ಬೆಂಗಳೂರು: ಚುನಾವಣಾ ಆಯೋಗ ನಿಷ್ಪಕ್ಷಪಾತ ಸಾಂವಿಧಾನಿಕ ಸಂಸ್ಥೆಯಾಗಿ ಉಳಿದಿಲ್ಲ. ಬದಲಾಗಿ ಚುನಾವಣೆಗಳನ್ನು ತಿರುಚುವ ಬಿಜೆಪಿಯ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಎಐಸಿಸಿ ಮುಖಂಡ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಪಾದಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಚುನಾವಣಾ ಆಯೋಗವನ್ನೇ ತನ್ನ ಹೊಸ ಅಸ್ತ್ರವನ್ನಾಗಿಸಿಕೊಂಡಿದೆ. ಮತದಾರರ ಹೆಸರುಗಳನ್ನು ಅಳಿಸಿ ಹಾಕಲು, ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಅಡಿಪಾಯವನ್ನೇ ಅಲುಗಾಡಿಸಲು ಸಾಧನವಾಗಿ ಬಳಸಿಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ನಾವು ನೋಡಿದ್ದು, ಕೇವಲ ಆರಂಭ. ಅದು ಕೇವಲ ದುರುಪಯೋಗವಲ್ಲ, ಇದು ಪೂರ್ವ ನಿಯೋಜಿತ ವಂಚನೆ ಎಂದು ಗುಡುಗಿದ್ದಾರೆ.
ಬಿಜೆಪಿ ಪ್ರತಿಯೊಬ್ಬ ಮತದಾರನ ಹೆಸರನ್ನು ಅಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇದು ಫಲಿತಾಂಶಗಳನ್ನೇ ಬದಲಿಸುವ ತಂತ್ರ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ರಕ್ಷಕನಾಗಬೇಕಿದ್ದ ಚುನಾವಣಾ ಆಯೋಗ, ಇಂದು ಭಾರತೀಯ ಪ್ರಜಾಪ್ರಭುತ್ವದ ಸಮಾಧಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಬಿಹಾರ ರಾಜ್ಯ ಒಂದರಲ್ಲೇ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ಇದು ಪ್ರಜಾಪ್ರಭುತ್ವದ ಮೇಲಿನ ದಬ್ಬಾಳಿಕೆಯಾಗಿದೆ. ಮತಪಟ್ಟಿಯಿಂದ ಕೈ ಬಿಡಲಾದ ಮತದಾರರಲ್ಲಿ ಹೆಚ್ಚಿನವರು ಬಡವರು, ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಮತ್ತು ಚುನಾವಣಾ ಆಯೋಗ ವಿರೋಧ ಪಕ್ಷಗಳ ವಿರೋಧಿಗಳಾಗಿದ್ದಾರೆ ಎಂದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಕೇವಲ 30 ನಿಮಿಷಗಳಲ್ಲಿ 70 ಲಕ್ಷ ಮತಗಳು ಚಲಾವಣೆಯಾಗಿವೆ. ಇದು ಮತದಾನವಲ್ಲ ಇದು ಡಿಜಿಟಲ್ ಹ್ಯಾಕಿಂಗ್. ಈ ವಿಷಯವನ್ನು ರಾಹುಲ್ ಗಾಂಧಿ ನೇರವಾಗಿ ಚುನಾವಣಾ ಆಯೋಗದ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆಯೂ ಇಲ್ಲ, ಉತ್ತರವೂ ಇಲ್ಲ. ಹೊಣೆಗಾರಿಕೆಯೂ ಇಲ್ಲ. ಆಯೋಗವು ಸಾಂವಿಧಾನಿಕ ಸಂಸ್ಥೆಯಂತೆ ವರ್ತಿಸದೆ, ಬಿಜೆಪಿಯ ಆದೇಶಕ್ಕೆ ತಲೆಬಾಗುವ ಹೇಡಿಯಂತೆ ವರ್ತಿಸುತ್ತಿದೆ ಎಂದು ಆಪಾದಿಸಿದರು.
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕೇವಲ 10 ನಿಮಿಷಗಳಲ್ಲಿ 65,000 ಮತಗಳು ಚಲಾವಣೆಯಾಗಿವೆ. ಇದು ಚುನಾವಣೆಯೇ ಅಥವಾ ವಂಚನೆಯೇ? 2019ರಿಂದ ಇದುವರೆಗೆ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ 27 ದೂರುಗಳನ್ನು ನೀಡಿದ್ದರೂ, ಒಂದೇ ಒಂದು ಆರೋಪದ ಮೇಲೆ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗ, ಇಡಿ, ಸಿಬಿಐ ಮತ್ತು ಐಟಿ ಇಲಾಖೆಗಳು ಬಿಜೆಪಿಯ ಗುರಾಣಿ ಮತ್ತು ಖಡ್ಗಗಳಾಗಿ ಬದಲಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಿಸಿದರು.