ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ಇಂದು ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ಶಾಸಕರ ಬೆಂಗಳೂರು ನಿವಾಸ, ಕಚೇರಿ ಸೇರಿದಂತೆ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ.
ಉದ್ಯಮಿಯೂ ಆಗಿರುವ ಸುಬ್ಬಾರೆಡ್ಡಿ ವಿವಿಧ ದೇಶಗಳಲ್ಲಿ ಆಸ್ತಿ ಮತ್ತು ವಿದೇಶಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅಕ್ರಮವಾಗಿ ಹಣ ವರ್ಗಾವಣೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ ನಡೆದಿದೆ ಎನ್ನಲಾಗಿದೆ. ಇವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಶಾಸಕ ಸುಬ್ಬಾರೆಡ್ಡಿ ಕುಟುಂಬ ಸದಸ್ಯರು ಹೊಂದಿರುವ ವಿದೇಶಿ ಅಸ್ತಿ ಮತ್ತು ಅವರ ಉದ್ಯಮ ಪಾಲುದಾರರಿಗೆ ಸೇರಿದ ಆಸ್ತಿ ಮೇಲೆ ದಾಳಿ ನಡೆದಿದೆ. ವಿದೇಶಗಳಲ್ಲಿ ಬ್ಯಾಂಕ್ ಅಕೌಂಟ್, ವಿದೇಶಿ ವ್ಯವಹಾರದಲ್ಲಿ ಹೂಡಿಕೆ ವಿಚಾರವಾಗಿ ಶೋಧ ನಡೆಸಲಾಗುತ್ತಿದೆ. ಸುಬ್ಬಾರೆಡ್ಡಿ ಮಲೇಷ್ಯಾ, ಹಾಂಕಾಂಗ್, ಜರ್ಮನಿಯಲ್ಲಿ ಆಸ್ತಿ ಹೊಂದಿದ್ದಾರೆ.