ಬೆಂಗಳೂರು: ದುಪ್ಪಟ್ಟು ಲಾಭ ನೀಡುವುದಾಗಿ ನಂಬಿಸಿ, ಸುಮಾರು 20 ಕ್ಕೂ ಹೆಚ್ಚು ಜನರಿಂದ ರೂ. 84 ಲಕ್ಷ ಪಡೆದು ವಂಚಿಸಿದ ಆರೋಪದಡಿಯಲ್ಲಿ ಇಬ್ಬರ ವಿರುದ್ಧ ಉತ್ತರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ಹೆಸರಘಟ್ಟ ಮುಖ್ಯ ರಸ್ತೆ ಎಜಿಬಿ ಲೇಔಟ್ ನಿವಾಸಿ ಅಶೋಕ್ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪರಂ ಸಕ್ಲೇಜಾ ಮತ್ತು ಲತಾ ಎಂಬುವವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಎಫ್ ಐಆರ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಗುರು ಮಾರ್ಕೆಟಿಂಗ್ ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಅಶೋಕ್ ಗೆ ಆರೋಪಿಗಳ ಪರಿಚಯವಾಗಿದೆ. ಎಸ್ ಜೆಆರ್ ಇ ಎಂಬ ಕಂಪನಿ ದುಪ್ಪಟ್ಟು ಲಾಭ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ. ಹಣ ಹೂಡಿಕೆ ಮಾಡಿಸಿದರೆ ಸಂಬಳದ ಜತೆಗೆ ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಅಶೋಕ್ ಒಪ್ಪಿಕೊಂಡಿದ್ದಾರೆ. ನಂತರ ಆರೋಪಿಗಳು ಕಂಪನಿಯ ಸ್ಕೀಮ್ ಗಳನ್ನು ಕುರಿತು ವಿವರಿಸಿದ್ದರು.
ಅಶೋಕ್, ತನ್ನ ಸ್ನೇಹಿತರು, ಸಹದ್ಯೋಗಿಗಳು ಮತ್ತು ಬಂಧುಗಳಿಗೆ ಸ್ಕೀಂಗಳನ್ನು ಕುರಿತು ಪುಸಲಾಯಿಸಿ ಹಣ ಹೂಡಿಕೆ ಮಾಡಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿಯಿಂದ ಸುಮಾರು ರೂ. 89 ಲಕ್ಷ ಸಂಗ್ರಹಿಸಿ ನಗದು ರೂಪದಲ್ಲಿ ಆರೋಪಿಗಳಿಗೆ ನೀಡಿದ್ದಾರೆ. ಹಣ ಪಡದ ಆರೋಪಿಗಳು ಹಣ ನೀಡದೆ, ಮೊಬೈಲ್ ಕರೆಗೂ ಸಿಗದೆ ಪರಾರಿಯಾಗಿದ್ದಾರೆ ಎಂದು ಅಶೋಕ್ ದೂರಿನಲ್ಲಿ ಆರೋಪಿಸಿದ್ದಾರೆ.