ಪುಣೆ: ಮದ್ಯಪಾನ ಮಾಡಿ ತನ್ನ ಐಶಾರಾಮಿ ಕಾರನ್ನು ವೇಗವಾಗಿ ಚಲಾಯಿಸಿ ಇಬ್ಬರನ್ನು ಬಲಿ ತೆಗೆದುಕೊಂಡ 17 ವರ್ಷದ ಯುವಕನಿಗೆ ಬಾಲಾಪರಾಧಿಗಳ ನ್ಯಾಯಾಲಯ ಕೇವಲ ಹದಿನೈದು ಗಂಟೆಗಳಲ್ಲಿ ಜಾಮೀನು ನೀಡಿದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ ವ್ಯಾಪಕವಾಗಿ ಸ್ಫೋಟಗೊಂಡಿದ್ದು, ಇದು ಅಪಘಾತವಲ್ಲ, ಕೊಲೆ. ಕೊಲೆಗಡುಕನಿಗೆ ಕಠಿಣ ಶಿಕ್ಷೆ ನೀಡಿ ಎಂಬ ಆಗ್ರಹ ಕೇಳಿಬಂದಿದೆ.
ಬಾಲಾಪರಾಧಿಗಳ ನ್ಯಾಯಾಲಯ ಕಾರು ಚಲಾಯಿಸಿದ ಯುವಕನಿಗೆ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಲಾದ ಷರತ್ತುಗಳ ಪೈಕಿ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಮಿತಿಯಲ್ಲಿ ಪ್ರಬಂಧ ಬರೆಯುವಂತೆ ಆದೇಶಿಸಿದೆ. ಇದೇನು ತಮಾಶೆಯೇ? ಇಬ್ಬರು ಅಮಾಯಕರನ್ನು ಬಲಿತೆಗೆದುಕೊಂಡವನಿಗೆ ಇದೆಂಥ ಕಟ್ಟಳೆ? ಜೀವಗಳಿಗೆ ಬೆಲೆ ಇಲ್ಲವೆ ಎಂದು ಜನರು ಪ್ರಶ‍್ನಿಸುತ್ತಿದ್ದಾರೆ.
ಪುಣೆಯಲ್ಲಿ ನಿನ್ನೆ ನಡೆದ ಭೀಕರ ಅಪಘಾತವೊಂದರಲ್ಲಿ 17 ವರ್ಷ ವಯಸ್ಸಿನ ಯುವಕ ತನ್ನ ಗೆಳೆಯರೊಂದಿಗೆ ಐಶಾರಾಮಿ ಕಾರಿನಲ್ಲಿ ತೆರಳುವಾಗ ಬೈಕ್ ಗೆ ಡಿಕ್ಕಿ ಹೊಡೆದು, ಇಬ್ಬರೂ ಬೈಕ್ ಸವಾರರ ಸಾವಿಗೆ ಕಾರಣನಾಗಿದ್ದ. ಅಪಘಾತಕ್ಕೂ ಮುನ್ನ ಈತ ಗೆಳೆಯರೊಂದಿಗೆ ಬಾರ್ ಒಂದರಲ್ಲಿ ಕುಳಿತು ಮದ್ಯಪಾನ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿದೆ. ಯುವಕ ಮುಂಬೈನ ಉದ್ಯಮಿಯೊಬ್ಬನ ಪುತ್ರನಾಗಿದ್ದು ತನ್ನ ಒಂದೂವರೆ ಕೋಟಿ ರುಪಾಯಿ ಮೌಲ್ಯದ ಪೋರ್ಶೆ ಕಾರನ್ನು ಕುಡಿದು ಚಲಾಯಿಸಿ ಇಬ್ಬರ ಜೀವಗಳನ್ನು ಬಲಿತೆಗೆದುಕೊಂಡಿದ್ದಾನೆ.
ಮಹಾರಾಷ್ಟ್ರದಲ್ಲಿ 25 ವರ್ಷದ ಕೆಳಗಿನವರು ಮದ್ಯಪಾನ ಮಾಡುವಂತಿಲ್ಲ ಎಂಬ ಕಾನೂನು ಇದ್ದು, ಬಾರ್ ನಲ್ಲಿ 17 ವರ್ಷದ ಯುವಕನಿಗೆ, ಆತನ ಸ್ನೇಹಿತರಿಗೆ ಮದ್ಯ ಸರಬರಾಜು ಮಾಡಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಬಾರ್ ಸೀಜ್ ಮಾಡಲಾಗಿದ್ದು, ಬಾರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟ ಅನೀಶ್ ಅವೈದ್ಯ ಎಂಬಾತನ ಕುಟುಂಬಸ್ಥರು ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಅನೀಶ್ ಸಾವು ಅಪಘಾತವಲ್ಲ, ಕೊಲೆ ಎಂದು ಆರೋಪಿಸಿದೆ.
ಸಾರ್ವಜನಿಕರ ಆಕ್ರೋಶ, ಸಾಮಾಜಿಕ ಸಂಘಟನೆಗಳ ಒತ್ತಡದಿಂದಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಪುಣೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಯುವಕನಿಗೆ ಜಾಮೀನು ನೀಡಿರುವುದನ್ನು ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಬಾಲಾಪರಾಧಿಗಳ ನ್ಯಾಯಾಲಯ ಸಡಿಲವಾಗಿ ನಡೆದುಕೊಂಡಿದೆ. ಆರೋಪಿಯು ಮಾಡಿರುವುದು ಹೀನಕೃತ್ಯವಾಗಿದೆ ಎಂದು ಹೇಳಿದ್ದಾರೆ.
200 ಕಿ.ಮೀ ವೇಗದಲ್ಲಿ ಬರುತ್ತಿದ್ದ ಪೋರ್ಶೆ ಕಾರು ಮಧ್ಯಾಹ್ನ 2.15ರ ವೇಳೆಗೆ ಬೈಕ್ ಒಂದಕ್ಕೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯನ್ನು ವಿವರಿಸಿದ್ದಾರೆ. ಘಟನೆಯಲ್ಲಿ ಬೈಕ್ ಓಡಿಸುತ್ತಿದ್ದಅನೀಶ್ ಅವೈದ್ಯ ಮತ್ತು ಅಶ್ವಿನಿ ಕೋಸ್ಟ ಎಂಬುವವರು ಮೃತಪಟ್ಟಿದ್ದರು. ಇಬ್ಬರೂ 24 ವರ್ಷದವರಾಗಿದ್ದು ಇಂಜಿನಿಯರಿಂಗ್ ವೃತ್ತಿ ಮಾಡುತ್ತಿದ್ದರು. ಕಾರು ಅಪ್ಪಳಿಸಿದ ವೇಗಕ್ಕೆ ಅಶ್ವಿನಿ ಕೋಸ್ಟ 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದರು, ಅನೀಶ್ ಅವರು ಪಾರ್ಕ್ ಮಾಡಲಾಗಿದ್ದ ಕಾರು ಒಂದರ ಒಳಗೆ ಸೇರಿಹೋಗಿದ್ದರು.
ಕೂಡಲೇ ಆರೋಪಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಅಶ್ವಿನಿ ಕೋಸ್ಟ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ನಾವು ಇನ್ನೂ ಶಾಕ್ ನಲ್ಲಿದ್ದೇವೆ. ಅದು ಹೇಗೆ ಆತನಿಗೆ ಹದಿನೈದು ಗಂಟೆಗಳ ಒಳಗೆ ಜಾಮೀನು ದೊರೆಯಿತು? ಆತ ಮಾತ್ರವಲ್ಲ ಆತನ ಕುಟುಂಬದವರನ್ನೂ ತನಿಖೆಗೆ ಒಳಪಡಿಸಬೇಕು. ಆತನಿಂದ ನಮ್ಮ ಮನೆಯ ಅಮಾಯಕ ಹುಡುಗಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಅವರು ನೊಂದು ನುಡಿದಿದ್ದಾರೆ.
ಈ ನಡುವೆ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ನಡೆದ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಾವು ಈಗ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದೇವೆ. ನಡೆದಿರುವ ಹೀನ ಅಪರಾಧ ಎಂದು ಹೇಳಿದ್ದಾರೆ.