RCB ಮತ್ತು RR ನಡುವೆ ಇಂದು ಎಲಿಮಿನೇಟರ್‌ ಪಂದ್ಯ: ಗೆಲ್ಲುವ ಹಾಟ್‌ ಫೇವರಿಟ್‌ ಯಾರು ಗೊತ್ತೆ?

Most read

ಅಹಮದಾಬಾದ್: ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ತಲುಪಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ( Royal Challengers Bengaluru ) ಮತ್ತು ಸತತ ನಾಲ್ಕು ಸೋಲುಗಳಿಂದ ಜರ್ಝರಿತವಾಗಿರುವ ರಾಜಸ್ತಾನ್‌ ರಾಯಲ್ಸ್‌ ( Rajastan Royals ) ನಡುವೆ ಇಂದು ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಸೋಲುವ ತಂಡ ಪಂದ್ಯಾವಳಿಯಿಂದ ಹೊರಕ್ಕೆ ನಡೆಯಲಿದೆ.

ಇಂದು ಗೆಲುವಿನ ಗೆರೆ ದಾಟುವ ತಂಡ ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ( Qualifier 2 ) ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ( SunRisers Hyderabad ) ವಿರುದ್ಧ ಸೆಣೆಸಲಿದೆ. SRH ತಂಡ ನಿನ್ನೆ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಹೀನಾಯವಾಗಿ ಸೋತಿದ್ದು, ಶುಕ್ರವಾರದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಇಂದು RCB ಮತ್ತು RR ನಡುವೆ ನಡೆಯುವ ಪಂದ್ಯದಲ್ಲಿ ನಿಸ್ಸಂಶಯವಾಗಿ RCB ತಂಡವೇ ಗೆಲ್ಲುವ ಫೇವರಿಟ್‌ ಆಗಿದೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲ ವಿಭಾಗಗಳಲ್ಲೂ RCB ಅದ್ಭುತ ಲಯದಲ್ಲಿದೆ. ಪಂದ್ಯಾವಳಿಯ ಮೊದಲಾರ್ಧದಲ್ಲಿ ಗೆಲುವಿನ ಸರಮಾಲೆಯನ್ನೇ ಧರಿಸಿದ ರಾಜಸ್ತಾನ ತಂಡ ಕೊನೆಯ ಹಂತದಲ್ಲಿ ನಾಲ್ಕು ಸತತ ಸೋಲಿನಿಂದ ಕಂಗಾಲಾಗಿ ಹೋಗಿದೆ. ರಾಜಸ್ತಾನ ತಂಡದ ಕೊನೆಯ ಲೀಗ್‌ ಹಂತದ  ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು.

ರಾಜಸ್ತಾನ ರಾಯಲ್ಸ್‌ ತಂಡದ ಜೊತೆ ಈಗ ಜೋಸ್‌ ಬಟ್ಲರ್‌ ಇಲ್ಲ, ಅವರು ವಿಶ್ವಕಪ್‌ ತಯಾರಿ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ತಂಡ ಗೆಲ್ಲಬೇಕೆಂದರೆ ಸ್ಫೋಟಕ ಆಟಗಾರ ಯಶಸ್ವಿ ಜೈಸ್ವಾಲ್‌ ಸಿಡಿದೇಳಬೇಕು. ಈ ಪಂದ್ಯಾವಳಿಯಲ್ಲಿ ಯಶಸ್ವಿ ಜೈಸ್ವಾಲ್‌ (348 ರನ್‌, ಒಂದು ಶತಕ) ನಿರೀಕ್ಷೆಯಂತೆ ಆಡಿಲ್ಲ. ಆದರೂ ಈ ಆಟಗಾರ ಪಿಚ್‌ ಗೆ ಕುದುರಿಕೊಂಡರೆ ಎದುರಾಳಿಗಳ ಯೋಜನೆಗಳನ್ನು ತಲೆಕೆಳಗು ಮಾಡಬಲ್ಲರು. ನಾಯಕ ಸಂಜು ಸ್ಯಾಮ್ಸನ್‌ (504 ರನ್‌ ) ಮತ್ತು ರಿಯಾನ್ ಪರಾಗ್‌ (531) ಉತ್ತಮ ಫಾರಂ ನಲ್ಲಿದ್ದಾರೆ. ಆದರೂ ಯಶಸ್ವಿ ಜೈಸ್ವಾಲ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಆರ್‌ ಸಿಬಿ ತಂಡದ ಕಥೆಯೇ ಬೇರೆ. ಅಲ್ಲಿ ಎಲ್ಲ ಆಟಗಾರರೂ ಲಯಕ್ಕೆ ಮರಳಿದ್ದಾರೆ. ಪಂದ್ಯಾವಳಿಯ ಮೊದಲಾರ್ಧದಲ್ಲಿ ವಿರಾಟ್‌ ಕೊಹ್ಲಿಯ ಮೇಲೇ ಹೆಚ್ಚಿನ ಭಾರ ಇತ್ತು. ಆದರೆ ನಂತರದಲ್ಲಿ ಎಲ್ಲರೂ ಹೊಡಿಬಡಿ ಆಟವಾಡುತ್ತಿದ್ದಾರೆ. ಫಾಪ್‌ ಡುಪ್ಲೆಸಿ ಮತ್ತು ವಿರಾಟ್‌ ಕೊಹ್ಲಿ ಉತ್ತಮ ಆರಂಭ ನೀಡಿದರೆ ಬೆನ್ನಲ್ಲೇ ರಜತ್‌ ಪಾಟಿದಾರ್‌, ಕ್ಯಾಮರೂನ್‌ ಗ್ರೀನ್‌ ಮಧ್ಯಮ ಕ್ರಮಾಂಕದ ಬೌಲರ್‌ ಗಳ ನೀರಿಳಿಸುತ್ತಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ ವೆಲ್‌ ಕೂಡ ಚೆನ್ನೈ ವಿರುದ್ಧ ಪಂದ್ಯದಲ್ಲಿ ಮಿಂಚಿದ್ದು ಅವರಿಂದಲೂ ಪಂದ್ಯ ಗೆಲ್ಲಿಸುವ ಇನ್ನಿಂಗ್ಸ್‌ ನಿರೀಕ್ಷಿಸಬಹುದಾಗಿದೆ. ಕೆಳಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಇದ್ದಾರೆ ಎಂಬ ಧೈರ್ಯ ಅಗ್ರಕ್ರಮಾಂಕದ ಬ್ಯಾಟ್ಸ್‌ ಮನ್‌ ಗಳ ಶಕ್ತಿಯನ್ನು ಹೆಚ್ಚಿಸಿದೆ.

ರಾಜಸ್ತಾನ ತಂಡದ ಬೌಲಿಂಗ್‌ ವಿಭಾಗ ಆವೇಶ್‌ ಖಾನ್‌, ಕುಲದೀಪ್‌ ಸೇನ್‌, ಆರ್‌ ಅಶ್ವಿನ್‌, ಸಂದೀಪ್‌ ಶರ್ಮಾ, ಯಜುವೇಂದ್ರ ಚಾಹಲ್‌ ಅವರನ್ನು ನಂಬಿಕೊಂಡಿದೆ. RCB ಬ್ಯಾಟಿಂಗ್‌ ಕಟ್ಟಿಹಾಕಲು ಈ ಬೌಲರ್‌ ಗಳು ಪವಾಡದಂಥ ಪ್ರದರ್ಶನ ಮಾಡಬೇಕಿದೆ. ಇನ್ನು ಆರ್‌ ಸಿಬಿ ಬೌಲಿಂಗ್‌ ಬಲಿಷ್ಠವಾಗಿಯೇ ಇದೆ. ಮಹಮದ್‌ ಸಿರಾಜ್‌, ಲಾಕಿ ಫರ್ಗ್ಯೂಸನ್‌ ಮಿಂಚುತ್ತಿದ್ದಾರೆ. ಯಶ್‌ ದಯಾಳ್‌ ವಿಕೆಟ್‌ ತೆಗೆಯುವ ಕಲೆಯನ್ನು ಕಲಿತಿದ್ದಾರಲ್ಲದೆ, ಕೊನೆಯ ಓವರ್‌ ಗಳಲ್ಲಿ ತನ್ನ ಮಂದಗತಿಯ ಚೆಂಡುಗಳ ಮೂಲಕ ಬ್ಯಾಟ್ಸ್‌ ಮನ್‌ ಗಳನ್ನು ಕಟ್ಟಿಹಾಕುತ್ತಿದ್ದಾರೆ. ಕರಣ್‌ ಶರ್ಮಾ ಮತ್ತು ಸ್ವಪ್ನಿಲ್‌ ಸಿಂಗ್‌ ಕರಾರುವಕ್‌ ಸ್ಪಿನ್‌ ದಾಳಿ ಎಸಗುತ್ತಿದ್ದಾರೆ. ಇನ್ನು ಕ್ಯಾಮರೂನ್‌ ಗ್ರೀನ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ ವೆಲ್‌ ಅವರ ಬೌಲಿಂಗ್‌ ಬಲವೂ ತಂಡಕ್ಕಿದೆ.

ಯಾವ ರೀತಿಯಿಂದ ನೋಡಿದರೂ ಇಂದು ಗೆಲ್ಲಬಹುದಾದ ನೆಚ್ಚಿನ ತಂಡ RCB ಆಗಿದೆ ಎಂದು ಕ್ರಿಕೆಟ್‌ ಪಂಡಿತರು ಊಹಿಸುತ್ತಿದ್ದಾರೆ. ಅಹಮದಾಬಾದ್‌ ನಲ್ಲಿ ಸಂಜೆ 7.30 ಕ್ಕೆ ನಡೆಯುವ ಈ ಪಂದ್ಯದಲ್ಲಿ ಗೆದ್ದ ತಂಡ ಶುಕ್ರವಾರ ಕ್ವಾಲಿಫೈಯರ್‌ ಪಂದ್ಯದಲ್ಲಿ KKR ಎದುರಿಸಲಿದೆ.

More articles

Latest article