ಬೆಂಗಳೂರು: ವರದಕ್ಷಿಣೆ ಕಿರುಕುಳ ಮತ್ತು ಪತಿಯ ವಿವಾಹೇತರ ಸಂಬಂಧದಿಂದ ಬೇಸತ್ತ ಗ್ರಾಮ ಪಂಚಾಯತಿ ಅಧ್ಯಕ್ಷೆಯೊಬ್ಬರು ತನ್ನ 5 ವರ್ಷದ ಮಗುವನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶೃತಿ ಎಂದು ಗುರುತಿಸಲಾಗಿದೆ. ಆಕೆ ತನ್ನ ಮಗಳು ರೋಷಿಣಿಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಅವರು ಪಾವಗಡ ತಾಲೂಕಿನ ಗ್ರಾಮವೊಂದರ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶೃತಿ ಅವರು 10 ವರ್ಷಗಳ ಹಿಂದೆ, ಚಾರ್ಟರ್ಡ್ ಅಕೌಂಟೆಂಟ್ ಗೋಪಾಲಕೃಷ್ಣ ಎಂಬಾತನನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಗೋಪಾಲಕೃಷ್ಣ ಪತ್ನಿ ಶೃತಿ ಅವರಿಗೆ ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದ. ಜತೆಗೆ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ.
ಪತಿಯ ಕಿರುಕುಳಕ್ಕೆ ಬೇಸತ್ತ ಶೃತಿ ಪುತ್ರಿಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಬರೆದಿದ್ದ ಡೆತ್‌ನೋಟ್ ಪೊಲೀಸರ ಕೈಗೆ ಸಿಕ್ಕಿದೆ. ಪತಿಯ ವರದಕ್ಷಿಣೆ ಕಿರುಕುಳ ಮತ್ತು ವಿವಾಹೇತರ ಸಂಬಂಧದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್ಅನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗೋಪಾಲಕೃಷ್ಣ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.