ಬಳ್ಳಾರಿ: ಪರಿಶಿಷ್ಟ ಪಂಗಡದಲ್ಲಿರುವ ವಾಲ್ಮೀಕಿ ನಾಯಕ ಸಮುದಾಯವೂ ಸೇರಿದಂತೆ ಎಲ್ಲ ತಳಸಮುದಾಯಗಳು ಸಂಘಟಿತರಾದರೆ ಮಾತ್ರ ಸಾಮಾಜಿಕ,ರಾಜಕೀಯ, ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಪರಿಶಿಷ್ಟ ಪಂಗಡಗಳ ನೌಕರರು ಹಾಗೂ ಜನಪ್ರತಿನಿಧಿಗಳ ಸಮಾಲೋಚನೆ ಸಭೆ ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ ಪಡೆದು ನೌಕರಿ ಮಾಡುತ್ತಿರುವ ಶೋಷಿತ ಸಮಾಜದ ನೌಕರರ ಮೇಲೆ ಹೆಚ್ಚು ಜವಾಬ್ದಾರಿಗಳಿರುತ್ತವೆ. ಪರಿಶಿಷ್ಟ ಪಂಗಡದ ನೌಕರರು ತಮ್ಮ ವೃತ್ತಿ ಸಂಬಂಧಿತ ಮುಂಬಡ್ತಿ, ವರ್ಗಾವಣೆ, ಸ್ಥಳ ನಿಯುಕ್ತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಂಘಟಿತರಾದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಮಾರ್ಗಗಳು ಗೋಚರಿಸುತ್ತವೆ. ಕಾನೂನು ತಜ್ಞ ಎಲ್.ಜಿ.ಹಾವನೂರ ಅವರು ಹಾಗೂ ಅವರಿಗಿಂತ ಹಿಂದಿನಿಂದಲೂ ಸಮಾಜದ ಸಂಘಟನೆಗೆ ಅನೇಕರು ಶ್ರಮಿಸಿದ್ದಾರೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ಪ್ರಜ್ಞಾವಂತನೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಮಹಾಸ್ವಾಮಿಗಳು ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ನಾವೆಲ್ಲ ಅಳವಡಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದರು.
ಶಾಸಕರಾದ ಅನ್ನಪೂರ್ಣ ತುಕಾರಾಮ,ಕರೆಮ್ಮನಾಯಕ,ಅನೀಲ್ ಚಿಕ್ಕಮಾದು,ಟಿ.ರಘುಮೂರ್ತಿ,ಜೆ.ಎನ್.ಗಣೇಶ್ , ಡಾ.ಎನ್.ಟಿ.ಶ್ರೀನಿವಾಸ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ವರಮೂರ್ತಿ ವೈ.ಪಿ.,ಲೋಕೇಶ ನಾಯಕ ,ಪಂಪಾಪತಿ ಎಸ್ ಟಿ ನೌಕರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸಚಿವರಿಗೆ ಮನವಿ ಅರ್ಪಿಸಿದರು.