Sunday, September 8, 2024

ಚುನಾವಣಾ ಬಾಂಡ್ ಯೋಜನೆ ಅಸಂವಿಧಾನಿಕ : ಸುಪ್ರೀಂ ಕೋರ್ಟ್ ತೀರ್ಪು

Most read

ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್‌ ಸ್ಕಿಮ್ ಅನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅಧ್ಯಕ್ಷತೆಯ ಐವರು ನ್ಯಾಯಮೂರ್ತಿ ಪೀಠವು ಈ ಕುರಿತು ಒಮ್ಮತದ ತೀರ್ಪು ನೀಡಿ ಚುನಾವಣಾ ಬಾಂಡ್ ಯೋಜನೆಯನ್ನು ಅಸಿಂಧುಗೊಳಿಸಿದೆ.
ತೀರ್ಪು ನೀಡಿರುವ ನ್ಯಾಯ ಪೀಠದ ಇತರ ಸದಸ್ಯರುಗಳೆಂದರೆ, ನ್ಯಾ. ಸಂಜಿವ್ ಕನ್ನ, ನ್ಯಾ. ಬಿ ಆರ್ ಗಾವಾಯಿ, ನ್ಯಾ ಜೆ ಬಿ ಪಾರ್ದಿವಾಲ ಮತ್ತು ನ್ಯಾ. ಮನೋಜ್ ಮಿರ್ಶ.

ಈ ದೇಣಿಗೆಗಳನ್ನು ಅನಾಮಧೇಯಗೊಳಿಸಲು ಜನಪ್ರತಿನಿಧಿ ಕಾಯ್ದೆಗೆ ಹಾಗು ಆದಾಯ ತೆರಿಗೆ ಕಾಯ್ದೆಗೆ ತರಲಾಗಿದ್ದ ತಿದ್ದಪಡಿಗಳನ್ನು ಸಹ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅನಾಮಧೇಯ ರೂಪದ ಚುನಾವಣಾ ಬಾಂಡ್‌ಗಳು ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದ್ದು ಸಂವಿಧಾನದ 19(1)(a) ಅಡಿಯಲ್ಲಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಚುನಾವಣಾ ಬಾಂಡುಗಳನ್ನು ಬಿಡುಗಡೆ ಮಾಡುವ (ಭಾರತೀಯ ಸ್ಟೇಟ್ಸ್ ಬ್ಯಾಂಕ್) ರಾಜಕೀಯ ಪಕ್ಷಗಳು ಪಡೆದುಕೊಂಡಿರುವ ಚುನಾವಣಾ ಬಾಂಡುಗಳ ‌ಎಲ್ಲಾ‌ ವಿವರಗಳನ್ನು ಬಿಡುಗಡೆ ಮಾಡಬೇಕು ಎಂದು ಆದೇಶಿಸಿರುವ ಸುಪ್ರೀಂ ಕೋರ್ಟ್ ಈ ವಿವರಗಳನ್ನು ಮಾರ್ಚ್ 6 ರ ಒಳಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದೂ ತಿಳಿಸಿದೆ. ಹಾಗೆಯೇ ಮಾರ್ಚ 13 ರ ಒಳಗಾಗಿ‌ ಚುನಾವಣಾ ‌ಆಯೋಗವು ಈ ಎಲ್ಲ ವಿವರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಬೇಕು ಎಂದು ಆದೇಶಿಸಿದೆ.

ಈ ಯೋಜನೆಯು ಅಧಿಕಾರದಲ್ಲಿರುವ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ʻʻಆರ್ಥಿಕ ಅಸಮಾನತೆಯು ಬೇರೆ ಬೇರೆಯ ರಾಜಕೀಯ ನಡವಳಿಕೆಗೆ ಕಾರಣವಾಗುತ್ತದೆ. ಮಾಹಿತಿಯನ್ನು ತಡೆಹಿಡಿಯುವುದು, ನೀತಿ‌ ನಿರೂಪಣೆ ಮೇಲೆ ಪ್ರಭಾವ ಬೀರುವ ಜೊತೆಗೆ ಅಧಿಕಾರದಲ್ಲಿರುವ ಪಕ್ಷದಿಂದ ಲಾಭ ಪಡೆಯಲು ದಾರಿಮಾಡುತ್ತದೆ” ಎಂದು‌ ತೀರ್ಪಿನಲ್ಲಿ ತಿಳಿಸಲಾಗಿದೆ.

ಸುರ್ಪೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಪು ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ. 2017 ರಲ್ಲಿ ಈ ಚುನಾವಣಾ ಬಾಂಡ್ ಗಳನ್ನು ಹಣಕಾಸು ಕಾಯ್ದೆಯ ಮೂಲಕ ಜಾರಿಗೊಳಿಸಲಾಗಿತ್ತು. ಈ ಕಾಯಿದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅನೇಕ ಅರ್ಜಿಗಳು‌ ಸಲ್ಲಿಕೆ ಆಗಿದ್ದವು. ಕೇಂದ್ರ ಸರ್ಕಾರವು ಈ ಚುನಾವಣಾ ಬಾಂಡ್‌ ‌ಯೋಜನೆ ಪಾರದರ್ಶಕವಾಗಿದೆ ಎಂದು ಅಫಿಡೆವಿಟ್ ಸಲ್ಲಿಸಿತ್ತು. ಈ ಯೋಜನೆಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಮಾರ್ಚ 21 ರಲ್ಲಿ ಸುಪ್ರೀಂ ಕೋರ್ಟ್ ರದ್ದು ಪಡಿಸಿತ್ತು.

More articles

Latest article