ಬೆಂಗಳೂರು: ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಬರಮಾಡಿಕೊಳ್ಳುವುದರ ಜತೆಗೆ ಸುರಕ್ಷತೆ ಕುರಿತೂ ಕಾಳಜಿ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ ಈ ಸಲಹೆ ನೀಡಿದ್ದಾರೆ.
ಹೊಸವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಯನ್ನು ನಾವು ಆದ್ಯತೆಯಾಗಿಟ್ಟುಕೊಂಡಿದ್ದೇವೆ. ಹೀಗಾಗಿ ಹೆಚ್ಚುವರಿ ಗಸ್ತು ವ್ಯವಸ್ಥೆ, ತುರ್ತು ಪ್ರತಿಕ್ರಿಯಾ ಘಟಕ ಹಾಗೂ ಅಗತ್ಯ ಬೆಂಬಲ ವ್ಯವಸ್ಥೆಯೊಂದಿಗೆ ಬೆಂಗಳೂರು ಪೊಲೀಸರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು, ಜೀವಹಾನಿಯಾಗದಂತೆ ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರನ್ನು ಸಜ್ಜುಗೊಳಿಸಲಾಗುತ್ತಿದೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಪೊಲೀಸರು ನೀಡುವ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸಿ, ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರೊಂದಿಗೆ ಸಹಕರಿಸಿ ಎಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. 2026ರ ಹೊಸ ವರ್ಷವನ್ನು ಅತ್ಯಂತ ಸಂತೋಷ – ಸಂಭ್ರಮದಿಂದ ಬರಮಾಡಿಕೊಳ್ಳುವ ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ. ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.

