ನವದೆಹಲಿ: ಮುಂಬೈ ಮೂಲದ ಕಂಪನಿ ಮತ್ತು ಅದರ ಪ್ರವರ್ತಕರು ಸುಮಾರು 50 ಲಕ್ಷ ಹೂಡಿಕೆದಾರರಿಗೆ ರೂ.4,500 ಕೋಟಿ ಹೂಡಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಲವು ಕಡೆ ಶೋಧ ನಡೆಸಿರುವುದಾಗಿ ಜಾರಿ ನಿರ್ದೆಶನಾಲಯ (ಇಡಿ) ತಿಳಿಸಿದೆ.
ಪ್ಯಾನ್‌ಕಾರ್ಡ್ ಕ್ಲಬ್ ಲಿಮಿಟೆಡ್ (ಪಿಸಿಎಲ್), ಅದರ ಮಾಜಿ ನಿರ್ದೇಶಕರು ಮತ್ತು ಇತರರ ವಿರುದ್ಧ ದಾಳಿ ನಡೆಸಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಇದು ಸಾಮೂಹಿಕ ಹೂಡಿಕೆ ಯೋಜನೆ (ಸಿಐಎಸ್) ಮೂಲಕ ವಂಚನೆ ಆರೋಪದ ಪ್ರಕರಣವಾಗಿದ್ದು, ಸೆಬಿ ಕಾಯ್ದೆಯನ್ನು ಉಲ್ಲಂಘಿಸಿ, 50 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಗೆ ರೂ.4,500 ಕೋಟಿ ವಂಚಿಸಲಾಗಿದೆ ಎಂದು ತಿಳಿಸಿದೆ.
ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು (ಇಒಡಬ್ಲ್ಯು) ಮಹಾರಾಷ್ಟ್ರ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಕಾಯಿದೆ, 1999ರ ಅಡಿಯಲ್ಲಿ ಪ್ಯಾನ್‌ಕಾರ್ಡ್ ಕ್ಲಬ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಅದರ ಆಧಾರದ ಮೇಲೆ ಇ.ಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಪ್ಯಾನ್‌ಕಾರ್ಡ್ ಕ್ಲಬ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರು ಮೂರರಿಂದ ಒಂಬತ್ತು ವರ್ಷಗಳವರೆಗೆ ವಿವಿಧ ಅವಧಿಗಳ ವಿವಿಧ ಹೂಡಿಕೆ ಯೋಜನೆಗಳನ್ನು ಘೋಷಿಸಿದ್ದರು. ಹೋಟೆಲ್ ರಿಯಾಯಿತಿ, ಅಪಘಾತ ವಿಮೆ ಮತ್ತು ಸಾರ್ವಜನಿಕರು ಮಾಡಿದ ಠೇವಣಿಗಳ ವಿರುದ್ಧ ಹೆಚ್ಚಿನ ಬಡ್ಡಿ ಸೇರಿದಂತೆ ಸೆಬಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಚಾಲ್ತಿಯಲ್ಲಿರುವ ಮಾನದಂಡಗಳನ್ನು ಮೀರಿ ಹಲವು ಸ್ಟೀಮ್‌ಗಳನ್ನು ಘೋಷಿಸಿತ್ತು ಎಂದು ಇ.ಡಿ ಹೇಳಿದೆ.
ಪ್ರಮುಖ ಆರೋಪಿ ಮತ್ತು ಕಂಪನಿಯ ಮಾಜಿ ನಿರ್ದೇಶಕ ದಿವಂಗತ ಸುಧೀರ್ ಮೊರವೇಕರ್ ಅವರ ಕುಟುಂಬ ನಿರ್ವಹಿಸುತ್ತಿರುವ ವಿದೇಶಿ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.