ಹಾಸನ ಪೆನ್ ಡ್ರೈವ್: ಸಂತ್ರಸ್ತರಿಗೆ ಮಹಿಳೆಯರಿಗೆ ತುರ್ತು ರಕ್ಷಣೆಗೆ ಡಿವಿಪಿ ಆಗ್ರಹ

Most read

ವಿಜಯಪುರ: ಹಾಸನದಲ್ಲಿ ಖ್ಯಾತ ಪ್ರಭಾವಿ ರಾಜಕಾರಣಿ ಕುಟುಂಬದ ಸದಸ್ಯರು ಹಾಗೂ ಸಂಸದರಾದ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣು ಮಕ್ಕಳನ್ನು ಒತ್ತಾಯಪೂರ್ವಕ ಕಾಮಕಾಂಡದಲ್ಲಿ ಬಳಸಿಕೊಂಡಿರುವ ವಿಡಿಯೋಗಳಿರುವ ಪೆನ್ ಡ್ರೈವ್ ಗಳು ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಲಾಗಿದೆ. ಈ ಆಘಾತಕಾರಿ ಸಂಗತಿಯನ್ನು ಇಡೀ ರಾಜ್ಯವೇ ಖಂಡಿಸುತ್ತಿದೆ.

ಈ ಘಟನೆಯ ಕುರಿತು ರಾಜ್ಯ ಸರ್ಕಾರವು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು, ಈ ಭೀಕರ ಘಟನೆಯಲ್ಲಿ ತೊಡಗಿದ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಅಜಮನಿ ಹಾಗೂ (DVP) ಜಿಲ್ಲಾ ಸಮಿತಿಯು ಆಗ್ರಹಿಸಿದೆ.

ಇಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿ, ಈ ವೇಳೆ ಮಾತನಾಡಿದ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್, ಅಮಾನುಷ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಸಂತ್ರಸ್ತ ನೂರಾರು ಹೆಣ್ಣುಮಕ್ಕಳಿಗೆ ರಕ್ಷಣೆ ಹಾಗೂ ಆರೈಕೆ ಮಾಡುವುದು ಜರೂರಾಗಿದೆ ಎಂದರು.

ಕೆಲವು ಹೆಣ್ಣು ಮಕ್ಕಳು ಆತ್ಮಹತ್ಯೆಯಂತಹ ಘೋರ ಮಾರ್ಗ ಹಿಡಿದಿರುವ ವರದಿಗಳು ಬಂದಿವೆ. ಸರ್ಕಾರವು ಕೂಡಲೇ ಈ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಹಾಗೂ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಪರಿಷತ್ ಸರ್ಕಾರಕ್ಕೆ ಆಗ್ರಹಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಚಾಲಕರಾದ ಬಾಲಾಜಿ ಎಂ ಕಾಂಬಳೆ, ನಾಡಿನ ವಿಧ್ಯಾರ್ಥಿ ಯುವಜನರು ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಣ, ಉದ್ಯೋಗವನ್ನು ಕಲ್ಪಿಸಿಕೊಡುವ ಮತ್ತು ಮಹಿಳೆಯರಿಗೆ ರಕ್ಷಣೆ ಜೊತೆಗೆ ಗೌರವದಿಂದ ಕಾಣುವ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಸಭ್ಯ ಅಭ್ಯರ್ಥಿಗಳಿಗೆ ತಮ್ಮ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ವಿಧ್ಯಾರ್ಥಿ ಯುವಜನರಲ್ಲಿ ಮನವಿ ಮಾಡಿದರು.

ಈ ವೇಳೆ ಹಲವು ಪರಿಷತ್ ಮುಖಂಡರು, ದಲಿತ ಸಂಘಟನೆ ಮುಖಂಡರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

More articles

Latest article