ವಾಷಿಂಗ್ಟನ್ : ಏಪ್ರಿಲ್ 6 ರವರೆಗೆ ಇಂಧನ ಸ್ಥಾವರಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸಲು ಇರಾನ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳ ಪ್ರಗತಿ ಉಲ್ಲೇಖಿಸಿ, ಇರಾನ್‌ನ ವಿದ್ಯುತ್ ಗ್ರಿಡ್ ಮೇಲಿನ ದಾಳಿಗೆ ಸ್ವತಃ ವಿಧಿಸಿಕೊಂಡಿದ್ದ ಗಡುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 6 ಕ್ಕೆ ಮುಂದೂಡಿದ್ದಾರೆ.
ತೈಲ ಸಾಗಣೆಗೆ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವಂತೆ ಅಧ್ಯಕ್ಷರು ಇರಾನ್ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಗುರುವಾರದ ಘೋಷಣೆ ಹೊರಬಿದ್ದಿದೆ.
“ಇರಾನ್ ಸರ್ಕಾರದ ಕೋರಿಕೆಯಂತೆ, ಇಂಧನ ಸ್ಥಾವರ ನಾಶದ ಅವಧಿಯನ್ನು 10 ದಿನಗಳವರೆಗೆ, ಏಪ್ರಿಲ್ 6 ರ ಸೋಮವಾರದಂದು 8 ಗಂಟೆ ವರೆಗೆ ವಿರಾಮಗೊಳಿಸುತ್ತಿದ್ದೇನೆ ಎಂದು ಟ್ರಂಪ್ ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಭಾನುವಾರ, ಹಾರ್ಮುಜ್ ಜಲಸಂಧಿಯನ್ನು 48 ಗಂಟೆಗಳ ಒಳಗೆ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಗ್ರಿಡ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಮೊದಲು ದೊಡ್ಡದಾದ ಇಂಧನ ಸ್ಥಾವರಗಳನ್ನು ಹೊಡೆಯುವುದಾಗಿ ಟ್ರಂಪ್ ಬರೆದುಕೊಂಡಿದ್ದಾರೆ.
ಇರಾನ್ – ಅಮೆರಿಕ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂಬ ಸುಳ್ಳು ಸುದ್ದಿಗಳ ನಡುವೆಯೇ ಇರಾನ್‌ಗೆ 5 ದಿನಗಳ ಗಡುವು ನೀಡಿದ್ದರು. ಬಳಿಕ ಇದೀಗ ಮತ್ತೆ ಹತ್ತು ದಿನಗಳ ಗಡುವನ್ನು ವಿಸ್ತರಿಸಿದ್ದಾರೆ.

