ನೋಡಬಾರದೇ ಚೀಲದೊಳಗನು..

Most read

ಮಹಿಳೆಯರಿಗೆ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು.  ಇಂದಿಗೂ ಇದೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ ಬದುಕುವುದಕ್ಕಿಂತ ವ್ಯಕ್ತಗೊಳ್ಳುವ ದಾರಿಯನ್ನು ಹೆಣ್ಣು ಮನಸ್ಸುಗಳು ಆಯ್ದುಕೊಂಡಿವೆ. ಕಲಿಕೆ, ಗ್ರಹಿಕೆಯ ನೆಲೆಗಳು, ಮಿತಿಗಳು ವಿಸ್ತಾರವಾಗಿವೆ. ಹಾಗಾಗಿ ಈ ಲೇಡಿಸ್ ಬ್ಯಾಗಿನ ಒಡಲಾಳವನ್ನು ಸ್ವಲ್ಪ ಮಟ್ಟಿಗೆ ನಾವೆಲ್ಲ ಇಂದು ಅರಿತಿದ್ದೇವೆ – ನಾಗರೇಖಾ ಗಾಂವಕರ, ಉಪನ್ಯಾಸಕರು.

ಪ್ರಿಯ ಓದುಗರೇ,

ಲೇಡಿಸ್ ಬ್ಯಾಗ್ ಎನ್ನುವ ತಲೆಬರಹದಲ್ಲಿ ಲೇಖನಗಳ ಬರೆಯಲು ಶುರುವಿಟ್ಟುಕೊಂಡಿದ್ದೇನೆ. ಲೇಡಿಸ್ ಬ್ಯಾಗ್ ಬಗ್ಗೆಯೇ ಅಂತದ್ದೇನಿದೆ? ಎಂಬ ಪ್ರಶ್ನೆ ನಿಮಗೆ ಕಾಡಬಹುದು.. ಹೆಣ್ಣು ಮಕ್ಕಳ ವಿಷಯವೇ ಹಾಗೇ. ಪುರುಷ ಜಗತ್ತಿನ ಪ್ರಕಾರ ಅದರೊಳಗೆ ಏನೂ ಇರುವುದಿಲ್ಲ, ಇರುವುದು ಇಲ್ಲದಿರುವುದರ ನಡುವೆ, ಇರಬಹುದಾದ ನೂರಾರು ಇರುವಿಕೆಗಳು ಈ ಜಗತ್ತಿಗೆ ಕಾಣುವುದಿಲ್ಲ. ಅದನ್ನು ಕಾಣಿಸುವ ಅದೆಷ್ಟೋ ಪ್ರಯತ್ನಗಳು ನಡೆದು ಸೋತರೂ, ಕುರುಡು ಜಗದ ನಡೆಗೆ ಮತ್ತೆ ಮತ್ತೆ ಪ್ರಯತ್ನಿಸುವುದೇ ಈ ಬ್ಯಾಗಿನ ಸಣ್ಣ ಆಸೆ. ನೀವು ಅದನ್ನು ಜಂಬದ ಚೀಲ ಎಂದುಕೊಳ್ಳದೇ ಉಂಡ ಊಟದ, ನೋಡಿದ ನೋಟದ, ಕಾಡಿದ ಕಾಟದ, ಗೆದ್ದ ಆಟದ, ಈ ಎಲ್ಲಾ ಪಾಠದ ಉಕ್ತ ಲೇಖನ ಎಂದುಕೊಳ್ಳಿ.

ಲೇಡಿಸ್ ಬ್ಯಾಗ್ ಹೆಣ್ಣುಮಕ್ಕಳು ಹೊರ‌ ಹೋಗುವಾಗ, ಕೆಲಸಕ್ಕೆ ಹೋಗುವಾಗ ಅಗತ್ಯ ವಸ್ತುಗಳ ಜೊತೆ ಕೊಂಡೊಯ್ಯಲು ಬಳಸುವ ಚೀಲ. ಇದು ಸಾಮಾನ್ಯ ಅನಿವಾರ್ಯತೆಯೂ ಹೌದು. ನಮ್ಮ ಅಜ್ಜಿ, ಮುತ್ತಜ್ಜಿಯರಿಗೆ ಈ ಬ್ಯಾಗ್ ಅಪರಿಚಿತವಾಗಿತ್ತಾದರೂ, ಅವರದ್ದಾಗಿ ಇದರೊಂದಿಗೆ ಹೋಲಿಸಬಹುದಾದ ಪುಟ್ಟ ಚೀಲವಿರುತ್ತಿತ್ತು. ಅದನ್ನವರು ಸಂಚಿ ಎಂದು ಕರೆಯುತ್ತಿದ್ದರು. ಸಂಚಿ ಎಂದರೆ ಚೀಲ. ನನ್ನಜ್ಜಿಯ ಸೊಂಟದಲ್ಲಿ ಯಾವಾಗಲೂ ಒಂದು ಸಂಚಿ ತೂಗಾಡುತ್ತಿತ್ತು. ಅದರೊಳಗೆ ಬೀಗದ ಕೈಗಳು,  ಕುಂಕುಮದ ಡಬ್ಬಿ, ಪುಟ್ಟ ಕನ್ನಡಿ ಒಂದು ಖಾನೆಯಲ್ಲಿದ್ದರೆ, ಇನ್ನೊಂದು ಖಾನೆಯಲ್ಲಿ ಎಲೆ ಅಡಿಕೆ, ಸುಣ್ಣದ ಡಬ್ಬಗಳು ಇರುತ್ತಿದ್ದವು.  ಅವಳದನ್ನು ತೆರೆದ ಪುಸ್ತಕದಂತೇ ನಮಗೆ ತೋರಿಸುತ್ತಿದ್ದರೂ, ನಮ್ಮಜ್ಜನಿಗೆ ಮಾತ್ರ ಎಂದಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಬಹುಶಃ ಅದು ಅವಳ ಖಜಾನಾ ಖಾನೆಯೂ ಆಗಿತ್ತೆಂದು ಕಾಣುತ್ತದೆ.  ಒಂದಾಣೆ, ನಾಲ್ಕಾಣೆಗಳು ಬಹುಶಃ ಇರುತ್ತಿದ್ದವೇನೋ? ಈ ಸಂಚಿ ಒಂದು ಮಾತ್ರ ಅವರು ತಮಗಾಗಿ ಬಳಸಿಕೊಳ್ಳುತ್ತಿದ್ದ ಸ್ವಂತ ಆಸ್ತಿಯಂತೆ ಕಾಣಿಸುತ್ತಿತ್ತು.

ಸಂಚಿ- ಸಾಂದರ್ಭಿಕ ಚಿತ್ರ

ಇನ್ನು  ನಮ್ಮಮ್ಮ ಒಂದಿಷ್ಟು ಆಧುನಿಕತೆಗೆ ಒಗ್ಗಿಕೊಂಡಿದ್ದರು. ನನ್ನಮ್ಮ, ಚಿಕ್ಕಮ್ಮಂದಿರು  ತಮ್ಮ ಅತಿ ಸ್ವಂತದ್ದೆಂದು ಭಾವಿಸಿ ಬಳಸುತ್ತಿದ್ದ ಲೇಡಿಸ್ ಬ್ಯಾಗುಗಳು ಅವರಲ್ಲಿದ್ದವು. ಅವರ ಸ್ವಾತಂತ್ರ್ಯದ ಪ್ರತೀಕವಾಗಿ ಅವರ ಕೈಯಲ್ಲಿ ಮಾತ್ರ ಅಲಂಕೃತವಾಗಿ ಖುಷಿಗೊಳ್ಳುತ್ತಿದ್ದವು. ನಮ್ಮಮ್ಮ ಹೊರ ಹೋಗುವ ಸಂದರ್ಭದಲ್ಲೆಲ್ಲಾ ಈ ಬ್ಯಾಗ್ ಅವರ ಕೈಗೆ ಬಂದುಬಿಡುತ್ತಿತ್ತು. ಅದು ಬಹಳ ಸುಂದರವಾದ ಕಪ್ಪುಬಣ್ಣದ ಮಧ್ಯಮ ಗಾತ್ರದ ಲೇಡಿಸ್ ಬ್ಯಾಗ್ ಆಗಿತ್ತು. ನನಗಿನ್ನೂ ನೆನಪಿದೆ. ಅಮ್ಮ ಅದರಲ್ಲಿ ಹಣದ ಸಣ್ಣ ಪರ್ಸ್ ಹಾಗೂ ಒಂದು ಸೆಂಟ್ ಬಾಟಲ್‍ನ್ನು ಜೋಪಾನವಾಗಿ ಕಾಯ್ದಿಟ್ಟುಕೊಂಡಿದ್ದರು. ಅದರೊಂದಿಗೆ ಬೀರುವಿನ ಬೀಗವೂ, ಕೆಲವು ಖಾಸಾ ವಸ್ತುಗಳು ಇದ್ದವು. ಸೆಂಟ್ ಡಬ್ಬದ ಪರಿಮಳಕ್ಕೋ ಏನೋ ಈ ಬ್ಯಾಗ್ ಹೊರತೆಗೆದರೆ ಸಾಕು ಅದರ ಪರಿಮಳವೋ ಆಹಾ! ಎನ್ನುವಷ್ಟು ಹತ್ತು ಮಾರಿಗೂ ಹೆಚ್ಚು ದೂರಕ್ಕೆ ಸೆಳೆಯುತ್ತಿತ್ತು. ಈ ಬ್ಯಾಗ್ ಹಿಡಿಯಲು ನಾನೂ ನನ್ನಕ್ಕನೂ ಸದಾ ಕಾದಾಡುತ್ತಿದ್ದೆವು.  ಆದರೆ ಅಮ್ಮ ಎಂದಿಗೂ ಯಾರಿಗೂ ಆ ಬ್ಯಾಗ್ ನೀಡುತ್ತಿರಲಿಲ್ಲ. ಅಂತ ಗಟ್ಟಿ ನಿಲುವುಗಳು ಈ ಬ್ಯಾಗಿನ ವಿಶೇಷವಿರಬಹುದು.

ಹೆಣ್ಣು ಮಕ್ಕಳು ಕೈಯಲ್ಲಿ ಹಿಡಿದುಕೊಳ್ಳುವ ಈ ಲೇಡೀಸ್ ಬ್ಯಾಗ್ ಮೇಲೆ ಹೆಂಗಸರಿಗೆ ಮಾತ್ರವಲ್ಲ ಗಂಡಸರಿಗೂ ಅದೇನೋ ಆಸಕ್ತಿ ಕೊಂಚ ಜಾಸ್ತಿಯೇ ಎಂಬ ಮಾತು ಕೇಳಿದ್ದೇನೆ. ಗಂಡಸರು ಸಾಮಾನು ತರುವಾಗ ಮಾತ್ರ ಚೀಲಗಳನ್ನು ಬಳಸಿದರೆ ಈ ಹೆಣ್ಣು ಮಕ್ಕಳು ಪೇಟೆಗೆ ಹೋಗಲೂ, ಕೆಲಸಕ್ಕೆ ಹೋಗಲೂ, ಮನೆಯಿಂದ ಹೊರಹೋಗಬೇಕಾದ ಎಲ್ಲ ಸಂದರ್ಭದಲ್ಲೂ ಈ ಬ್ಯಾಗ್ ಹೊತ್ತು ಹೋಗುವುದು ಕೆಲವು ಗಂಡಸರಿಗೆ  ಅಚ್ಚರಿಯನ್ನೂ, ಇನ್ನು ಕೆಲವರಲ್ಲಿ ಅನುಮಾನವನ್ನೂ ಮೂಡಿಸಿ ಕುಟುಂಬದಲ್ಲಿ ಬಿರುಗಾಳಿಗಳು ಎದ್ದ ಅನೇಕ ಸಂಗತಿಗಳ ಬಗ್ಗೆ ಕೇಳಿದ್ದಿದೆ. ಆಗಾಗ ನನ್ನ ಒಪ್ಪಿಗೆ ಇಲ್ಲದೇ ನಮ್ಮ ಮನೆಯಲ್ಲೂ ಈ ಚೀಲದ ಶೋಧನೆಗಳು ನಡೆದು, ಗುಮಾನಿ ಎದ್ದಾಗಲೆಲ್ಲಾ ಮಾತಿನ ಬಾಣಗಳು ಎದೆ ತಾಕಿದ್ದಿದೆ. ಅದರೊಳಗೆ ಏನೇನೆಲ್ಲಾ ಇದ್ದಿರಬಹುದು ಎಂಬ ಸಣ್ಣ ಸಂಶಯವೋ, ಅಥವಾ ಅದರಲ್ಲಿ ಏನೇನೆಲ್ಲಾ ಬಚ್ಚಿಟ್ಟುಕೊಂಡಿರಬಹುದು ಎಂಬ ಸಂಶಯ ಇತ್ಯಾದಿ ಸೇರಿ ಅದರ ಬಗ್ಗೆ ಆಸಕ್ತಿ, ಹಲವು ಬಾರಿ ಅತೃಪ್ತಿ, ಕೆಲವು ಬಾರಿ ಅದರ ಮೇಲೆ ಸವಾರಿಯೂ ನಡೆದಿರುತ್ತದೆ. ಒಟ್ಟಾರೆ ಆಧುನಿಕವಾಗಿ ಬದುಕುತ್ತಿದ್ದರೂ, ಶಿಕ್ಷಣದ ಮೌಲ್ಯ , ಸ್ತ್ರೀ ಸ್ವಾಯತ್ತ ಮೌಲ್ಯಗಳ ಕುರಿತು ಪುಂಖಾನುಪುಂಖ ಮೇಲ್ಮೈ ಹೇಳಿಕೆಗಳು ಬರುತ್ತಿದ್ದರೂ, ಹೆಣ್ಣಿನ ಪ್ರತಿ ನಡೆನುಡಿ, ಸಂಬಂಧ, ಅವಳ ಆಸಕ್ತಿ, ಎಲ್ಲದರಲ್ಲೂ ತನ್ನ ಪಾಲಿರಬೇಕು ಇಲ್ಲವೇ ಹಕ್ಕಿರಬೇಕು, ಇರಲೇಬೇಕು ಎಂಬ  ಒಂದಂಶದ ಗಂಡು ಧೋರಣೆ ಇಂದಿಗೂ ಜೀವಂತ.

ಇನ್ನೊಂದು ಸಂಗತಿ. ಈ ಲೇಡೀಸ್  ಬ್ಯಾಗಿನ ಸೌಂದರ್ಯ ಅದನ್ನು ಧರಿಸಿದವಳ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಅವಳ ಮೌಲ್ಯವನ್ನೂ ಅಳೆಯುತ್ತದೆ ಎಂಬುದು ಈಗೀನ ಕಾರ್ಪೋರೆಟ್ ಜಗತ್ತು ಮೂಡಿಸಿದ ಹೊಸ ಜ್ಞಾನೋದಯ. ಮಾಲ್‌ ಗಳಿಗೆ ಅಪರೂಪಕ್ಕೆ ಭೇಟಿಕೊಟ್ಟರೆ ಅಲ್ಲಿ ಹುಡುಗಿಯರ ದಂಡು ದಾಂಗುಡಿ ಈ ಬ್ಯಾಗುಗಳು, ಬಟ್ಟೆಗಳು, ಚಪ್ಪಲಿಗಳ ಸುತ್ತ ನೆರೆದಿರುತ್ತದೆ. ಗಾಂಜಾ ಅಫೀಮುಗಳಷ್ಟೇ ಅಮಲು ತರುವ ಖಯಾಲಿ ಎಂದರೆ ಅದು ಶಾಪಿಂಗ್ ಕ್ರೇಜ್. ಹೆಚ್ಚಾಗಿ ಯುವ ಸ್ತ್ರೀಸಮೂಹವನ್ನು ಈ ಅಮಲು ಆವರಿಸಿಕೊಂಡಿದೆ. ದೊಡ್ಡ ದೊಡ್ಡ ಮಾಲುಗಳಲ್ಲಿ ಮಾರಾಟಕ್ಕಿರುವ ಈ ಬ್ಯಾಗುಗಳ ದರ ನೋಡಿದರೆ ತಲೆ ತಿರುವದಷ್ಟೇ ಅಲ್ಲ, ಕಾಲು ತನ್ನಿಂದ ತಾನೇ ಆ ಜಾಗೇ ಬಿಟ್ಟು ಓಡುವಂತೆ ಪ್ರೇರೇಪಿಸುತ್ತದೆ. ನನ್ನೂರಿನ ಸಣ್ಣ ಅಂಗಡಿಗಳಲ್ಲಿ ದೊರೆಯುವಂತದ್ದೇ ಅಲ್ಲಿಯೂ ದೊರೆಯುತ್ತದೆಯಾದರೂ ಆ ಅಂಗಡಿಯಲ್ಲಿನ ಏರ್‌ಕಂಡೀಶನ್ ಚಾರ್ಚು, ಸುರಸುಂದರಾಂಗ ಪೇಜ್ ಬಾಯ್ಸಗಳು, ಸುಂದರಿಯರಾದ ಸೇಲ್ಸ್‌ಗರ್ಲ್‌ ಗಳ ತಿಂಗಳ ಸಂಬಳವೂ ನಮ್ಮ ಕಿಸೆಗೆ ಕತ್ತರಿಯಾಡಿಸಿ ನೀಡುವುದಾಗಿರುವುದು ಇದಕ್ಕೆ ಕಾರಣ. ಕಾರ್ಪೋರೆಟ್ ಜಗತ್ತು ವ್ಯಾಪಾರೀಕರಣದ ನೆಲೆಯಲ್ಲಿ ಹೆಣ್ಣನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂಬುದನ್ನು ನೋಡಿದರೆ ಮಹಿಳಾ ಗೌರವ, ಸ್ಥಾನಮಾನಗಳ ಬಗ್ಗೆ ಮಾತನಾಡಬೇಕಾದಾಗಲೆಲ್ಲಾ ಬಾಯಿ ಕಟ್ಟುತ್ತದೆ.

ಮಹಿಳೆ ಮತ್ತವಳ ಜಗತ್ತು ಬಹಳ ಚಿಕ್ಕದು ಎಂಬುದು ಸಾಮಾನ್ಯ ಅಭಿಪ್ರಾಯ. ಅಡುಗೆ ಮನೆಗಳಿಗೆ ಸೀಮಿತವಾಗಿದ್ದ ಅವಳ ಬದುಕು ಮಕ್ಕಳ ಪಾಲನೆ ಪೋಷಣೆಗಳಲ್ಲಿ ತನ್ನತನ ಮೆರೆಯುತ್ತಾ,  ತ್ಯಾಗದ ಪ್ರತಿಬಿಂಬವಾಗಿ ಬದುಕುವುದೇ ಸರ್ವಶ್ರೇಷ್ಠ ಸ್ತ್ರೀಪ್ರಜ್ಞೆ,  ಪುರುಷ ಚಿತ್ರಿತ ಪಾತ್ರಕ್ಕೆ ಯೋಗ್ಯವಾಗಿ ಬುದುಕುವುದೇ ಭಾಗ್ಯ ಎಂಬ ಭ್ರಮೆಯಲ್ಲಿ ಮುಗಿದು ಹೋಗುತ್ತಿತ್ತು. ಅವಳೊಳಗೂ ಒಂದು ಜಗತ್ತು, ಸದಾ ತುಡಿಯುವ ಮನಸ್ಸು ಇದೆ ಎಂಬುದನ್ನು ಆಕೆಯೇ ಉದ್ದೇಶಪೂರ್ವಕವಾಗಿಯೇ ಮೆಟ್ಟಿ, ಅದುಮಿ, ಸಾಯಿಸಿ ಬದುಕುತ್ತಿದ್ದಳು. ಆದರೂ ದನಕರುಗಳು ತಿಂದಿದ್ದನ್ನು ಆರಾಮದಲ್ಲಿ ಮತ್ತೆ ಹೊರತೆಗೆದು ಜಗಿದು ನುಂಗುವಂತೆ ತನ್ನ ಬಯಕೆಯ, ಆಸೆಯ ಕನಸುಗಳನ್ನು ನೆನೆದು ಆಗೀಗ ದೊಡ್ಡದಾಗೊಂದು ನಿಟ್ಟುಸಿರು ಚೆಲ್ಲಿ ಹಗುರವಾಗುತ್ತಿದ್ದಳು. ಇದು ಬಹುತೇಕ ನಮ್ಮ ಹಿಂದಿನ ತಲೆಮಾರುಗಳು ಅಂದರೆ ನನ್ನಮ್ಮ, ಅವರಮ್ಮನ ಬದುಕಿನ ಭಾಗವಾಗಿತ್ತು.  ಅವರಿಗೆ ಸ್ವಂತ ಬದುಕು, ಅದರ ಆಸ್ವಾದನೆ ಎಂಬುದು ಇಲ್ಲವೇ ಇಲ್ಲ ಎಂಬ ಅಲಿಖಿತ ನಿಯಮವನ್ನು ಯಾವ ಒತ್ತಾಯವಿಲ್ಲದೆಯೇ ಒಪ್ಪಿಕೊಂಡಿದ್ದರು. ಅಂತೆ ಬದುಕಿದ್ದರು ಕೂಡಾ. ಆದರೆ ಒಳಗೊಳಗೆ ತಣ್ಣಗೆ ಕಾರುತ್ತಿದ್ದ ಬೆಂಕಿಗೆ, ಅದರ  ಅಭಿವ್ಯಕ್ತಿಗೆ ಸಮಯವೂ, ಅವಕಾಶವೂ ಎರಡೂ ಇರದೇ ಕಾದ ತಪ್ಪಲೆಯ ಬುಡವಾಗಿ ಉರಿಯನ್ನು ತಡೆದುಕೊಳ್ಳುತ್ತಾ, ಆಗಾಗ ಬೇಯುತ್ತಾ, ನೋಯುತ್ತಾ, ಬದುಕನ್ನು ತ್ಯಾಗದ ಹಾದಿಯಲಿ ತೇಯ್ದರೂ   ಅವರದ್ದೆಂದು ಅಂದುಕೊಳ್ಳುವ ಏನೂ ಇಲ್ಲದಂತೆ  ಕಳೆದುಹೋದರು.

ಅವರದ್ದೆಂದು ಅಂದುಕೊಳ್ಳುವ ಏನೂ ಇರಲೇ ಇಲ್ಲವೇ? ಇತ್ತು  ಎಂದರೆ ಇತ್ತು. ಪುಟ್ಟಪುಟ್ಟ ಸಂಗತಿಗಳಲ್ಲಿ ಬದುಕಿನ ವಿನ್ಯಾಸಗಳ ತೆರೆದು ತೋರುವ ಇಲ್ಲ ಕಾಣುವ, ಕಾಣಿಸುವ ಜೀವನ್ಮುಖಿಗಳಾದ ಕಾರಣವೇ ಇಂದು ನಾವೂ ನೀವೂ ಹೀಗೆ ಬದುಕಿನ ಹರವಾದ ಬಯಲಿನಲ್ಲಿ ಸ್ವತಂತ್ರವಾಗಿ ಜೀವಿಸುವ ಕನಸು ಹೊತ್ತು ನಡೆಯುತ್ತಿರುವುದು. ಹೊತ್ತು ಹೆತ್ತ ಮಕ್ಕಳನ್ನು ಗಂಡನ ಹೆಸರಿಗೆ ಬಿಟ್ಟು, ಇತಿಹಾಸದ ಪುಟಗಳಲ್ಲಿ ಬರೀ ಅವನ ಕಥೆಯನ್ನೇ ಹಾಡಿಹೊಳಗುವುದನ್ನು ಕೇಳಿಯೂ ಬರಿಗೈ ದಾನಮ್ಮನಂತೆ ಅತೃಪ್ತಿಯನ್ನೇ ಸಂಪೃಪ್ತಿಯಂತೆ ಹಾಸಿ ಹೊದ್ದು ನಡೆದುಬಿಟ್ಟರು.  ಆದರೆ ಈ ಎಲ್ಲ ಇಲ್ಲಗಳ ನಡುವೆ ಅವರದ್ದೇ ಆದ ಒಂದು ಮನಸ್ಸೆಂಬ ಭಾವ ಚೀಲ ಅಂದೂ ಇತ್ತು.  ಇಂದಿಗೂ ಇವೆ. ಆ ಚೀಲದೊಳಗೆ ಪುರುಷ ಕಾಣದ ಅದೆಷ್ಟೋ ಸಂಗತಿಗಳಿವೆ. ಇಂದಿನ ಕಾಲಕ್ಕೆ ಅವುಗಳನ್ನು ಅದುಮಿ ಬದುಕುವುದಕ್ಕಿಂತ ವ್ಯಕ್ತಗೊಳ್ಳುವ ದಾರಿಯನ್ನು ಹೆಣ್ಣು ಮನಸ್ಸುಗಳು ಆಯ್ದುಕೊಂಡಿವೆ. ಕಲಿಕೆ, ಗ್ರಹಿಕೆಯ ನೆಲೆಗಳು, ಮಿತಿಗಳು ವಿಸ್ತಾರವಾಗಿವೆ. ಹಾಗಾಗಿ ಈ ಲೇಡಿಸ್ ಬ್ಯಾಗಿನ ಒಡಲಾಳವನ್ನು ಸ್ವಲ್ಪ ಮಟ್ಟಿಗೆ ನಾವೆಲ್ಲ ಇಂದು ಅರಿತಿದ್ದೇವೆ. ಅದರಂತೆ ಆತ್ಮನಿರ್ಭರ ಲೇಡೀಸ್ ಬ್ಯಾಗ್ ಸ್ವಾವಲಂಬಿ ಮನಸ್ಸಿನ ದ್ಯೋತಕ. ಸ್ತ್ರೀಯರ ಮನಸ್ಸಿನ ಒಳಗೆ ಒಂದು ಗುಪ್ತ ಒಳನೋಟದ ಚೀಲ ಇರುತ್ತದೆ ಎಂಬುದಕ್ಕೆ ಸಾಂಕೇತಿಕ. ‘ವ್ಯಾನಿಟಿ ಬ್ಯಾಗ್’ ಅಥವಾ ‘ಜಂಬದ ಚೀಲ’ ಅಂತೆಲ್ಲಾ ಕರೆಯಿಸಿಕೊಳ್ಳುವ ಈ  ಚೀಲ ಗರ್ಭಚೀಲದ ಅದೇ ಗರ್ವಕ್ಕೆ ಸಾಕ್ಷಿ ಎನಿಸುತ್ತದೆ ನನಗೆ. ಆ ಚೀಲ ಹೊತ್ತಿರುವುದರಿಂದಲೇ ಹೆಣ್ಣು ಹೆಮ್ಮೆಯ ಅಮ್ಮನಾಗುವುದು. ಜಗತ್ತಿನ ಜೀವ ಜಾಲಕ್ಕೆ ತನ್ನದೇ ಕಾಣಿಕೆಗಳ ನೀಡುತ್ತಿರುವುದು ಇನ್ನಷ್ಟು ಆ ಚೀಲದ ವಿವಿಧ ಖಾನೆಗಳ ತವಕ ತಲ್ಲಣಗಳ  ಅರಿಯೋಣ.

ನಾಗರೇಖಾ ಗಾಂವಕರ

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು ಬರಹಗಾರರೂ ಅನುವಾದಕರೂ ಮತ್ತು ಅಂಕಣಕಾರರೂ ಆಗಿದ್ದಾರೆ.

ಇದನ್ನೂ ಓದಿ- ‘ಹಿಂಗೊಂದು ಕಥೆ’: ಸೌಹಾರ್ದದ ಕಥನ vs. ರಾಜಕೀಯ ವಿಭಜನೆ

More articles

Latest article