ಬೆಂಗಳೂರು: ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಡಿಎಂ ಕನ್ಸಲ್ಟೆನ್ಸಿ ವ್ಯವಸ್ಥಾಪಕ ನಿರ್ದೆಶಕ ಚೇತನ್ ಸೇರಿದಂತೆ ಐವರ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ಚೇತನ್, ವ್ಯವಸ್ಥಾಪಕ ಶರತ್, ರೋಡ್ರಿಕ್ಸ್ ನವೀನ್, ಅಂಜಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದುಬೈನಲ್ಲಿ ಡಿ.ಎಂ. ಕನ್ಸಲ್ವೆಂಟ್‌ನ ಕೇಂದ್ರ ಕಚೇರಿ ಇದ್ದು, ದೆಹಲಿ, ಹೈದರಾಬಾದ್, ಬೆಂಗಳೂರಿನಲ್ಲಿ ಕಂಪನಿಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪೋಲೆಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ವಾಹನ ಚಾಲಕ, ಹೌಸ್‌ಕೀಪಿಂಗ್ ಸೇರಿದಂತೆ ವಿವಿಧ ಕೆಲಸ ಕೊಡಿಸುವ ಭರವಸೆ ನೀಡಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾರೆ. ಆರು ತಿಂಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಉದ್ಯೋಗವೂ ಇಲ್ಲ, ಕೊಟ್ಟ ಹಣವನ್ನೂ ವಾಪಸ್ ನೀಡಿಲ್ಲ ಎಂದು ಅಭ್ಯರ್ಥಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉದ್ಯೋಗ ಕೊಡಿಸುವುದಾಗಿ 20 ಮಂದಿಯಿಂದ ಹಣ ಪಡೆದು ವಂಚನೆ ಮಾಡಿದ್ದಾರೆ. ಕೆಲವರಿಂದ ರೂ. 3 ಲಕ್ಷದಿಂದ ರೂ. 4 ಲಕ್ಷ ಪಡೆದಿದ್ದಾರೆ. ಉದ್ಯೋಗ ಕೊಡಿಸುವ ಸಂಬಂಧ ಒಪ್ಪಂದ ಪತ್ರವನ್ನೂ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಕಂಪನಿ ಸಿಬ್ಬಂದಿ ಸರಿಯಾದ ಸ್ಪಂದಿಸುತ್ತಿಲ್ಲ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವ್ಯವಸ್ಥಾಪಕ ಶರತ್ ನನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ದುಬೈನಲ್ಲಿರುವ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಕಳುಹಿಸಲಾಗಿದೆ. ಪೋಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡು, ಹಣ ಪಾವತಿಸಿಕೊಂಡಿದ್ದಾರೆ. ಐವರಿಂದ ಅಂದಾಜು ರೂ. 40 ಲಕ್ಷ ರೂ ಪಡೆದುಕೊಂಡು ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.