ವಾಷಿಂಗ್ಟನ್: ಎಲ್ಲ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿ, ಮಧ್ಯೆ ಪ್ರವೇಶಿಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರ ಜತೆ ಚರ್ಚೆ ನಡೆಸುವುದಕ್ಕೂ ಸ್ಕಾಟ್ಲೆಂಡ್ ನಲ್ಲಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಜಗತ್ತಿನ ಆರು ಪ್ರಮುಖ ಯುದ್ಧಗಳನ್ನು ತಡೆಯಲಾಗಿದೆ ಎಂದು ತಿಳಿಸಿದ್ದಾರೆ.
ನಾನಿಲ್ಲದೆ ಹೋಗಿದ್ದರೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧ ಇವತ್ತಿಗೂ ಮುಂದುವರಿಯುತ್ತಿತ್ತು. ಭಾರತ ಹಾಗೂ ಪಾಕಿಸ್ತಾನದ ನಾಯಕರನ್ನು ನಾನು ಚೆನ್ನಾಗಿ ಬಲ್ಲೆ. ಅವರು ವ್ಯಾಪಾರ ಒಪ್ಪಂದಗಳ ಕುರಿತು ಚರ್ಚಿಸುತ್ತಿದ್ದಾರೆ. ಜತೆಗೆ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದು ಹುಚ್ಚುತನದ ಪರಮಾವಧಿಯಾಗಿದೆ. ಹೀಗಾಗಿ, ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲವೆಂದು ಬೆದರಿಕೆ ಒಡ್ಡಿದ್ದರಿಂದ ಅವರು ಯುದ್ಧ ನಿಲ್ಲಿಸಿದ್ದಾರೆ. ಅವರಿಗೆ ವ್ಯಾಪಾರ ಒಪ್ಪಂದ ಅಗತ್ಯ ಮತ್ತು ಅನಿವಾರ್ಯವಾಗಿತ್ತು. ಯುದ್ಧ ಮುಂದುವರಿಸಿದರೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರಿಂದ ಯುದ್ಧ ನಿಂತಿತು ಎಂದು ಟ್ರಂಪ್ ತಿಳಿಸಿದ್ದಾರೆ.