ಬಿಲ್ಲವ,ನಾಮಧಾರಿ, ದೀವರು ಸೇರಿದಂತೆ ಈಡಿಗ ಸಮುದಾಯದ 26 ಉಪ ಪಂಗಡಗಳ ಅಭಿವೃದ್ಧಿ ಕುರಿತು ಚರ್ಚೆ

Most read

ಬೆಂಗಳೂರು: ಈಡಿಗ, ಬಿಲ್ಲವ,ನಾಮಧಾರಿ, ದೀವರು ಸೇರಿದಂತೆ ಈಡಿಗ ಸಮುದಾಯದ 26 ಉಪ ಪಂಗಡಗಳ ಅಭಿವೃದ್ಧಿ ಮತ್ತು ಮುಂದಿನ ಹೆಜ್ಜೆಯ ಕುರಿತು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಚಿಂತನ-ಮಂಥನ ಸಭೆ ನಡೆಯಿತು. ಸಮುದಾಯದ ಸ್ವಾಮೀಜಿಗಳಾದ ಶ್ರೀ ವಿಖ್ಯಾತಾನಂದ ಶ್ರೀ ಗಳು ಹಾಗೂ ಪ್ರಣಾವಾನಂದ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ತೆಲಂಗಾಣದ ಮಾಜಿ ಸಚಿವ ಶ್ರೀನಿವಾಸ್ ಗೌಡ್, ಶಾಸಕ ವಿ. ಸುನೀಲ್ ಕುಮಾರ್, ಮಾಜಿ ಶಾಸಕ ಶ್ರೀನಾಥ್,  ಕೆಪಿಎಸ್‌ಸಿ ಮಾಜಿ ಸದಸ್ಯ ಲಕ್ಷ್ಮಿನರಸಿಹಯ್ಯ ಮತ್ತು ರಾಜ್ಯದ ವಿವಿಧ ಪ್ರದೇಶಗಳ ಸಮುದಾಯದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಸವಿಸ್ತಾರವಾಗಿ ಹಾಗೂ ಗಂಭೀರವಾಗಿ ಅವಲೋಕಿಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ದಕ್ಷಿಣ ಭಾರತದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಂಘಟಿತರಾಗುವ ಮಹದುದ್ದೇಶದಿಂದ ಈಡಿಗ, ಈಳವ, ನಾಡಾರ್, ಬಿಲ್ಲವ, ಭಂಡಾರಿ, ನಾಮಧಾರಿ, ಧೀವರು, ಸೇರಿದಂತೆ ಬ್ರಹ್ಮಶ್ರೀ ನಾರಾಯಣಗುರುಗಳ  ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿರುವ ಈಡಿಗ ಸಮುದಾಯದ 26 ಉಪ ಪಂಗಡಗಳು ಹಾಗೂ ಅವರ ಅನುಯಾಯಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಂಘಟಿಸಿ ದಕ್ಷಿಣ ಭಾರತ ಮಟ್ಟದ ಬೃಹತ್‌ ಸಮಾವೇಶ ನಡೆಸಲು ನಿರ್ಣಯಿಸಲಾಯಿತು.

ದಕ್ಷಿಣ ಭಾರತ ಮಟ್ಟದ ಸಮಾವೇಶವನ್ನು ತೆಲಂಗಾಣದಲ್ಲಿ ಮಾಜಿ ಸಚಿವ ಶ್ರೀನಿವಾಸ ಗೌಡ್, ತಮಿಳುನಾಡಿನಿಂದ ರಾಜಾ ನಾಡಾರ್, ಗೋವಾದಿಂದ ನಾಯ್ಕ್ ಇವರ ನೇತೃತ್ವದಲ್ಲಿ  ನಡೆಸಲಾಗುತ್ತದೆ. ಬೆಂಗಳೂರು, ಹೈದರಾಬಾದ್, ನಾಗಪುರ ಹಾಗೂ ಗೋವಾದಲ್ಲಿ ದಕ್ಷಿಣ ಭಾರತ ಮಟ್ಟದ ಸಮಾವೇಶದ ಸ್ಥಳ ನಿಗದಿಪಡಿಸಿ ಕನಿಷ್ಟ ಐದು ಲಕ್ಷ ಜನರು ಪಾಲ್ಗೊಳ್ಳುವಂತೆ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಮುದಾಯಗಳ ಹಕ್ಕೊತ್ತಾಯವನ್ನು ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಿ ಮುಖ್ಯಮಂತ್ರಿಗಳಿಗೆ ರಾಜ್ಯ ಮುಖಂಡರ ನಿಯೋಗವು ಭೇಟಿ ನೀಡಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

1, ನಾರಾಯಣಗುರು ಈಡಿಗ ಅಭಿವೃದ್ದಿ ನಿಗಮವನ್ನು ಕ್ರೀಯಾಶಿಲಗೊಳಿಸಿ 250 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವುದು.

2, ಸಮುದಾಯದ ಅಸ್ಮಿತೆ, ಕುಲ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿಯನ್ನು ಜನಾಂಗದ ಕೇಂದ್ರವಾದ ಸೊಲೂರು ಈಡಿಗ ಮಹಾಸಂಸ್ಥಾನದಲ್ಲಿ ಸ್ಥಾಪಿಸುವುದು.

3, ಮಂಗಳೂರು ವಿಶ್ವವಿದ್ಯಾಲಯದಲ್ಲಿರುವ ನಾರಾಯಣಗುರು ಅಧ್ಯಯನ ಪೀಠಕ್ಕೆ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದು ಹಾಗೂ ಸಾಂಸ್ಕೃತಿಕ ಅಧ್ಯಯನಕ್ಕೆ ಅವಕಾಶ ಮಾಡುವುದು.

4, ಕೋಟಿ-ಚೆನ್ನಯ್ಯ ಥೀಮ್ ಪಾರ್ಕ್ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದು.

5, ಕುಲ ಕಸುಬು ಕಳೆದುಕೊಂಡಿರುವ ಈಡಿಗ ಸಮುದಾಯದ ಉಪ ಪಂಗಡಗಳ ಜನರ ಪುನರ್ ವಸತಿಗಾಗಿ ಪ್ಯಾಕೇಜ್ ಘೋಷಣೆ ಮಾಡುವುದು.

6,  ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗಳ ಪರವಾನಗಿ ನೀಡುವಾಗ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಈಡಿಗ ಸಮುದಾಯದ ಉಪ ಪಂಗಡಗಳಿಗೆ ಮೀಸಲಾತಿ ನೀಡುವುದು.

7, ಶರಣ ಹೆಂಡದ ಮಾರಯ್ಯ ತಪಸ್ಸು ಮಾಡಿದ ಬಸವ ಕಲ್ಯಾಣದಲ್ಲಿ ಬಸದಿ ಕಟ್ಟಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸುವುದು.

8, ರಾಜ್ಯದಾದ್ಯಂತ ಈಡಿಗ ಜನಾಂಗದವರು ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯಗಳು ಮತ್ತು ಸಮುದಾಯ ಭವನಗಳಿಗೆ ವಿಶೇಷವಾಗಿ ಆರ್ಥಿಕ ನೆರವು ಕಲ್ಪಿಸುವುದು.

9, ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನವನ್ನು ನಿರ್ಮಿಸಲು 10 ಎಕರೆ ಭೂಮಿಯನ್ನು ಮಂಜೂರಾತಿ ಮಾಡುವುದು.

More articles

Latest article