ಚುನಾವಣಾ ಬಾಂಡ್ಗಳನ್ನು (Electoral Bonds) ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಸಂಸ್ಥೆ- ವ್ಯಕ್ತಿಗಳ ಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಒ್ರಕರಣ ಎದುರಿಸುತ್ತಿರುವ ಹಾಗೂ ಲಾಟರಿ ಕಿಂಗ್ ಎಂದೇ ಖ್ಯಾತವಾಗಿರುವ ಮಾರ್ಟಿನಿ ಅವರ ಕೊಯಮತ್ತೂರು ಮೂಲದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈ.ಲಿ. ಸಂಸ್ಥೆಯು ಎಲೆಕ್ಟೋರಲ್ ಬಾಂಡ್ಗಳ ಮೂಲಕ ಗರಿಷ್ಠ 1,368 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಇವರ ಹೆಸರು ಸ್ಯಾಂಟಿಯಾಗೊ ಮಾರ್ಟಿನ್. ಇವರು ನಡೆಸುತ್ತಿರುವ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯಿಂದ ಹೆಚ್ಚಿನ ಮೊತ್ತದ ಚುನಾವಣೆ ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆಗಳನ್ನು ನೀಡಿದೆ.
ಫ್ಯೂಚರ್ನ ವೆಬ್ಸೈಟ್ ಪ್ರಕಾರ, ಮಾರ್ಟಿನ್ 13 ನೇ ವಯಸ್ಸಿನಲ್ಲಿ ಲಾಟರಿ ವ್ಯವಹಾರವನ್ನು ಪ್ರಾರಂಭಿಸಿದರು. ಕಂಪನಿಯು 13 ರಾಜ್ಯಗಳಲ್ಲಿದ್ದು, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಸೇರಿವೆ.
ಯಾರು ಈ ಮಾರ್ಟಿನ್? ಯಾವ ಪ್ರಕರಣವಿದೆ ಈತನ ಮೇಲೆ?
ಸ್ಯಾಂಟಿಯಾಗೊ ಮಾರ್ಟಿನ್ ಮ್ಯಾನ್ಮಾರ್ನ ಯಾಂಗೋನ್ನಲ್ಲಿ ಕಾರ್ಮಿಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂದು ಅವರ ಚಾರಿಟೇಬಲ್ ಜಾಲತಾಣ ಹೇಳುತ್ತದೆ. 1988ರಲ್ಲಿ ಅವರು ಭಾರತಕ್ಕೆ ಬಂದರು ಮತ್ತು ತಮಿಳುನಾಡಿನಲ್ಲಿ ಲಾಟರಿ ವ್ಯಾಪಾರವನ್ನು ಪ್ರಾರಂಭಿಸಿದರು. ಈಶಾನ್ಯ ಭಾರತಕ್ಕೆ ತೆರಳುವ ಮೊದಲು ಕರ್ನಾಟಕ ಮತ್ತು ಕೇರಳದಲ್ಲಿ ವ್ಯವಹಾರವನ್ನು ವಿಸ್ತರಿಸಿದರು.
ಮಾರ್ಟಿನ್ ಆಲ್ ಇಂಡಿಯಾ ಫೆಡರೇಶನ್ ಆಫ್ ಲಾಟರಿ ಟ್ರೇಡ್ ಮತ್ತು ಅಲೈಡ್ ಇಂಡಸ್ಟ್ರೀಸ್ನ ಅಧ್ಯಕ್ಷರೂ ಆಗಿದ್ದಾರೆ. ಇದು ಭಾರತದಲ್ಲಿ ಲಾಟರಿ ವ್ಯಾಪಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ತೊಡಗಿರುವ ಸಂಸ್ಥೆ. ಅವರ ಉದ್ಯಮ, ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಇಂಡಿಯಾ ಪ್ರೈ. ಪ್ರತಿಷ್ಠಿತ ವಿಶ್ವ ಲಾಟರಿ ಅಸೋಸಿಯೇಷನ್ನ ಆನ್ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳು ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಕ್ಷೇತ್ರಕ್ಕೆ ವಿಸ್ತರಿಸುತ್ತಿದೆ ಎಂದು ವೆಬ್ಸೈಟ್ ಹೇಳಿಕೊಂಡಿದೆ.
ಅಕ್ಟೋಬರ್ 2023 ರಲ್ಲಿ, ಆದಾಯ ತೆರಿಗೆ ಇಲಾಖೆಯು ಮಾರ್ಟಿನ್ ಮತ್ತು ಫ್ಯೂಚರ್ ಗೇಮಿಂಗ್ನ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ತನಿಖೆಯನ್ನು 2002 ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ ಅಡಿಯಲ್ಲಿ ಮಾಡಲಾಗಿದೆ. ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಅವರ ಸಹಚರರು 2009-10 ರ ನಡುವೆ ಬಹುಮಾನ ವಿಜೇತ ಟಿಕೆಟ್ ಕ್ಲೈಮ್ಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ಸುಮಾರು 910 ಕೋಟಿ ರೂಪಾಯಿಗಳ ಲಾಭವನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂದು ಕಂಡುಬಂದಿದೆ.
ಏಪ್ರಿಲ್ 2022 ರಲ್ಲಿ, ಜಾರಿ ನಿರ್ದೇಶನಾಲಯವು ಫ್ಯೂಚರ್ ಗೇಮಿಂಗ್ ಮತ್ತು ಅದರ ವೈಯಕ್ತಿಕ ಲಾಟರಿ ಟಿಕೆಟ್ ವಿತರಕರು ಕಾನೂನುಬಾಹಿರವಾಗಿ ಮಾರಾಟವಾಗದ ಲಾಟರಿ ಟಿಕೆಟ್ಗಳನ್ನು ಹೊಂದಿದ್ದಾರೆ ಮತ್ತು ಆ ಟಿಕೆಟ್ಗಳಿಗೆ ಹೆಚ್ಚಿನ ಬೆಲೆ ನಿದಿಪಡಿಸುತ್ತಿದ್ದಾರೆ ಎಂದು ಆರೋಪಿಸಿತ್ತು.
ಲಾಟರಿ ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಉಡುಗೊರೆಗಳು ಮತ್ತು ಪ್ರೋತ್ಸಾಹಕಗಳಿಗೆ ಬಳಸಲಾಗಿದೆ ಮತ್ತು ಕಂಪನಿಯು 2014 ಮತ್ತು 2017 ರ ನಡುವೆ ಸುಮಾರು 400 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಕ್ಲೈಮ್ ಮಾಡಿದೆ ಎಂದು ಇಡಿ ಆ ಸಮಯದಲ್ಲಿ ಹೇಳಿತ್ತು.
ಇದಲ್ಲದೆ, ಜಾರಿ ನಿರ್ದೇಶನಾಲಯವು ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ್ ಮತ್ತು ಅವರ ಆಸ್ತಿಯ ಮೇಲೆ ಈ ವರ್ಷದ ಮಾರ್ಚ್ನಲ್ಲಿಯೇ ಶೋಧ ಕಾರ್ಯಾಚರಣೆಯನ್ನು ಸಹ ನಡೆಸಿತು. ತಮಿಳುನಾಡಿನ ಮರಳುಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 2019 ಮತ್ತು 2024ರ ನಡುವೆ ರಾಜಕೀಯ ಪಕ್ಷಗಳಿಗೆ ₹1368 ಕೋಟಿ ದೇಣಿಗೆ ನೀಡಿದೆ. ಯಾವ ಪಕ್ಷಗಳಿಗೆ ನೀಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.