ಡ್ರಗ್ಸ್ ಮಾರಾಟ, ಮೂವರ ಬಂಧನ; ಮಾದಕ ವಸ್ತು ಜಪ್ತಿ

Most read

ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಪ್ರಜೆ ಸೇರಿದಂತೆ ಮೂವರನ್ನು ಸುದ್ದಗುಂಟೆಪಾಳ್ಯ ಮತ್ತು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಅಂಥೋಣಿ (35) ಎಂಬಾತನನ್ನು ಹೆಣ್ಣೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರೂ. 6.5 ಲಕ್ಷ ಮೌಲ್ಯದ 3 ಕೆ.ಜಿ. 55 ಗ್ರಾಂ. ಎಂಡಿಎಂಎ ಕ್ರಿಸ್ಟಲ್ ವಶಕ್ಕೆ ಪಡೆಯಲಾಗಿದೆ.

ಆರೋಪಿ ಎರಡು ವರ್ಷಗಳ ಹಿಂದೆ ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಆಗಮಿಸಿದ್ದ. ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ವೀಸಾ ಅವಧಿ ಮುಕ್ತಾಯವಾಗಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅಂಥೋಣಿಯು, ಮುಂಬೈ ಹಾಗೂ ದೆಹಲಿಯಲ್ಲಿ ನೆಲಸಿದ್ದ ತನ್ನ ಸ್ನೇಹಿತರಿಂದ ಎಂಡಿಎಂಎ ಕ್ರಿಸ್ಟಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತರುತ್ತಿದ್ದ. ನಂತರ ಚೇಳಕೆರೆ ಮೈದಾನದಲ್ಲಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುದ್ದಗುಂಟೆಪಾಳ್ಯ ನಿವಾಸಿಗಳಾದ ಯೂಸುಫ್ ಶರೀಫ್ (35) ಮತ್ತು ಸಾದಿಕ್ (30) ಬಂಧಿತ ಆರೋಪಿಗಳು. ಇವರಿಂದ ರೂ.1.50 ಲಕ್ಷ ಮೌಲ್ಯದ 1 ಕೆ.ಜಿ. 825 ಗ್ರಾಂ. ಗಾಂಜಾ, ಮೊಬೈಲ್, ಒಂದು ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಭವಾನಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಕೂಡಲೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕೇರಳ ಮತ್ತು ಆಂಧ್ರಪ್ರದೇಶದ ಪೆಡ್ಲರ್‌ಗಳ ಮೂಲಕ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

More articles

Latest article