗಮಿಸಿ ಮನವರಿಕೆ ಮಾಡಿಕೊಟ್ಟ ನಂತರ ಗ್ರಾಮಸ್ಥರು ಎಲ್ಲರ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಎರಡೂ ಸಮುದಾಯದವರನ್ನು ಸೇರಿಸಿ ಗುರುವಾರ ಸಂಜೆ ಸಭೆ ನಡೆಸಿದ್ದೇವೆ. ದೇಗುಲಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಲು ಗ್ರಾಮಸ್ಥರು ಒಪ್ಪಿದ್ದಾರೆ ಎಂದು ಉಪವಿಭಾಗಾಧಿಕಾರಿ ದಲ್ಜಿತ್ಕುಮಾರ್ ತಿಳಿಸಿದರು. ಎರಡು ದಿನ ಪೂಜೆ ನಿಂತಿದ್ದರಿಂದ ಕೆಲವು ವಿಧಿ-ವಿಧಾನಗಳನ್ನು ನೆರವೇರಿಸಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ. ಶುಕ್ರವಾರ ಪೂಜೆ ಆರಂಭ ಮಾಡುವುದಾಗಿ ಭರವಸೆ ನೀಡಿದ್ದಾರೆ. ಒಂದ ವೇಳೆ ದಲಿತರಿಗೆ ಪ್ರವೇಶ ನಿರಾಕರಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.