ನವದೆಹಲಿ: ಇಂದು ರಾಷ್ಟ್ರಾದ್ಯಂತ 75ನೇ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಾಂಗ್ರೆಸ್ ವರಿಷ್ಠ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತದ ಸಂವಿಧಾನ ಬಡವರ ‘ರಕ್ಷಣಾ ಗುರಾಣಿ’ ಎಂದು ಹೇಳಿದ್ದಾರೆ. ಇಂತಹ ಸಂವಿಧಾನದ ಮೇಲೆ ಮೇಲೆ ಯಾವುದೇ ದಾಳಿಗೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ದೇಶದ ಜನರಿಗೆ ಕರೆ ನೀಡಿದ್ದಾರೆ. ಅಂತಹ ಯಾವುದೇ ದಾಳಿ ಸಂಭವಿಸಿದರೆ ಮೊದಲು ನಾನೇ ಹೋರಾಟಕ್ಕೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
75 ವರ್ಷಗಳ ಹಿಂದೆ ಅಂಗೀಕಾರಗೊಂಡಿರುವ ಭಾರತದ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ. ಇದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ನೀಡಿದ ಪವಿತ್ರ ವಾಗ್ದಾನ ಎಂದೇ ನಾನು ಭಾವಿಸುತ್ತೇನೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮ, ಜಾತಿ , ಬಡವ, ಶ್ರೀಮಂತ, ಭೂಭಾಗ ಸೇರಿದಂತೆ ಯಾವುದೇ ಭಾಷೆ ಮಾತನಾಡುವವರೇ ಆಗಿದ್ದರೂ ಎಲ್ಲರಿಗೂ ಸಮಾನತೆ, ಗೌರವ ಮತ್ತು ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ವ್ಯಾಖ್ಯಾನಿಸಿದ್ದಾರೆ. ಅಂತಹ ಸಂವಿಧಾನವನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದು ವಿವರಿಸಿದ್ದಾರೆ.
ಸಂವಿಧಾನವನ್ನು ರಕ್ಷಿಸುವದು ನಮ್ಮೆಲ್ಲರ ಹೊಣೆ: ಖರ್ಗೆ
ದೇಶದ ಏಕತೆ ಮತ್ತು ಸಮಗ್ರತೆ, ಪ್ರೀತಿ, ಭ್ರಾತೃತ್ವ ಮತ್ತು ಸಾಮರಸ್ಯ ಕಾಪಾಡುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡೋಣ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಂವಿಧಾನವು ವಕೀಲರಿಗೆ ಕೇವಲ ಒಂದು ದಾಖಲೆಯಲ್ಲ, ಬದಲಾಗಿ ಅದು ಜೀವನ ವಿಧಾನ ಎಂಬ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೇಳಿಕೆಯನ್ನು ಖರ್ಗೆ ಅವರು ಸ್ಮರಿಸಿಕೊಂಡಿದ್ದಾರೆ.
ಸಂವಿಧಾನದ ಮೂಲಭೂತ ತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ಜಾತ್ಯತೀತತೆ ಮತ್ತು ಸಮಾಜವಾದವನ್ನು ರಕ್ಷಿಸಬೇಕಿದೆ ಎಂದೂ ತಿಳಿಸಿದ್ದಾರೆ.

