ಡ್ರಗ್ಸ್ ಸಾಗಾಣೆ ಆರೋಪ; ಯುವತಿಯಿಂದ 40 ಲಕ್ಷ ರೂ. ಸುಲಿಗೆ

Most read

ಬೆಂಗಳೂರು: ವಿದೇಶಕ್ಕೆ ಮಾದಕ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡುತ್ತಿರುವ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಟೆಕ್ಕಿಯೊಬ್ಬರನ್ನು ಬೆದರಿಸಿ ವಂಚಕರು ರೂ. 40.18 ಲಕ್ಷ ರೂ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಅಪರಾದ ಪೊಲೀಸ್ ಠಾಣೆಯಲ್ಲಿ ರಾಜರಾಜೇಶ್ವರಿ ನಗರದ ನಿವಾಸಿ ಪ್ರಕೃತಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನವೆಂಬರ್ 7ರಂದು ಆರೋಪಿ ಡಿಎಚ್ಎಲ್ ಕೊರಿಯರ್ ಕಂಪನಿಯೊಂದರ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಪ್ರಕೃತಿ ಅವರಿಗೆ ಕರೆ ಮಾಡಿದ್ದ. ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್‌ಗೆ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಸೇರಿದಂತೆ ಡ್ರಗ್ಸ್ ಇದೆ. ನಿಮ್ಮ ವೈಯಕ್ತಿಕ ದಾಖಲಾತಿಗಳು ಮತ್ತು ಮೊಬೈಲ್ ನಂಬರ್ ಕೊರಿಯರ್‌ಗೆ ಲಿಂಕ್ ಆಗಿದೆ ಎಂದು ಹೆದರಿಸಿದ್ದ. ಅಲ್ಲದೇ ಕಸ್ಟಮ್ಸ್ ಅಧಿಕಾರಿಗಳಿಗೆ ಕರೆ ವರ್ಗಾವಣೆ ಮಾಡುತ್ತೇನೆ ಎಂದೂ ಹೆದರಿಸಿದ್ದ. ಪ್ರಕರಣದ ತನಿಖೆ ನಡೆಸಿ, ಆರೋಪದಿಂದ ಮುಕ್ತಗೊಳಿಸುತ್ತೇನೆಂದು ಭರವಸೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಂತರ ವಂಚಕ ದೂರುದಾರರ ವೈಯಕ್ತಿಕ ದಾಖಲೆಗಳು, ಕುಟುಂಬದ ಸದಸ್ಯರ ವಿವರ, ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸಿದ್ದ. ಆರೋಪಿಗಳ ಮಾತನ್ನು ನಿಜ ಎಂದು ನಂಬಿದ ಯುವತಿ ತನ್ನ ಮೂರು ವಿವಿಧ ಬ್ಯಾಂಕ್ ಖಾತೆಗಳಿಂದ 40.18 ಲಕ್ಷ ರೂ ವರ್ಗಾವಣೆ ಮಾಡಿದ್ದರು. ಇದೊಂದು ವಂಚನೆ ಎಂದು ಅರಿವಿಗೆ ಬಂದ ನಂತರ ಪ್ರಕೃತಿ ದೂರು ದಾಖಲಿಸಿದ್ದಾರೆ.

More articles

Latest article