ಬೆಂಗಳೂರು: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸುವಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಇಂದು ಬಿಬಿಎಂಪಿಯ ಹಲವು ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದೆ. 2016–2019ರ ಅವಧಿಯಲ್ಲಿ ಸುಮಾರು ರೂ. 960 ಕೋಟಿ ವೆಚ್ಚದಲ್ಲಿ ಹಲವು ಕೊಳವೆಬಾವಿಗಳನ್ನು ಕೊರೆಸಲಾಗಿತ್ತು ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಆರಂಭಿಸಲಾಗಿತ್ತು. ಈ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎಂದು 2021ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಯಲಹಂಕ, ಮಹದೇವಪುರ, ದಾಸರಹಳ್ಳಿ. ಮಹದೇವಪುರ ವ್ಯಾಪ್ತಿಯಲ್ಲಿ 9,588 ಕೊಳವೆ ಬಾವಿ ಕೊರೆಸಲಾಗಿದೆ.
ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಎಂಜಿನಿಯರ್, ಎಂಜಿನಿಯರ್ಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ದಾಳಿಯು ಮುಂಜಾನೆ 7 ಗಂಟೆಯಿಂದ ಆರಂಭವಾಗಿದೆ. ಇಡಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
2016ರಿಂದ ರಿಂದ ಕೊರೆಸಿರುವ ಬೋರ್ ವೆಲ್. ಆರ್ ಒ ಪ್ಲಾಂಟ್ ಗಳ ಬಗ್ಗೆ ಇಡಿ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರ ನಿವಾಸದಲ್ಲಿ 45 ಕೋಟ ರೂ. ನಷ್ಟು ನಗದು ಪತ್ತೆಯಾಗಿತ್ತು. ಈ ಹಣಕ್ಕೂ ಪಾಲಿಕೆಯ ಅವ್ಯವಹಾರಕ್ಕೂ ಸಂಬಂಧ ಇರುವುದು ಕಂಡು ಬಂದಿದ್ದು, ಈ ನಿಟ್ಟಿನಲ್ಲಿಯೂ ಮಾಹಿತಿ ಕಲೆ ಹಾಕಲಾಗುತಿದೆ.
ಪಾಲಿಕೆಯು 2016, 2017, 2018ನೇ ಸಾಲಿನಲ್ಲಿ 968 ಕೋಟಿ ಖರ್ಚು ಮಾಡಿ ರಾಜರಾಜೇಶ್ವರಿ ನಗರ, ಯಲಹಂಕ, ಮಹದೇವಪುರ, ದಾಸರಹಳ್ಳಿ. ಮಹದೇವಪುರ ವ್ಯಾಪ್ತಿಯಲ್ಲಿ 9,558 ಕೊಳವೆ ಬಾವಿಗಳನ್ನು ಕೊರೆಸಿತ್ತು. ನಂತರ 976 ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಈ ಪ್ರಮಾಣದಲ್ಲಿ ಕಾಮಗಾರಿಗಳು ನಡೆದಿಲ್ಲ ಎಂದು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಹಾಗಾಗಿ ದಾಖಲೆಗಳನ್ನು ಒದಗಿಸಲೂ ಬಿಬಿಎಂಪಿ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 9,558 ಕೊಳವೆ ಬಾವಿ ಕೊರೆಯುವ ಯೋಜನೆ ಇದಾಗಿದೆ. ಒಂದು ಆರ್ ಓ ಪ್ಲಾಂಟ್ ಗೆ 25 ರಿಂದ 28 ಲಕ್ಷ ರೂಪಾಯಿ ಬಿಲ್ ಮಾಡಲಾಗಿದೆ. ಕೇವಲ 100 ಅಡಿ ಆಳದ ಕೊಳವೆಬಾವಿ ಕೊರೆದು 2 ಸಾವಿರ ಅಡಿ ಕೊರೆಯಲಾಗಿದೆ ಎಂದು ದಾಖಲೆ ಹುಟ್ಟು ಹಾಕಲಾಗಿದೆ. ಈ ಯೋಜನೆಗೆ 956 ಕೋಟಿ ರೂ. ಬಿಲ್ ಪಾವತಿ ಮಾಡಲಾಗಿದೆ.
ಈ ಸಂಬಂಧ 2019 ಬಿಜೆಪಿ ಎಸಿಬಿಗೆ ದೂರು ನೀಡಿತ್ತು. ಪಾಲಿಕೆಯ 25ಕ್ಕೂ ಅಧಿಕ ಅಧಿಕಾರಿಗಳಿಗೆ ಇಡಿ ನೋಟೀಸ್ ನೀಡಿತ್ತು. ಕೆಲವು ಕಡೆ ಕೊಳವೆ ಬಾವಿ ಕೊರೆಸದೆಯೇ ಬಿಲ್ ಮಾಡಿರುವುದು ಪತ್ತೆಯಾಗಿದೆ. ನಂತರ ಈ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಂತಿಮವಾಗಿ ಲೋಕಾಯುಕ್ತ 2022ಲ್ಲಿ ಈ ಪ್ರಕರಣವನ್ನು ಇಡಿಗೆ ವರ್ಗಾವಣೆ ಮಾಡಿತ್ತು.