ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಐದು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಸುಮಾರು 2.50 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳು, ನಗದು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲ ಪ್ರಕರಣದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಡ್ರಗ್ಸ್ ಸರಬರಾಜು ಮಾಡಲು ಶೇಖರಿಸಿಟ್ಟಿದ್ದ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಆತನಿಂದ 2.50 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚೊಕ್ಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ವೊಂದರಲ್ಲಿ ಡ್ರಗ್ಸ್ ಅನ್ನು ಶೇಖರಿಸಿ ಇಡಲಾಗಿದೆ ಎಂಬ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಲಭ್ಯವಾಗಿರುತ್ತದೆ. ಮಾದಕ ವಸ್ತು ಶೇಖರಿಸಿ ಇಡಲಾಗಿದ್ದ ಮನೆಯ ಮೇಲೆ ದಾಳಿ ನಡೆಸಿ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಆತನಿಂದ 2.50 ಕೋಟಿ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಡ್ರಗ್ಸ್ ಮಾರಾಟ ಮಾಡಲು ಸಂಚು ರೂಪಿಸಿರುತ್ತಾನೆ. ಆತನ ಮನೆಯಿಂದ ಹೈಡೋಗಾಂಜಾ, ಗಾಂಜಾ, ಎಲ್.ಎಸ್.ಡಿ ಸ್ಟ್ರಿಪ್ಸ್ ಚರಸ್, ಎಂ.ಡಿ.ಎಂ.ಎ ಕ್ರಿಸ್ಟಲ್, ಮೂರು ತೂಕದ ಯಂತ್ರಗಳು, 2 ಮೊಬೈಲ್ ಹಾಗೂ ರೂ. 1.30 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 2.50 ಕೋಟಿ ರೂ ಎಂದು ಪೊಲೀಸರು ತಿಳಿಸಿದ್ದಾಋೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆತ ಗೋವಾ, ಸ್ಪೋಟಕ ಮಾಹಿತಿಯನ್ನು ಹೊರಗೆಡವಿದ್ದಾನೆ. ಈತ ಮತ್ತೊರ್ವ ಸಹಚರನ ಜೊತೆ ಸೇರಿಕೊಂಡು ಆರೋಪಿಗಳಿಗೆ ಪರಿಚಯವಿರುವ ಹೊರ ರಾಜ್ಯಗಳಾದ ಗೋವಾ, ಥೈಲ್ಯಾಂಡ್, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಿಂದ ತರಿಸಿಕೊಂಡು ಇಲ್ಲಿ ಮಾರಾಟ ಮಾಡಲು ಸಂಚು ರೂಪಿಸಿರುತ್ತಾರೆ.
ಎರಡನೇ ಪ್ರಕರಣದಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇದಿತ ಮಾದಕವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತನಿಂದ 85 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 8.50 ಲಕ್ಷ ರೂ. ಎಂದು ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಮೂರನೇ ಪ್ರಕರಣದಲ್ಲಿ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 20 ಗ್ರಾಂ ಎಂ.ಡಿ.ಎಂ.ಎ, 2 ಮೊಬೈಲ್ ಫೋನ್ ಮತ್ತು ರೂ.31,700 ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ಕನೇ ಪ್ರಕರಣದಲ್ಲಿ ಬಾಗಲೂರು ಪೊಲೀಸ್ ಠಾಣೆ ಪೊಲೀಸರು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 28 ಸಾವಿರ ಮೌಲ್ಯದ 14 ಗ್ರಾಂ ಎಂ.ಡಿ.ಎಂ.ಎ, ವಶಪಡಿಸಿಕೊಂಡಿದ್ದಾರೆ. ಐದನೇ ಪ್ರಕರಣದಲ್ಲಿ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂ.ಡಿ.ಎಂ.ಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ ಆತನಿಂದ 3.5 ಲಕ್ಷ ರೂ. ಮೌಲ್ಯದ 34 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, ಒಂದು ಕಾರು ಮತ್ತು ನಗದು ಹಣವನ್ನು ಜಪ್ತಿ ಮಾಡಲಾಗಿದೆ.