ಕನ್ನಡವನ್ನು ಬೆಳೆಸಲು ವೈದ್ಯರು ಮುಂದಾಗಬೇಕು: ಡಾ.ಪುರುಷೋತ್ತಮ ಬಿಳಿಮಲೆ

Most read

ರಾಜಕೀಯ, ಆರ್ಥಿಕ, ಭಾಷಿಕ ಸೇರಿದಂತೆ ವಿವಿಧ ಕಾರಣಗಳಿಗಾಗಿ ಜನರೇ ಜನರನ್ನು ಕೊಂದು ಅಧಿಕಾರ ಪಡೆಯುವ ಕಾಲದಲ್ಲಿ ಸಾಯಲಿಕ್ಕೆ ಬಂದವರನ್ನು ಬದುಕಿಸಿ ಮಾನವೀಯತೆ ಮೆರೆಯುವ ವೈದ್ಯರು ಸದಾ ಕಾಲಕ್ಕೂ ಸ್ಮರಣೀಯರು. ಕನ್ನಡಿಗ ವೈದ್ಯರನ್ನು ಕಂಡಾಗಲೆಲ್ಲಾ ತಮ್ಮ ಹೆಮ್ಮೆ ಇಮ್ಮಡಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡವನ್ನು ಬಳಸುವ ಸಾಧ್ಯತೆ ಮತ್ತು ಅದರ ಇತಿಮಿತಿಗಳು ತಮಗೆ ಅರಿವಿದ್ದು, ಕಿದ್ವಾಯಿ ಆಸ್ಪತ್ರೆಯಂತಹ ಜಾಗತಿಕ ಪ್ರಸಿದ್ಧಿಯನ್ನು ಹೊಂದಿರುವ ಸಂಸ್ಥೆಯಲ್ಲಿ ಅಲ್ಲಿನ ವೈದ್ಯರಿಂದ ಭಾಷಾಮತಾಂಧತೆಯನ್ನು ತಾವು ನಿರೀಕ್ಷಿಸುವುದಿಲ್ಲ. ಆದರೂ ದಿನೇ ದಿನೇ ಬಳಕೆಯಲ್ಲಿ ಇಳಿಮುಖವಾಗುತ್ತಿರುವ ಕನ್ನಡ ಭಾಷೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ವೈದ್ಯರು ಇನ್ನಷ್ಟು ಪರಿಣಾಮಕಾರಿಯಾಗಿ ಆಲೋಚಿಸಬಹುದಾಗಿದೆ ಎಂದರು.

ವಿಶ್ವದ ಶ್ರೇಷ್ಠ ವೈದ್ಯಕೀಯ ಪುಸ್ತಕಗಳನ್ನು ಕನ್ನಡಕ್ಕೆ ತನ್ನಿ:

ಮುಂದಿನ 50 ವರ್ಷಗಳಲ್ಲಿ ಪ್ರಪಂಚದ ಶೇ.92ರಷ್ಟು ಜನರಿಗೆ ಇಂದು ಕೇವಲ ಶೇ.6ರಷ್ಟು ಜನರು ಬಳಸುತ್ತಿರುವ ಭಾಷೆಯನ್ನು ಮಾತನಾಡುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದು ಕನ್ನಡ ಭಾಷೆಯ ಭವಿಷ್ಯಕ್ಕೆ ಕಂಟಕವಾಗಲಿದೆ. ಹಾಗಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದ ಡಾ.ಬಿಳಿಮಲೆ, ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಜ್ಞಾನವನ್ನು ಹೆಚ್ಚಿಸಲು ನಾವು ಏನು ಮಾಡಬಹುದೆನ್ನುವ ಕುರಿತಂತೆ ಕಿದ್ವಾಯಿ ಸಂಸ್ಥೆಯು ಒಂದು ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ, ವಿಶೇಷವಾಗಿ ಕ್ಯಾನ್ಸರ್ ಕ್ಷೇತ್ರದಲ್ಲಿ ವಿಶ್ವದ ಶ್ರೇಷ್ಠ ಪುಸ್ತಕಗಳನ್ನು ಅನುವಾದಿಸುವ ಮೂಲಕ ಸಾಮಾನ್ಯ ಕನ್ನಡಿಗರಿಗೆ ಉಪಯುಕ್ತವಾಗಬಹುದೆಂದು ಭಾವಿಸಿದಲ್ಲಿ ಪ್ರಾಧಿಕಾರವು ಈ ಕಾರ್ಯಕ್ಕೆ ನೈತಿಕ ಬೆಂಬಲ ನೀಡಲಿದೆ ಎಂದ ಡಾ.ಬಿಳಿಮಲೆ, ವೈದ್ಯರು ತಾವು ಬರೆಯುವ ಔಷಧಿ ಚೀಟಿಗಳಲ್ಲಿ ರೋಗಿಯ ಹೆಸರನ್ನಾದರೂ ಕನ್ನಡದಲ್ಲಿ ಬರೆದಲ್ಲಿ ಅಲ್ಲಿಂದಲೇ ಕನ್ನಡ ಸೇವೆ ಪ್ರಾರಂಭವಾಗುತ್ತದೆ ಎಂದರು.

ಕ್ಯಾನ್ಸರ್ ಪೀಡಿತ ಮಕ್ಕಳ ಕಲಿಕೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಸರ್ಕಾರಿ ಶಾಲೆ ತೆರೆಯಿರಿ:

ಕಿದ್ವಾಯಿ ಸಂಸ್ಥೆಯಲ್ಲಿ ದಾಖಲಾಗುವ ಹಾಗೂ ಸುದೀರ್ಘ ಅವಧಿಗೆ ಚಿಕಿತ್ಸೆ ಪಡೆಯುವ  ಕ್ಯಾನ್ಸರ್ ಪೀಡಿತ ಮಕ್ಕಳು ಶಾಲಾ ಚಟುವಟಿಕೆಗಳಿಂದ ದೂರ ಉಳಿಯುವ ಕಾರಣ ಇಂತಹ ಮಕ್ಕಳ ಸಂವಹನ ಶಕ್ತಿಯನ್ನು ವೃದ್ಧಿಸುವ ಸಲುವಾಗಿ ಕಲಿಕೆಯ ಅವಶ್ಯಕತೆ ಇರುತ್ತದೆ. ಈ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಿ ಆಸ್ಪತ್ರೆಯ ಆವರಣದಲ್ಲಿ ಉತ್ತಮ ಗುಣಮಟ್ಟದ ವಿಶೇಷ ಪಠ್ಯಕ್ರಮವುಳ್ಳ ಶಾಲೆಯನ್ನು ತೆರೆಯಲು ಸೂಚನೆ ನೀಡಲಾಗುವುದು ಎಂದ ಡಾ.ಬಿಳಿಮಲೆ, ಕಲಿಕೆ ಇಂತಹ ಮಕ್ಕಳ ಆತ್ಮವಿಶ್ವಾಸವನ್ನು ವೃದ್ಧಿಸಲು ಖಂಡಿತವಾಗಿಯೂ ಸಹಕಾರಿಯಾಗಲಿದೆ ಎಂದರು.

ಕನ್ನಡೇತರರಿಗೆ ಕನ್ನಡ ಕಲಿಸೋಣ:

ಸಂಸ್ಥೆಯಲ್ಲಿ ಬಹುಪಾಲು ವೈದ್ಯರು ಕನ್ನಡಿಗರಾಗಿದ್ದು, ಶುಶ್ರೂಷಕಿಯರಲ್ಲಿ ಗಣನೀಯ ಸಂಖ್ಯೆಯ ಕನ್ನಡೇತರರು ಇದ್ದಾರೆ ಎಂಬ ಅಂಶವನ್ನು ಗಮನಿಸಿದ ಬಳಿಕ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಕಿದ್ವಾಯಿ ಆಸ್ಪತ್ರೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಸಹಾಯ ಹಸ್ತವನ್ನು ನೀಡಲು ಸಿದ್ಧವಿದೆ ಎಂದ ಡಾ.ಬಿಳಿಮಲೆ, ಕಿದ್ವಾಯಿ ಆಸ್ಪತ್ರೆಯಲ್ಲಿ ಕನ್ನಡಿಗರ ಹಿತರಕ್ಷಣೆ ಮಾಡಲು ಕನ್ನಡ ಘಟಕವನ್ನು ಆರಂಭಿಸಬೇಕು. ಪ್ರತಿ ವರ್ಷ ರಾಜ್ಯೋತ್ಸವವನ್ನು ನಡೆಸಲು ಮುಂದಾಗಬೇಕು ಎಂದು ಸೂಚಿಸಿದರು.

ಡಾ.ವಿಜಯಲಕ್ಷ್ಮೀ ದೇಶಮಾನೆ ಹೆಸರು ನಾಮಕರಣ:

ಸಂಸ್ಥೆಯ ಆವರಣದಲ್ಲಿರುವ ಹಲವಾರು ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ.60ರ ಪ್ರಾತಿನಿಧ್ಯ ನೀಡಿಲ್ಲವೆಂಬ ಅಂಶವನ್ನು ಅವಲೋಕಿಸಿದ ಡಾ.ಬಿಳಿಮಲೆ, ಈ ಕುರಿತಂತೆ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಸೂಚಿಸಿದರು. ಸಂಸ್ಥೆಯ ಕಟ್ಟಡ ಸಂಕೀರ್ಣಗಳು, ರಸ್ತೆಗಳಿಗೆ ನಾಡಿನ  ಖ್ಯಾತ ವೈದ್ಯರುಗಳ, ಕನ್ನಡ ಸಾಹಿತಿಗಳ ಹೆಸರುಗಳನ್ನು ಇಡಬೇಕೆಂಬ ಸಲಹೆ ನೀಡಿದ ಡಾ.ಬಿಳಿಮಲೆ, ಇತ್ತೀಚಿಗಷ್ಟೇ ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ರವರಿಗೆ ಕೇಂದ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದ್ದು, ಸಂಸ್ಥೆಯ ಯಾವುದಾದರೂ ಪ್ರಮುಖ ಸಂಕೀರ್ಣಕ್ಕೆ ಅವರ ಹೆಸರನ್ನು ಇಡಬಹುದಾಗಿದೆ ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ವಿ.ಪಿ.ನಿರಂಜನಾರಾಧ್ಯ, ತಜ್ಞರಾದ ಡಾ. ಸಿ.ಎ.ಕಿಶೋರ್, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಮಾನ್ಯ ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್. ಟಿ, ಮೆಡಿಕಲ್ ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ಬಾಬು, ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಮಧು ಎಸ್.ಡಿ. ಮತ್ತು ಹಿರಿಯ ವೈದ್ಯಾಧಿಕಾರಿ ಡಾ. ಮಹಂತೇಶ್ ಎ.ಎನ್. ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದರು.

More articles

Latest article