ಹೊಸದಿಲ್ಲಿ: ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿರುವ ಚುನಾವಣಾ ಬಾಂಡ್ (Electoral Bonds) ಗಳಿಗೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಗಳು ಒಂದರ ಮೇಲೊಂದರಂತೆ ಬಯಲಾಗುತ್ತಿದ್ದು, ಇದುವರೆಗೆ ಆಯೋಗ ಪ್ರಕಟಿಸಿರುವ ಮಾಹಿತಿಯಲ್ಲಿ ಮೂರನೇ ಅತಿದೊಡ್ಡ ಚುನಾವಣಾ ಬಾಂಡ್ ದಾನಿಯಾಗಿರುವ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ (qwik supply chain pvt ltd) ಹಿನ್ನೆಲೆ ಚರ್ಚೆಗೆ ಕಾರಣವಾಗಿದೆ.
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಒಟ್ಟು 410 ಕೋಟಿ ರುಪಾಯಿಗಳನ್ನು ಚುನಾವಣಾ ಬಾಂಡ್ ಗಳ ಮೂಲಕ ನೀಡಿದೆ. ಆಸಕ್ತಿ ಹುಟ್ಟಿಸುವ ವಿಷಯವೇನೆಂದರೆ ಸಂಸ್ಥೆಯ ಹಣಕಾಸು ದಾಖಲಾತಿಗಳನ್ನು ಗಮನಿಸಿದರೆ ಅದು ರಿಲಯನ್ಸ್ (Reliance) ಸಂಸ್ಥೆಯ ಜೊತೆ ಸಂಬಂಧ ಇಟ್ಟುಕೊಂಡಿರುವುದು ಬೆಳಕಿಗೆ ಬರುತ್ತದೆ.
2021-22ರಲ್ಲಿ ಈ ಸಂಸ್ಥೆ 360 ಕೋಟಿಗಳನ್ನು ಸಂಸ್ಥೆ ಚುನಾವಣಾ ಬಾಂಡ್ ಗಳಿಗಾಗಿ ಸುರಿದಿದೆ. ಆದರೆ ಇದೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ನಿವ್ವಳ ಲಾಭ ಕೇವಲ 21.72 ಕೋಟಿ ರುಪಾಯಿಗಳು! ತನ್ನ ಲಾಭಕ್ಕಿಂತ ಸರಿಸುಮಾರು 17 ಪಟ್ಟು ಹಣವನ್ನು ಯಾವುದಾದರೂ ಸಂಸ್ಥೆ ದಾನ ನೀಡಲು ಸಾಧ್ಯವೇ? 2023-24ರ ಆರ್ಥಿಕ ವರ್ಷದಲ್ಲೂ ಸಂಸ್ಥೆ 50 ಕೋಟಿ ರುಪಾಯಿಗಳನ್ನು ನೀಡಿದೆ.
ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೂರು ನಿರ್ದೇಶಕರನ್ನು ಹೊಂದಿದೆ. ವಿಪುಲ್ ಪ್ರಾಣ್ ಲಾಲ್ ಮೆಹ್ತಾ, ಶ್ರೀಧರ್ ತಿಟ್ಟಿ ಮತ್ತು ತಪಸ್ ಮಿತ್ರ ಈ ಮೂವರು ನಿರ್ದೇಶಕರು. ಇವರ ಪೈಕಿ ಮಿತ್ರ 26 ಕಂಪೆನಿಗಳಲ್ಲಿ ನಿರ್ದೇಶಕರಾಗಿದ್ದರೆ, ಮೆಹ್ತಾ ಏಳು ಎಂಟು ಕಂಪೆನಿಗಳ ನಿರ್ದೇಶಕರಾಗಿದ್ದಾರೆ.
ತಪಸ್ ಮಿತ್ರ ನಿರ್ದೇಶಕರಾಗಿರುವ 26 ಸಂಸ್ಥೆಗಳ ಪೈಕಿ ರಿಲಯನ್ಸ್ ಸಂಸ್ಥೆಗಳಾದ ರಿಲಯನ್ಸ್ ಈರೋಸ್ ಪ್ರೊಡಕ್ಷನ್ಸ್ ಎಲ್ ಎಲ್ ಪಿ, ಜಾಮನಗರ ಕಾಂಡ್ಲಾ ಪೈಪ್ ಲೈನ್ ಕಂಪೆನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳೂ ಸೇರಿವೆ. ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೋಂದಾಯಿತ ಕಚೇರಿ ಅಹಮದಾಬಾದ್ ನಲ್ಲಿ ಇದ್ದು, ಇದೇ ವಿಳಾಸದಲ್ಲಿ ರಿಲಯ್ಸ್ ಪೇಜಿಂಗ್ ಪ್ರೈವೇಟ್ ಲಿಮಿಟೆಡ್, ಜಾಮನಗರ ರಟ್ಲಮ್ ಪೈಪ್ ಲೈನ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಟ್ಯಾಂಕೇಜಸ್ ಪ್ರೈವೇಟ್ ಲಿಮಿಟೆಡ್, ರಿಲಯನ್ಸ್ ಆಯಿಲ್ ಅಂಡ್ ಪೆಟ್ರೋಲಿಯಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ!
ಕುತೂಹಲದ ವಿಷಯವೇನೇಂದರೆ ತಪಸ್ ಮಿತ್ರ ಅವರ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ತಮ್ಮನ್ನು ರಿಲಯನ್ಸ್ ಇಂಡಸ್ಟ್ರೀಸ್ ಪೈವೇಟ್ ಲಿಮಿಟೆಡ್ ನ ಹೆಡ್ ಆಫ್ ಅಕೌಂಟ್ಸ್ ಎಂದು ಹೇಳಿಕೊಂಡಿದ್ದಾರೆ.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ, ಐತಿಹಾಸಿಕ ತೀರ್ಪು ನೀಡಿ ಚುನಾವಣಾ ಬಾಂಡ್ ಸಂವಿಧಾನ ಬಾಹಿರ ಎಂದು ಹೇಳಿತ್ತು. 2017ರಲ್ಲಿ ಬಾಂಡ್ ಸ್ಕೀಮ್ ಆರಂಭಿಸಿದಾಗ ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಗೆ ಇದ್ದ ಪರಿಮಿತಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿತ್ತು. ಅಲ್ಲಿಯವರೆಗೆ ಯಾವುದೇ ಸಂಸ್ಥೆ ತನ್ನ ಆದಾಯದ 7.5 ಶೇ ಪಾಲಿಗಿಂತ ಹೆಚ್ಚು ಹಣವನ್ನು ದೇಣಿಗೆ ನೀಡುವಂತಿರಲಿಲ್ಲ.