ಬೆಂಗಳೂರು: ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ ಎಂಬ ಮಹಾಲೇಖಪಾಲರ (ಸಿಎಜಿ) ವರದಿ ಸತ್ಯಕ್ಕೆ ದೂರವಾಗಿದ್ದು, ಈ ಯೋಜನೆಗಳಿಂದ ಜನರ ತಲಾದಾಯದಲ್ಲಿ ಏರಿಕೆ ಆಗಿದೆ ಮತ್ತು ಜಿಎಸ್‌ಟಿ ಸಂಗ್ರಹದಲ್ಲೂ ಹೆಚ್ಚಳವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಹಾಲೇಖಪಾರು ಸಿಎಜಿ ವರದಿ ಸಿದ್ಧಪಡಿಸುವಾಗ ಅನುದಾನ ಬಳಕೆ ಕುರಿತು ಪರಿಶೀಲಿಸಿ ವರದಿ ನೀಡಬೇಕೇ ಹೊರತು ಯೋಜನೆಗಳನ್ನು ವ್ಯಾಖ್ಯಾನಿಸಬಾರದು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಹಾಗೂ ಆದಾಯ ಕುಂಠಿತವಾಗುತ್ತದೆ ಎಂದು ವರದಿ ನೀಡಿರುವುದು ಸರಿಯಲ್ಲ. ಈ ಸಂಬಂಧ ಮುಖ್ಯಮಂತ್ರಿಳ ಜತೆ ಚರ್ಚಿಸಿ ಸಿಎಜಿಗೆ ಉತ್ತರ ನೀಡಲಾಗುವುದು ಎಂದು ತಿಳಿಸಿದರು.
ಈ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಇದುವರೆಗೆ ರೂ. 94,177 ಕೋಟಿ ವೆಚ್ಚ ಮಾಡಲಾಗಿದೆ ಮತ್ತು ಶೇ 98ರಷ್ಟು ಅನುಷ್ಠಾನಗೊಂಡಿವೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಮೂರು ಜಿಲ್ಲಾ ಮಟ್ಟದ ಸಮಿತಿಗಳಿಗೆ ಪ್ರಶಸ್ತಿ ನೀಡಲು ಉದ್ಧೇಶಿಸಲಾಗಿದೆ. ಗ್ಯಾರಂಟಿ ಯೋಜನೆ ಬೇಡವೆಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಜನಿಕರು ಸ್ವಯಂಪ್ರೇರಣೆಯಿಂದ ಹಿಂದೆ ಸರಿದಿದ್ದು, ಇದರಿಂದ ಅಗತ್ಯ ಇರುವವರಿಗೆ ಯೋಜನೆ ತಲುಪಿಸಲು ಸಹಕಾರಿಯಾಗುತ್ತದೆ ಎಂದರು.
ಆದಾಯ ತೆರಿಗೆ ಪಾವತಿ ಕಾರಣಕ್ಕಾಗಿ ಸುಮಾರು 1.2 ಲಕ್ಷ ಅರ್ಹರು ಗೃಹ ಲಕ್ಷ್ಮಿ ಯೋಜನೆಯ ಲಾಭದಿಂದ ಹೊರಗುಳಿದಿದ್ದರು. ಸಮಸ್ಯೆಯನ್ನು ಬಗೆಹರಿಸಿ 59 ಸಾವಿರ ಜನರನ್ನು ಮತ್ತೆ ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದರು.