ನವದೆಹಲಿ: ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಗ್ರೂಪ್ ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ನಡೆಸಿದೆ. ರಿಲಾಯನ್ಸ್ ಗ್ರೂಪ್ ಗೆ ಸೇರಿದ 35 ಕ್ಕೂ ಹೆಚ್ಚು ಸ್ಥಳಗಳು ಹಾಗೂ 50 ಕಂಪನಿಗಳ ಮೇಲೆ ದಾಳಿ ನಡೆದಿರುವುದಾಗಿ ಇಡಿ ಮೂಲಗಳು ಖಚಿತಪಡಿಸಿವೆ..
ಯೆಸ್ ಬ್ಯಾಂಕ್ ಗೆ 3,000 ಕೋಟಿ ರೂ ವಂಚಿಸಿರುವ ಪ್ರಕರಣ ಇದಾಗಿದ್ದು, ಸಿಬಿಐ ಎರಡು ಎಫ್ ಐ ಆರ್ ಗಳನ್ನು ದಾಖಲಿಸಿದೆ. ಈ ದೂರು ಹಾಗೂ ಸೆಬಿ, ಬ್ಯಾಂಕ್ ಆಫ್ ಬರೋಡಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತಿತರ ಏಜೆನ್ಸಿಗಳಿಂದ ಲಭ್ಯವಾದ ಮಾಹಿತಿ ಆಧರಿಸಿ ಇಡಿ ದಾಳಿ ನಡೆಸಿದೆ. ರಿಲಾಯನ್ಸ್ ನ 25 ಕ್ಕೂ ಹೆಚ್ಚು ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ.
ಯೆಸ್ ಬ್ಯಾಂಕ್ 2017 ಮತ್ತು 2019ರ ನಡುವೆ ರಿಲಾಯನ್ಸ್ ಗ್ರೂಪ್ಗೆ 3,000 ಕೋಟಿ ರೂ ಸಾಲ ಮಂಜೂರು ಮಾಡಿತ್ತು. ಆದರೆ, ಈ ಸಾಲದ ಹಣವನ್ನು ಗ್ರೂಪ್ ನ ಇತರ ಸಂಸ್ಥೆಗಳು ಹಾಗೂ ಬೆನಾಮಿ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಯೆಸ್ ಬ್ಯಾಂಕ್ ನ ಪ್ರವರ್ತಕರು ಸೇರಿದಂತೆ ಬ್ಯಾಂಕ್ ನ ಅಧಿಕಾರಿಗಳಿಗೆ ಲಂಚ ನೀಡಿರುವುದು ಆರಂಭಿಕ ತನಿಖೆಯಲ್ಲಿ ಸಾಬೀತಾಗಿದೆ. ಸಾಲ ಮಂಜೂರು ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಾಲ ನೀಡುವ ಮೊದಲು, ಯೆಸ್ ಬ್ಯಾಂಕ್ ನ ಪ್ರವರ್ತಕರು ತಮ್ಮ ವೈಯಕ್ತಿಕ ಖಾತೆಗಳಿಗೆ ಹಣವನ್ನು ಪಡೆದಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ.