RSSಗೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂಬ ನವರಂಗಿ ಆಟ ಆಡಬೇಡಿ; ಶೆಟ್ಟರ್‌ ವಿರುದ್ಧ ಹರಿಪ್ರಸಾದ್‌ ಆಕ್ರೋಶ

Most read

ಬೆಂಗಳೂರು: ಆರ್‌ಎಸ್‌ಎಸ್ ಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು “ನವರಂಗಿ”ಆಟವಾಡುವುದನ್ನು ಕೈ ಬಿಡಿ ಎಂದು ಬಿಜೆಪಿ ಸಂಸದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬೆ.ಕೆ.ಹರಿಪ್ರಸಾದ್‌ ಹರಿಹಾಯ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಶೆಟ್ಟರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಗೋಸುಂಬೆ ನಾಟಕ ಯಾಕೆ ಶೆಟ್ಟರ್ ಅವರೇ? ಚುನಾವಣಾ ರಾಜಕೀಯದಲ್ಲಿ ಮತದಾರರು ನೀಡಿದ ಸೋಲು ಗೆಲುವಿನ ತೀರ್ಪಿಗೆ ತಲೆ ಬಾಗಿದ್ದೇನೆ ಹೊರತು, ಅಧಿಕಾರಕ್ಕಾಗಿ ಪಕ್ಷ- ಸಿದ್ದಾಂತವನ್ನು ಬದಲಾಯಿಸಿಲ್ಲ Jagadish Shettar  ಅವರೇ..

ನನ್ನ ಇಡೀ ಚುನಾವಣಾ ರಾಜಕೀಯ ಜೀವನದಲ್ಲಿ ಎಂದೂ ಜಾತಿಯ ಹೆಸರಿನಲ್ಲಿ, ಹಣ ಬಲದ ಮೇಲೆ ಚುನಾವಣೆ ಎದುರಿಸಿಲ್ಲ. ಮುಂದೆಯೂ ಜಾತಿ,ಧರ್ಮ, ಹಣಬಲ, ತೋಳ್ಬಲದ ಮೇಲೆ ಚುನಾವಣೆ ನಡೆಸುವುದೂ ಇಲ್ಲ.

ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದೇ ನೇರವಾಗಿ ಗುಜರಾತಿನಲ್ಲಿ ಮುಖ್ಯಮಂತ್ರಿಯಾದವರ ಹೆಸರಿನ ಮೇಲೆಯೇ ಸಂಸದರಾಗಿ ಚುನಾವಣಾ ರಾಜಕೀಯದ ಸೋಲು ಗೆಲುವಿನ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ. ಅಷ್ಟಕ್ಕೂ ಸಂಘಕ್ಕೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು “ನವರಂಗಿ”ಆಟವಾಡುವಾಗ ಗೋಸುಂಬೆ ನಾಟಕ ಯಾಕೆ ಶೆಟ್ಟರ್ ಅವರೇ?

ದೇಶದಲ್ಲೇ ಮಾದರಿ ಚುನಾವಣೆ ನಡೆಸಿ ಗೆಲ್ಲುವ ನಿಮ್ಮ ಚುನುವಣಾ ತಂತ್ರಗಾರಿಕೆ ಬಗ್ಗೆ ಮಾತಾಡುವುದು ಬೇಡ ಬಿಡಿ ಶೆಟ್ಟರ್ ಅವರೇ. ಅದರ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಬೇಡಿ. ಆದರೆ ಚುನಾವಣೆ ರಾಜಕೀಯಕ್ಕೂ, ಪ್ರಜಾಪ್ರಭುತ್ವದ ಪ್ರಕ್ರಿಯೆಗೂ, ಸಂಘ ಪರಿವಾರದ ಸಂಬಂಧಗಳ ಬಗ್ಗೆ ಚರ್ಚೆಗೆ ಸಿದ್ಧವಿದ್ದೇನೆ.

ಹಾದಿ ಬೀದಿಯಲ್ಲಿ ಮಾತಾಡೋದು ಬೇಡ. ಸಂಘ ಪರಿವಾರದ ಕರಾಳ ಇತಿಹಾಸವನ್ನು ದಾಖಲೆ ಸಮೇತ ಬಿಚ್ಚಿಡಲು ನಾನಂತೂ ಸಿದ್ಧನಿದ್ದೇನೆ. ಅದಕ್ಕಾಗಿ ಬಹಿರಂಗ ಚರ್ಚೆಗೆ ವೇದಿಕೆಯಾಗಲಿ. ಒಂದಿಷ್ಟು ತಯಾರಿ-ತಾಲೀಮುಗಳೊಂದಿಗೆ ಬಿಜೆಪಿ ನಾಯಕರಾದಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರನ್ನೂ ಕರೆದುಕೊಂಡು ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.

More articles

Latest article