ಲೋಕಸಭಾ ಚುನಾವಣೆಯ ದಿನಾಂಕಗಳು ನಿಗದಿಯಾಗಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಅಂದರೆ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ನೀತಿಸಂಹಿತೆಯೂ ಘೋಷಣೆಯಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನೂ ಘೋಷಿಸಿವೆ.
ನಾಳೆಯೇ ಚುನಾವಣೆ ನಡೆದರೆ ನಿಮ್ಮ ಮತ ಯಾರಿಗೆ? ಯಾವ ಪಕ್ಷಕ್ಕೆ ನಿಮ್ಮ ಒಲವು ಎಂಬ ಪ್ರಶ್ನೆಯೊಂದಿಗೆ ಇತರೆ ಪ್ರಶ್ನೆಗಳನ್ನು ಇಟ್ಟುಕೊಂಡು ಈ ದಿನ.ಕಾಂ ನಡೆಸಿರುವ ಮೆಗಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು 17 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು ಬಿಜೆಪಿ ಪಕ್ಷವು 11 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಕಂಡುಬಂದಿದೆ.
ಈ ದಿನ.ಕಾಂ ತಾನು ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಸಿದ ಮೆಗಾ ಸರ್ವೇ ಇಡೀ ದೇಶದ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಅದು ತಿಳಿಸಿದ ಫಲಿತಾಂಶ ಇತರ ಎಲ್ಲಾ ಫಲಿತಾಂಶಗಳಿಗಿಂತಲೂ ಹೆಚ್ಚು ಕರಾರುವಕ್ಕಾಗಿತ್ತು. ಇದಕ್ಕೆ ಕಾರಣ ಅದು ಅನುಸರಿಸಿದ್ದ ವೈಜ್ಞಾನಿಕ ವಿಧಾನ ಮತ್ತು ಅತಿದೊಡ್ಡ ಸ್ಯಾಂಪಲ್ ಗಾತ್ರ.
ಈಗ ಲೋಕಸಭಾ ಚುನಾವಣೆಗಳು ಘೋಷಣೆಯಾಗುವ ಹಾಗೂ ಯಾವುದೇ ಕ್ಷೇತ್ರದ ಅಭ್ಯರ್ಥಿಗಳು ಘೋಷಣೆಯಾಗುವ ಮುನ್ನ ಈದಿನ.ಕಾಂ ನಡೆಸಿರುವ ಸಮೀಕ್ಷೆಯ ಫಲಿತಾಂಶಗಳ ಕುರಿತು ಈ ದಿನ.ಕಾಂನ ಡಾ.ವಾಸು ಹೆಚ್ ವಿ ಮತ್ತು ಭರತ್ ಮಾಹಿತಿ ಹಂಚಿಕೊಂಡಿದ್ದಾರೆ.
ಈ ದಿನ.ಕಾಂ ನಡೆಸಿದ ಸಮೀಕ್ಷೆಯ ಮುಖ್ಯಾಂಶಗಳು
- ಒಟ್ಟು ಸ್ಯಾಂಪಲ್ ಸೈಜ್ (ಸಮೀಕ್ಷೆಗೆ ಒಳಪಡಿಸಿದ ಜನರ ಸಂಖ್ಯೆ)- 52, 678
- ಸಮೀಕ್ಷೆ ನಡೆಸಿದ ಅವಧಿ – ಫೆ.15ರಿಂದ ಮಾರ್ಚ್ 5, 2024-03-19
- ಸಮೀಕ್ಷೆಯ ಆಧಾರದಲ್ಲಿ ಕಾಂಗ್ರೆಸ್ ಪಡೆಯಲಿರುವ ಮತಪ್ರಮಾಣ (ವೋಟ್ ಶೇರ್) 43.77%,
- ಬಿಜೆಪಿ –ಜೆಡಿಎಸ್ ಪಡೆಯಲಿರುವ ಮತಪ್ರಮಾಣ- 42.35%.
- ಕಾಂಗ್ರೆಸ್ ಪರವಾಗಿ ಹೆಚ್ಚು ಒಲವು ತೋರಿದ ಕ್ಷೇತ್ರಗಳ ಸಂಖ್ಯೆ- 17
- ಬಿಜೆಪಿ ಪರವಾಗಿ ಹೆಚ್ಚು ಒಲವು ತೋರಿಸಿದ ಕ್ಷೇತ್ರಗಳ ಸಂಖ್ಯೆ- 11
- ಕಾಂಗ್ರೆಸ್ ಮುಂದಿದ್ದು ತೀವ್ರ ಹಣಾಹಣಿ ಕಂಡುಬಂದಿರುವ ಕ್ಷೇತ್ರಗಳು -06
- ಬಿಜೆಪಿ ಮುಂದಿದ್ದು ತೀವ್ರ ಹಣಾಹಣಿ ಕಂಡುವ ಬಂದಿರುವ ಕ್ಷೇತ್ರಗಳು- 01
- ನರೇಂದ್ರ ಮೋದಿ ಅಧಿಕಾರ ನಡೆಸಿದ ಕಳೆದ 10 ವರ್ಷಗಳಲ್ಲಿ ಬೆಲೆ ಏರಿಕೆ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದವರ ಸಂಖ್ಯೆ- 76%
- ಇದೇ ಅವಧಿಯಲ್ಲಿ ಬಡವ – ಶ್ರೀಮಂತರ ನಡುವೆ ಅಂತರ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟವರ ಸಂಖ್ಯೆ- 42%,
- ನರೇಂದ್ರ ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದವರ ಸಂಖ್ಯೆ- 45%,
- ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿದೆ ಎಂದವರ ಸಂಖ್ಯೆ- 53%
- ವಿಶ್ವಮಟ್ಟದಲ್ಲಿ ಭಾರತದ ಇಮೇಜು ಜಾಸ್ತಿಯಾಗಿದೆ ಎಂದವರ ಸಂಖ್ಯೆ- 47%