Sunday, September 8, 2024

ರಾಹುಲ್ ಗಾಂಧಿ ರಾಯ್ ಬರೇಲಿ ಉಳಿಸಿಕೊಂಡು ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಗೊತ್ತೇ?

Most read

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಭರ್ಜರಿ ಜಯಗಳಿಸಿದ್ದರು. ಗೆದ್ದ ಎರಡು ಕ್ಷೇತ್ರಗಳಲ್ಲಿ ಅವರು ಯಾವುದನ್ನು ಉಳಿಸಿಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದು, ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿ ರಾಯ್ ಬರೇಲಿಯನ್ನು ಉಳಿಸಿಕೊಂಡಿದ್ದಾರೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿರುವ ವಯನಾಡ್ ಕ್ಷೇತ್ರದಿಂದ ಅವರ ಸಹೋದರಿ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ. ಪ್ರಿಯಾಂಕ ಗಾಂಧಿ ಗೆದ್ದರೆ ಲೋಕಸಭೆಯಲ್ಲಿ ಗಾಂಧಿ ಕುಟುಂಬದ ಮೂವರು ಸದಸ್ಯರನ್ನು ಕಾಣಬಹುದಾಗಿದೆ.

ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿರುವುದಕ್ಕೆ ಬಲವಾದ ಕಾರಣವೂ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತರಪ್ರದೇಶದಲ್ಲಿ ಗಣನೀಯ ಸಾಧನೆ ಮಾಡಿದೆ. 2019ರಲ್ಲಿ ಕಾಂಗ್ರೆಸ್ ಪಕ್ಷ ಉತ್ತರಪ್ರದೇಶ 67 ಸ್ಥಾನಗಳಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲನ್ನನುಭವಿಸಿತ್ತು. ಕಾಂಗ್ರೆಸ್ ಪಡೆ ಒಟ್ಟು ಮತಪ್ರಮಾಣ ಕೇವಲ 6.36% ಆಗಿತ್ತು. ಆದರೆ ಈ ಚುನಾವಣೆಯಲ್ಲಿ ಚಿತ್ರಣ ಸಂಪೂರ್ಣ ಬದಲಾಗಿದೆ. ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ 6 ಸ್ಥಾನಗಳಲ್ಲಿ ಗೆಲ್ಲಲು ಯಶಸ್ವಿಯಾಗಿದೆ. ಕೇವಲ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಕಾಂಗ್ರೆಸ್ ಮತ ಪ್ರಮಾಣ ಈ ಬಾರಿ ಶೇ.9 ಅನ್ನು ದಾಟಿದೆ.

ರಾಯ್‌ ಬರೇಲಿ ಮತ್ತು ಅಮೇಠಿ ಗಾಂಧಿ ಕುಟುಂಬದ ಭದ್ರಕೋಟೆಗಳಾಗಿದ್ದರೂ ಕಳೆದ ಚುನಾವಣೆಯಲ್ಲಿ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಗೆಲುವು ಸಾಧಿಸುವ ಮೂಲಕ ಕೋಟೆಯಲ್ಲಿ ಬಿರುಕು ಮೂಡಿಸಿದ್ದರು. ಆದರೆ ಈ ಬಾರಿ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ ಕೆ.ಎಲ್.ಶರ್ಮ ಭರ್ಜರಿ ಜಯಗಳಿಸುವ ಮೂಲಕ ಸ್ಮೃತಿ ಇರಾನಿಯನ್ನು  ಮನೆಗೆ ಕಳುಹಿಸಿದ್ದಾರೆ. ಇದಲ್ಲದೆ ತನುಜ್‌ ಪೂನಿಯಾ, ಉಜ್ವಲ್‌ ರಮಣ್‌ ಸಿಂಗ್‌, ಇಮ್ರಾನ್‌ ಮಸೂದ್‌ ಮತ್ತು ರಾಕೇಶ್‌ ರಾಠೋಡ್‌ ಕಾಂಗ್ರೆಸ್‌ ನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚುತ್ತಿರುವ ಬೆಂಬಲವೇ ರಾಹುಲ್‌ ಗಾಂಧಿ ರಾಯ್‌ ಬರೇಲಿಯನ್ನು ಉಳಿಸಿಕೊಳ್ಳುವಂತೆ ಮಾಡಿದೆ. ಬರುವ 2027ರಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಇದನ್ನು ಸಮಾಜವಾದಿ-ಕಾಂಗ್ರೆಸ್‌ ಒಕ್ಕೂಟ ಗೆಲ್ಲುವ ಪ್ರಮುಖ ಗುರಿಯನ್ನು ಹೊಂದಿವೆ. ಇದಕ್ಕಾಗಿ ರಾಹುಲ್‌ ಗಾಂಧಿ ರಾಯ್‌ ಬರೇಲಿಯಲ್ಲೇ ಉಳಿಯುವುದು ಬಹಳ ಮುಖ್ಯವಾಗುತ್ತದೆ.

2027ರಲ್ಲಿ ನಡೆಯುವ ಚುನಾವಣೆ ಯೋಗಿ ಆದಿತ್ಯನಾಥ್‌ ನೇತೃತ್ವದ ಭಾರತೀಯ ಜನತಾ ಪಕ್ಷದ ಆಡಳಿತವನ್ನು ಕೊನೆಗೊಳಿಸಿದರೆ 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬಹುದು ಎಂಬುದು ಕಾಂಗ್ರೆಸ್‌ ಪಾಳಯದ ದೂರಾಲೋಚನೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗಳಿಸದೇ ಹೋದಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಕನಸಿನ ಮಾತು ಆಗಿಬಿಡುತ್ತದೆ. ಹೀಗಾಗಿ  ಅನುಕೂಲಕರ ವಾತಾವರಣ ಇರುವ ಉತ್ತರಪ್ರದೇಶದಲ್ಲಿ ಹೆಚ್ಚು ಕೆಲಸ ಮಾಡುವ ಸಲುವಾಗಿಯೇ ರಾಹುಲ್‌ ಗಾಂಧಿ ರಾಯ್‌ ಬರೇಲಿಯನ್ನು ಉಳಿಸಿಕೊಂಡಿದ್ದಾರೆ.

ಇನ್ನೊಂದೆಡೆ ಕೇರಳದಲ್ಲಿ ಗಾಂಧಿ ಕುಟುಂಬದ ಮತ್ತೊಬ್ಬ ಸದಸ್ಯರನ್ನು ಸ್ಪರ್ಧೆಗೆ ಇಳಿಸುವ ಮೂಲಕ ಕಾಂಗ್ರೆಸ್‌ ಪಕ್ಷ  ಮತ್ತೊಂದು ಜಾಣನಡೆ ಇಟ್ಟಿದೆ. ಕೇರಳದಲ್ಲೂ 2026ರಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಆಡಳಿತದಲ್ಲಿರುವ ಎಡ ಮೈತ್ರಿಕೂಟದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅಲ್ಲೂ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಾಂಗ್ರೆಸ್‌ ಆಲೋಚನೆ. ಈ ಕಾರಣಕ್ಕಾಗಿ ವಯನಾಡ್‌ ನಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಅಲ್ಲಿ ಕಾಂಗ್ರೆಸ್‌ ಮುಖಂಡರಿಗೆ ಹುರುಪು ತಂದುಕೊಡುತ್ತಿದೆ.

ವಯನಾಡ್‌ ಜನತೆಗೆ ನೀಡಿದ ಸಂದೇಶದಲ್ಲಿ ರಾಹುಲ್‌ ಗಾಂಧಿ ʻʻ ನಿಮಗೆ ಈಗ ಇಬ್ಬರು ಸಂಸತ್‌ ಸದಸ್ಯರು. ನಾನು ಮತ್ತು ಪ್ರಿಯಾಂಕ.  ಪ್ರಿಯಾಂಕ ಇಲ್ಲಿ ಗೆದ್ದರೂ ನಾನು ಆಗಾಗ ಇಲ್ಲಿಗೆ ಬರುತ್ತಲೇ ಇರುತ್ತೇನೆʼʼ ಎಂದು ಹೇಳಿದ್ದಾರೆ. 

More articles

Latest article