ಶಿಕ್ಷಣಕ್ಕೆ ಶೇ.16, ಆರೋಗ್ಯಕ್ಕೆ ಶೇ.4.2, ​ಬೆಂಗಳೂರಿಗೆ 7000 ಕೋಟಿ ರೂ ಹಂಚಿಕೆ;ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು:ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು. ಅವರ ಉತ್ತರದ ಪ್ರಮುಖ ಅಂಶಗಳು ಹೀಗಿವೆ. ಅರಗ ಜ್ಞಾನೇಂದ್ರ ರವರು ಆಯವ್ಯಯ ಪುಸ್ತಕದಲ್ಲಿ ಬಂಡವಾಳ ವೆಚ್ಚವನ್ನು ಕೆಲವೆಡೆ 71,336 ಕೋಟಿ ರೂ. ಮತ್ತು ಕೆಲವೆಡೆ 83,200 ಕೋಟಿ ರೂ. ಗಳು ಎಂದು ಹೇಳಿ ಸದನಕ್ಕೆ ಸರಿಯಾದ ಅಂಕಿ ಅಂಶಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಾಸ್ತವವೇನೆಂದರೆ, 2025-26 ನೇ ಸಾಲಿನಲ್ಲಿ ಬಂಡವಾಳ ಯೋಜನೆಗಳಿಎ ಒಟ್ಟು 83,200 ಕೋಟಿ ರೂ. ಒದಗಿಸಿದ್ದೇವೆ. ಇದರಲ್ಲಿ 71,336 ಕೋಟಿ ರೂ. ಸಂಚಿತ ನಿಧಿಯಿಂದ ಹಾಗೂ 11,864 ಕೋಟಿ ರೂ.  ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಬಂಡವಾಳ ಯೋಜನೆಗಳಿಗೆ ಉದ್ದೇಶಿಸಿರುವ ರಿಸರ್ವ್ ಫಂಡ್‌ಗಳಿಂದ ಭರಿಸಲಾಗುತ್ತದೆ.

 ಅರವಿಂದ ಬೆಲ್ಲದ್ ಅವರು ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆಯಾಗಿರುತ್ತದೆ ಎಂದಿದ್ದಾರೆ. ವಿರೋಧ ಪಕ್ಷದವರು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನಿಡಿರುವ ಅನುದಾನಗಳನ್ನು ಮಾತ್ರ ಪರಿಗಣಿಸಿದ್ದಾರೆ. ಆದರೆ ನಮ್ಮ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ವಸತಿ ಶಾಲೆಗಳು, ವಿದ್ಯಾರ್ಥಿ ವೇತನ, ವೈದ್ತಕೀಯ ಶಿಕ್ಷಣ, ಕೃಷಿ, ತೋಟಗಾರಿಕೆ ಕಾಲೇಜುಗಳು ಸೇರಿದಂತೆ 2025-26 ರಲ್ಲಿ 65043 ಕೋಟಿ ರೂ. ಗಳನ್ನು ಒದಗಿಸಿದೆ. ಒಟ್ಟಿ ವೆಚ್ಚದಲ್ಲಿ ಶೇ.16 ರಷ್ಟು ಹಂಚಿಕೆಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದೇವೆ.

ಬಂಡವಾಳ ವೆಚ್ಚಗಳಿಗೆ ದಾಖಲೆ ಪ್ರಮಾಣದಲ್ಲಿ 83,200 ಕೋಟಿ ರೂ.ಗಳನ್ನು 2025-26ನೇ ಸಾಲಿಗೆ ಒದಗಿಸಿದೆ. ಇದು 2024-25ನೇ ಸಾಲಿನಲ್ಲಿ ಕೊಟ್ಟಿದ್ದ 56,495 ಕೋಟಿ ರೂ. ಗಳಿಗೆ ಹೋಲಿಸಿದರೆ ಶೇ.47.3 ರಷ್ಟು ಹೆಚ್ಚಾಗುತ್ತದೆ. ಜಿ.ಎಸ್.ಡಿ.ಪಿ.ಯಲ್ಲಿ ಬಂಡವಾಳ ವೆಚ್ಚದ ಪಾಲು ಶೇ.2.32 ರಷ್ಟು ಆಗುತ್ತದೆ.

 ​ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 3 ವರ್ಷಗಳಲ್ಲಿ 54,000 ಕೋಟಿ ಒದಗಿಸಿದೆ.  120 ಕಿ.ಮೀ. ಉದ್ದದ ಫ್ಲೈ ಓವರ್, ಗ್ರೇಡ್ ಸೆಪರೇಟರ್, 320 ಕಿಮೀ ಉದ್ದದ ಹೊಸ ರಸ್ತೆ, ಡಬಲ್ ಡೆಕ್ಕರ್ ರಸ್ತೆಗಳು, 27,000 ಕೋಟಿ ರೂ.ವೆಚ್ಚದಲ್ಲಿ ಬ್ಯುಸಿನೆಸ್ ಕಾರಿಡಾರ್, ಭೂ-ಸುರಂಗ ರಸ್ತೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ. ರಾಜ್ಯ ಸರ್ಕಾರ ಈ ವರ್ಷ 3,000 ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 4000 ಕೋಟಿ ರೂ.ಗಳನ್ನು ಒದಗಿಸಿದ್ದು, ಒಟ್ಟಾರೆ 7000 ಕೋಟಿ ರೂ.ಗಳನ್ನು ಬೆಂಗಳೂರಿನ ಅಭಿವೃದ್ಧಿಗೆ ಒದಗಿಸುತ್ತಿದೆ.

 ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿಪಡಿಸಲು 1,000 ಕೋಟಿ ರೂ. ಒದಗಿಸಲಾಗುತ್ತಿದೆ. ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ರಸ್ತೆ, ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ.ಗಳನ್ನು ನೀಡಲಾಗಿದೆ.

 2025-26 ರ ಕೇಂದ್ರದ ಬಜೆಟ್‌ನಲ್ಲಿ 11.21 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚಗಳಿಗೆ ಒದಗಿಸಿದ್ದಾರೆ. 2024-25 ರಲ್ಲಿ 11.11 ಲಕ್ಷ  ಕೋಟಿ ರೂ. ನೀಡಿದ್ದರು.  ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 9979 ಕೋಟಿ ರೂ ಅಥವಾ ಶೇ. 0.9  ರಷ್ಟನ್ನು ಮಾತ್ರ ಹೆಚ್ಚಿಸಿದ್ದಾರೆ. 2022-23ನೇ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಾವು ಇಲಾಖೆಗಳಿಗೆ ಗಣನೀಯ ಪ್ರಮಾಣದಲ್ಲಿ ಅನುದಾನಗಳನ್ನು ಒದಗಿಸಿದ್ದೇವೆ ಎಂಬುದು ಅಂಕಿ ಅಂಶಗಳಿಂದ, ದಾಖಲೆಗಳಿಂದ ಸಾಬೀತಾಗುತ್ತದೆ. ಇಷ್ಟಾದರೂ ಆರ್. ಅಶೋಕ್ ಅವರಿಗೆ ನಮ್ಮ ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ; ತಕ್ಷಣದ ತಾತ್ಕಾಲಿಕ ಲಾಭಕ್ಕಾಗಿ ಘೋಷಿಸಲಾಗಿದೆ. ಆರ್ಥಿಕ ಬೇಜವಾಬ್ಧಾರಿಯಿಂದ ಕೂಡಿದೆ, ಅಭಿವೃದ್ಧಿಯತ್ತ ಗಮನ ಹರಿಸಿಲ್ಲ. ಆರ್ಥಿಕ ಬೆಳವಣಿಗೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂಬ ರಾಜಕೀಯವಾಗಿ ಮಾತನಾಡಿದ್ದಾರೆ. ನಿಮ್ಮ ಭಾಷಣವು ಪೂರ್ವಗ್ರಹ ಪೀಡಿತವಾದ ಅಜೆಂಡಾ ಪ್ರೇರಿತವಾದದ್ದರಿಂದ ನಾವು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

 ಬಜೆಟ್‌ನಲ್ಲಿ ನಮ್ಮ ಸರ್ಕಾರದ ಧ್ಯೇಯೋದ್ದೇಶಗಳ ಕುರಿತು ಬಜೆಟ್ ಭಾಷಣದ ಮೊದಲ ಪ್ಯಾರಾದಲ್ಲೆ ನಾವು ಸ್ಪಷ್ಟಪಡಿಸಿದ್ದೇವೆ. ಈ ಬಜೆಟ್ ಕೇವಲ ಅಂಕಿ ಸಂಖ್ಯೆಗಳ ಆಟವಲ್ಲ. ಇದು 7 ಕೋಟಿ ಜನರ ಬದುಕಿನ ಉಸಿರಿನ ಪ್ರತೀಕ ಎಂದು ಹೇಳಿದ್ದೇವೆ. ವಿರೋಧ ಪಕ್ಷದ ನಾಯಕರಾಗಿ ಅವರು ಮಾಡಿರುವ ಭಾಷಣ ಅವರೊಬ್ಬರ ಅನ್ನಿಸಿಕೆಯಲ್ಲ. ಅದು ಇಡೀ  ವಿರೋಧ ಪಕ್ಷದವರ ಅಭಿಪ್ರಾಯ ಎಂದು ನಾವು ಭಾವಿಸುತ್ತೇವೆ.

 ವಿರೋಧ ಪಕ್ಷದವರು  ನಮ್ಮ ಸರ್ಕಾರದ ಅವಧಿಯಲ್ಲಿ  ವಿವಿಧ ಕಲ್ಯಾಣ ಇಲಾಖೆಗಳಿಗೆ ಹೆಚ್ಚು ಅನುದಾನ ಕೊಡುತ್ತಿದ್ದೆವು, ನಿಮ್ಮ ಸರ್ಕಾರ ಕಡಿಮೆ ಅನುದಾನ ಕೊಟ್ಟಿದೆ ಎಂದು ಹೇಳಿದ್ದಾರೆ.  ಅದಕ್ಕೆ  2022-23 ರ ಬಜೆಟ್ಟಿನ ದಾಖಲೆಗಳನ್ನು ಕೊಡುತ್ತಿದ್ದಾರೆ. ವಾಸ್ತವವಾಗಿ ನಮ್ಮ ಸರ್ಕಾರ 2017-18ರಲ್ಲಿ ಕೊಟ್ಟಿದ್ದ ಅನುದಾನಗಳಿಗಿಂತ ಕಡಿಮೆ ಅನುದಾನಗಳನ್ನು 2022-23ರ ಬಜೆಟ್‌ನಲ್ಲಿ ಕೊಡಲಾಗಿದೆ. ವಿರೋಧ ಪಕ್ಷದವರಿಗೆ ಒಂದು ಮಾತು ಕೇಳ ಬಯಸುತ್ತೇನೆ. ಸರ್ಕಾರದ ಅಗತ್ಯ ಹೆಚ್ಚು ಬೀಳುವುದು ಯಾರಿಗೆ? ಸರ್ಕಾರಿ ಆಸ್ಪತ್ರೆಗಳಿಗೆ, ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಬಸ್ಸುಗಳಿಗೆ, ಸರ್ಕಾರದಿಂದ ಒದಗಿಸಿರುವ ಸಾರ್ವಜನಿಕ ನೀರಿನ ನಲ್ಲಿಗಳ ಬಳಿಗೆ ಯಾರು ಬರುತ್ತಾರೆ? ಮನುವಾದದ ಕಾರಣಕ್ಕೆ ಸಮಾಜದ ದಮನಿತ ಸಮುದಾಯಗಳು ಎನ್ನಿಸಿಕೊಂಡವರು ತಾನೆ? ಹಾಗಿದ್ದ ಮೇಲೆ ಸರ್ಕಾರ ಆದ್ಯತೆ ಕೊಡಬೇಕಾದುದು ಯಾರಿಗೆ? 

 ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು, ಮಕ್ಕಳ ಪಾಲಿಗೆ ಇಲ್ಲದ ಸರ್ಕಾರ ಯಾರಿಗೆ ಬೇಕು? 2017-18 ರ ಬಜೆಟ್ ಗಾತ್ರ 1,86,561 ಕೋಟಿ ರೂಪಾಯಿ. 2022-23 ರಲ್ಲಿ 2,65,720 ಕೋಟಿ ರೂಪಾಯಿ. 2017-18 ಕ್ಕೆ ಹೋಲಿಸಿದರೆ 79,159 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಗಾತ್ರದ ಬಜೆಟ್ ಅನ್ನು ಬೊಮ್ಮಾಯಿಯವರು ಮಂಡಿಸಿದ್ದರು. ವಿರೋಧ ಪಕ್ಷದವರು ಪದೇ ಪದೇ 2022-23 ಕ್ಕೆ ಹೋಲಿಸಿಕೊಂಡಿದ್ದಾರೆ.  ಹಾಗಾಗಿ ನಾನು 2017-18 ರ ಬಜೆಟ್ ಮತ್ತು 2025-26 ರ ಬಜೆಟ್ ಅನ್ನು 2022-23 ರ ಸಾಲಿನ ಬಜೆಟ್‌ಗೆ ಹೋಲಿಕೆ ಮಾಡಿ ನೋಡಿದ್ದೇನೆ. ಹೋಲಿಕೆ ಮಾಡಿ ನೋಡಿದ ನಂತರ ಬಿಜೆಪಿ ಸರ್ಕಾರ ಸ್ಪಷ್ಟವಾಗಿ ಮಹಿಳೆಯರು, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ವಿರೋಧಿಗಳು ಎಂಬುದು ಇನ್ನಷ್ಟು ಸ್ಪಷ್ಟವಾಯಿತು. ​ನಾವು 2017-18 ರಲ್ಲಿ ಹಿಂದುಳಿದ ವರ್ಗಕ್ಕೆ 3300 ಕೋಟಿ ರೂ. ಕೊಟ್ಟಿದ್ದರೆ 2022-23 ರಲ್ಲಿ 2372 ಕೋಟಿ ರೂ. ಕೊಡಲಾಯಿತು.

​ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಾವು 2221 ಕೋಟಿ ರೂ. ಅನುದಾನ ನೀಡಿದ್ದರೆ, ಬೊಮ್ಮಾಯಿಯವರ ಸರ್ಕಾರ 1495 ಕೋಟಿ ರೂ. ನೀಡಿತ್ತು. ವಿರೋಧ ಪಕ್ಷದವರು ಈ ಬಾರಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 4500 ಕೊಟಿ ರೂ ಕೊಡಲಾಗಿದೆ ಎಂದು ಮಾತನಾಡಿದ್ದಾರೆ. ಆದರೆ ವಾಸ್ತವವಾಗಿ 2017-18 ರಲ್ಲಿ ಬಜೆಟ್ ಗಾತ್ರ 1.86 ಲಕ್ಷ ಕೋಟಿಗಳಷ್ಟಿತ್ತು. ಆಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2200 ಕೋಟಿ ರೂ. ಗಳನ್ನು ಒದಗಿಸಿದ್ದೆವು. ಆಗಲೂ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ನಾವು ಶೇ.1.18 ರಷ್ಟು ಅನುದಾನವನ್ನು ನೀಡಿದ್ದೆವು. 2025-26ನೇ ಸಾಲಿನ ಬಜೆಟ್‌ನಲ್ಲಿ ಶೇ.1.1 ರಷ್ಟು ಮಾತ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಆದರೂ, ಆರೋಪ ಮಾಡುತ್ತಿದ್ದಾರೆ.

 ಸಮಾಜ ಕಲ್ಯಾಣ ಇಲಾಖೆಗೆ 2017-18 ರಲ್ಲಿ 4300 ಕೋಟಿ ರೂ. ಕೊಟ್ಟಿದ್ದೆವು. ಬೊಮ್ಮಾಯಿಯವರು 3818 ಕೋಟಿ ಕೊಟ್ಟರು. ಹೀಗೆ 5 ಕಲ್ಯಾಣ ಇಲಾಖೆಗಳಿಗೆ ನಾವು 2017-18 ರಲ್ಲಿ 16,358 ಕೋಟಿ ಕೊಟ್ಟಿದ್ದರೆ ಬೊಮ್ಮಾಯಿಯವರು 13,883 ಕೋಟಿ ರೂ. ಕೊಟ್ಟರು. 2475 ಕೋಟಿಗೂ ಕಡಿಮೆ. ​2022-23ರ ಬಜೆಟ್‌ನಲ್ಲಿ ಈ 5 ಕಲ್ಯಾಣ ಇಲಾಖೆಗಳಿಗೆ 13,883 ಕೋಟಿ ರೂ. ಕೊಟ್ಟಿದ್ದರೆ, ನಮ್ಮ ಸರ್ಕಾರ ಈ ಬಾರಿ 50,816 ಕೋಟಿ ರೂ. ಗಳನ್ನು ಕೊಟ್ಟಿದೆ. 36,993 ಕೋಟಿಗಳಿಗೂ ಹೆಚ್ಚು. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 1642 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 2204 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 585 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 29,482 ಕೋಟಿ ರೂ.ಗಳನ್ನು 2022-23 ಕ್ಕಿಂತ ಹೆಚ್ಚಿಗೆ ನೀಡಲಾಗಿದೆ.

 ಅಶೋಕ್ ಉಲ್ಲೇಖಿಸುವ 2022-23 ರಲ್ಲಿ ಬೊಮ್ಮಾಯಿಯವರು 2,65,720 ಕೋಟಿ ರೂ ಬಜೆಟ್ ಅನ್ನು ಮಂಡಿಸಿದ್ದರು. 2017-18 ಕ್ಕೆ ಹೋಲಿಸಿದರೆ 79,159 ಕೋಟಿ ರೂಗಳಷ್ಟು ಹೆಚ್ಚಿನ ಹಾಗೂ ಶೇ.42.43 ರಷ್ಟು ಹೆಚ್ಚಿನ ಗಾತ್ರದ ಬಜೆಟ್ಟನ್ನು ಅವರು ಮಂಡಿಸಿದ್ದರು.  ಆದರೆ ಈ 5 ವರ್ಗಗಳಿಗೆ 13,883 ಕೋಟಿ ರೂಗಳನ್ನು  ಮಾತ್ರ ಒದಗಿಸಿದರು. ಇದು ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಕೇವಲ ಶೇ.5.22 ರಷ್ಟು ಮಾತ್ರ.  ನಾವು ಬಜೆಟ್ ಮಂಡಿಸಿದ ನಂತರ 6 ನೆ ಬಜೆಟ್ಟನ್ನು ಬೊಮ್ಮಾಯಿ ಮಂಡಿಸಿದರು. ಆ ಬಜೆಟ್ ಮಾದರಿ ಬಜೆಟ್ ಎಂದು ಅಶೋಕ್ ಅವರು ಮತ್ತು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಆದರೆ ಈ 5 ವರ್ಗಗಳಿಗೆ 2475 ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದ್ದಾರೆ. ಶೇ.42 ರಷ್ಟು ಹೆಚ್ಚು ಕೊಡಬೇಕಾಗಿತ್ತಲ್ಲ? ಯಾಕೆ ಕೊಡಲಿಲ್ಲ? ಆಗ ಇಲ್ಲದ ಕಾಳಜಿ ಈಗ ಎಲ್ಲಿಂದ ಬಂತು?

2017-18 ನೇ ಸಾಲಿನಲ್ಲಿ ನಾನು ಮಂಡಿಸಿದ್ದ ಬಜೆಟ್ ಗಾತ್ರ 1,86,561 ಕೋಟಿ ರೂ. ಆ ವರ್ಷ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆಂದು ನಾವು ಮೀಸಲಿಟ್ಟಿದ್ದ ಅನುದಾನ 16358 ಕೋಟಿ ರೂ. ಇದು ಬಜೆಟ್ಟಿನ ಶೇ. 8.77 ರಷ್ಟು. ಇದು ನಮ್ಮ ಬದ್ಧತೆ. ​2017-18 ರ ನಂತರ ನಿಂತಿದ್ದ ಮಹಿಳೆಯರ, ಮಕ್ಕಳ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ  ಅಭಿವೃದ್ಧಿಯ ರಥವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುನ್ನಡೆಸಲು ಪ್ರಾರಂಭಿಸಿದ್ದೇವೆ. 25-26 ನೇ  ಸಾಲಿನ ಬಜೆಟ್‌ನಲ್ಲಿ  ಈ 5 ವರ್ಗಗಳಿಗೆ 50,816 ಕೋಟಿ ರೂಗಳನ್ನು ನೀಡಿದ್ದೇವೆ. ಇದು ಬಜೆಟ್ಟಿನ ಶೇ.12.41 ರಷ್ಟಾಗುತ್ತದೆ. ಇದು ನಮಗೂ ನಿಮಗೂ ಇರುವ ವ್ಯತ್ಯಾಸ.

 ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ 2025-16 ನೇ ಸಾಲಿಗೆ 17,019 ಕೋಟಿ ರೂ. ಗಳನ್ನು ಒದಗಿಸಿದೆ. ಒಟ್ಟು ವೆಚ್ಚದಲ್ಲಿ ಶೇ.4.2 ರಷ್ಟು ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅವರ ಬಜೆಟ್ಟಿನ ಶೇ.2 ರಷ್ಟು ಮಾತ್ರ ಒದಗಿಸಿದೆ ಎಂಬುದನ್ನು ಈ ಸದನಕ್ಕೆ ತಿಳಿಸಬಯಸುತ್ತೇನೆ. ಅಧಿಕಾರದಲ್ಲಿದ್ದಾಗ ಒಂದು. ಇಲ್ಲದಾಗ ಒಂದು. ಇದೇ ತಾನೆ ನಿಮ್ಮ ದ್ವಂದ್ವ ನೀತಿ. ಅಧಿಕಾರದಲ್ಲಿ ಇಲ್ಲದಿದ್ದಾಗ ಈ ಸಮುದಾಯಗಳ ಬಗ್ಗೆ ಪ್ರೀತಿ ಹುಟ್ಟುತ್ತದೆ, ಅಧಿಕಾರಕ್ಕೆ ಬಂದ ಕೂಡಲೆ ಈ 5 ವರ್ಗಗಳನ್ನು ಏಣಿ ಹತ್ತಿದವನು ಅದನ್ನು ಒದ್ದು ಬೀಳಿಸುವಂತೆ ದಮನ ಮಾಡಲಾಗುತ್ತದೆ.  ಈ ದ್ರೋಹ ಜನರಿಗೆ ಅರ್ಥವಾಗುತ್ತದೆ. ತಾವು ದಮನಿತ ಸಮುದಾಯಗಳ ವಿರೋಧಿಗಳು ಎಂಬುದು ಗೊತ್ತಿರುವ ಕಾರಣಕ್ಕೆ ಅದನ್ನು ಮರೆಮಾಚಲು ಮುಸ್ಲಿಂ ಬಜೆಟ್, ಹಲಾಲ್ ಬಜೆಟ್ ಎಂದೆಲ್ಲ ಹೇಳಿ ಸಮಾಜವನ್ನು ದಿಕ್ಕು ತಪ್ಪಿಸಲು ನೋಡಲಾಗುತ್ತಿದೆ.  ವಿರೋಧ ಪಕ್ಷದವರು ಹೇಳುವ ಮುಸ್ಲಿಂ ಬಜೆಟ್, ಹಲಾಲ್ ಬಜೆಟ್ ಎಂಬ ಮಾತುಗಳು ಸಬ್ಕಾ ಸಾಥ್- ಸಬ್ಕಾ ವಿಶ್ವಾಸ್ ಎಂದು ಹೇಳುವ ನರೇಂದ್ರ ಮೋದಿಯವರ ನಿಲುವಿಗೆ ಸಂಪೂರ್ಣ ವಿರುದ್ಧ. ಅಲ್ಲಿ ಸಬ್ಕಾ ಸಾಥ್ ಎಂದು ಹೇಳುವ ಮೋದಿಯವರು ಇಲ್ಲಿ ನೀವುಗಳು ಸಂಪೂರ್ಣ ಗೋಮುಖ ವ್ಯಾಘ್ರ ನಿಲುವಿನವರು. ಆಡುವುದೊಂದು, ಮಾಡುವುದೊಂದು ಎಂಬುದನ್ನು ವಿರೋಧ ಪಕ್ಷದವರೆಲ್ಲರೂ ಒಟ್ಟಿಗೆ ಸೇರಿ ಸಾಬೀತು ಮಾಡಿದ್ದಾರೆ.

 ಸನ್ಮಾನ್ಯ ವಿರೋಧ ಪಕ್ಷದ ನಾಯಕರು ಬಜೆಟ್ ಮೇಲೆ ಮಾತನಾಡುವಾಗ ದಾಖಲೆಗಳನ್ನು ಆರೆಸ್ಸೆಸ್ಸಿನವರು ಕೊಟ್ಟರೊ ಇಲ್ಲ ಅವರೆ ಅಧ್ಯಯನ ಮಾಡಿದರೊ ಗೊತ್ತಿಲ್ಲ. ಆದರೆ ಅವರ ಬಜೆಟ್ ಮೇಲಿನ ಭಾಷಣ ಸಂಪೂರ್ಣ ದೋಷಪೂರಿತ ಹಾಗೂ ಬಡವರ, ದಮನಿತರ ವಿರೋಧಿಯಾಗಿತ್ತು ಎಂದು ಮಾತ್ರ ಹೇಳಬಲ್ಲೆ ಎಂದು ಹೇಳಿದ್ದಾರೆ.

More articles

Latest article