ಮೈಸೂರು: ಕರ್ನಾಟಕದ ಐದು ಮಹಾ ನಗರ ಪಾಲಿಕೆಗಳಿಗೆ ಚುನಾವಣೆಗೆ ಮುಹೂರ್ತ ಕೂಡಿಬಂದ ಹಾಗಿದೆ. ಈ ವರ್ಷದಲ್ಲೇ ರಾಜ್ಯದ ಐದು ಮಹಾ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುತ್ತೇವೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ ಎಸ್ ಸಂಗ್ರೇಶಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟರೆ ಸರಿ. ಕೊಡದೆ ಇದ್ದಲ್ಲಿ ಹೈಕೋರ್ಟ್ ಮೊರೆ ಹೋಗಿ ಹಳೆ ಮೀಸಲಾತಿ ಅನ್ವಯ ಈ ವರ್ಷವೇ ಚುನಾವಣೆ ನಡೆಸುತ್ತೇವೆ. ಆದಷ್ಟು ಬೇಗ ಮಹಾನಗರ ಪಾಲಿಕೆಗಳ ಮೀಸಲಾತಿ ಕೊಡುವಂತೆ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದೇವೆ. ಐದು ಮಹಾ ನಗರ ಪಾಲಿಕೆಗಳಲ್ಲೂ ಮತದಾರರ ಪಟ್ಟಿ ಸಿದ್ದವಾಗಿದೆ. ಈ ವರ್ಷದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಮಾಡಲು ಚುನಾವಣಾ ಆಯೋಗ ಸಿದ್ಧವಾಗಿದೆ. ಮೈಸೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಮಂಗಳೂರು ಐದು ಮಹಾ ನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದರು.