ಕಾನ್ಪುರ: ದೆಹಲಿಯ ಕೆಂಪುಕೋಟೆ ಹತ್ತಿರ ಸೋಮವಾರ ಸಂಜೆ ಸಂಭವಿಸಿದ ಐ-20 ಕಾರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮತಮತ್ತೊಬ್ಬ ವೈದ್ಯನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಡಾ. ಮೊಹಮ್ಮದ್ ಆರಿಫ್ (32) ಬಂಧಿತ ವೈದ್ಯ. ಈತ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ಹೃದ್ರೋಗ ವಿಭಾಗದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಪೊಲೀಸರು ಈತನನ್ನು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಜತೆಗೆ ಆರಿಫ್ ವಾಸಿಸುತ್ತಿದ್ದ ಇಲ್ಲಿನ ಅಶೋಕ ನಗರದಲ್ಲಿರುವ ಬಾಡಿಗೆ ಮನೆಯಲ್ಲೂ ಎಟಿಎಸ್ ಅಧಿಕಾರಿಗಳು ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಲೇಡಿ ಡಾಕ್ಟರ್ ಕೂಡಾ ಭಾಗಿ?
ಇದೇ ಕಾಲೇಜಿನ ಪ್ರಾಧ್ಯಾಪಕಿ ಡಾ. ಶಾಹೀನ್ ಸೈಯದ್ ಅವರನ್ನೂ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ. ಡಾ. ಶಾಹೀನ್ ಅವರ ಸಹೋದರ ಡಾ. ಪರ್ವೇಜ್ ಎಂಬಾತನನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿಯಲ್ಲಿ ನಡೆದ ಸ್ಫೋಟದ ಮುನ್ನಾದಿನ ಡಾ. ಶಾಹೀನ್ ಡಾ. ಆರಿಫ್ ಮೊಬೈಲ್ ನಲ್ಲಿ ಮಾತುಕತೆ ನಡೆಸಿರುವುದು ಕಂಡು ಬಂದಿದೆ. ಇವರು ಜಮ್ಮು ಮತ್ತು ಕಾಶ್ಮೀರಕ್ಕೂ ಭೇಟಿ ನೀಡಿದ್ದಾರೆ. ದಿಢೀರೆಂದು ಅಧಿಕಾರಿಗಳು ಆಗಮಿಸಿದಾಗ ಇವರು ಮೊಬೈಲ್ ನಲ್ಲಿದ್ದ ದಾಖಲೆಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಆ ವೇಳೆಗೆ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದರು.
ಈ ಸ್ಫೋಟದ ರೂವಾರಿ ಜತೆಯಲ್ಲಿ ಆರಿಫ್ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಇವರೆಲ್ಲರೂ ಒಂದೇ ಇ-ಮೇಲ್ ಐಡಿಯನ್ನು ಬಳಸಿ, ಅದರಲ್ಲಿ ಡ್ರಾಫ್ಟ್ ಮೋಡ್ ನಲ್ಲಿ ಸಂಭಾಷಣೆಗಳನ್ನು ಸೇವ್ ಮಾಡುತ್ತಿದ್ದರು. ಅಕಸ್ಮಾತ್ ಇಮೇಲ್ ಕಳುಹಿಸಿದರೆ ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭಯದಿಂದ ಡ್ರಾಫ್ಟ್ ಬಳಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಾ. ಆರಿಫ್ ಬಂಧನದಿಂದ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೂರು ತಿಂಗಳ ಹಿಂದೆ ಇಲ್ಲಿನ ಹೃದ್ರೋಗ ವಿಭಾಗಕ್ಕೆ ಆರಿಫ್ ದಾಖಲಾಗಿದ್ದರು ಎಂದೆನ್ನಲಾಗಿದೆ.
ಈತನ ಬಂಧನವನ್ನು ಕಾಲೇಜಿನ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಜ್ಞಾನೇಂದ್ರ, ಖಚಿತಪಡಿಸಿದ್ದಾರೆ. ಆರಿಫ್ ಅಖಿಲ ಭಾರತ ಮಟ್ಟದ ಕೌನ್ಸೆಲಿಂಗ್ ಮೂಲಕ ವಿಭಾಗಕ್ಕೆ ದಾಖಲಾಗಿರುತ್ತಾನೆ. ಆರಿಫ್ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಎಂದೂ ಅವರು ತಿಳಿಸಿದ್ದಾರೆ.

