ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಡಿಕೆಶಿ ಈಗಾಗಲೇ ಒಂದು ಸುತ್ತು ಚನ್ನಪಟ್ಟಣದ ಗುಡಿಗುಂಡಾರಗಳನ್ನು ಸುತ್ತಿ `ನಾನು ಬಂದಿದ್ದೇನೆ’ ಎಂಬ ಸಂದೇಶವನ್ನು ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರಿಗೆ, ಕ್ಷೇತ್ರದ ಜನರಿಗೆ ನೀಡಿದ್ದಾರೆ.
ತಾನೇ ಚನ್ನಪಟ್ಟಣದ ಶಾಸಕನಾಗುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಸೋದರ ಡಿ.ಕೆ.ಸುರೇಶ್ ಅವರನ್ನು ಕನಕಪುರದಿಂದ ಗೆಲ್ಲಿಸಿ ವಿಧಾನಸಭೆಗೆ ಕರೆತರುವುದು ಡಿ.ಕೆ.ಶಿವಕುಮಾರ್ ಅವರ ಯೋಜನೆ. ಇದು ಸಾಧ್ಯವಾಗಬೇಕೆಂದರೆ ಡಿ.ಕೆ.ಶಿವಕುಮಾರ್ ಮೊದಲು ಚನ್ನಪಟ್ಟಣದಲ್ಲಿ ಗೆಲ್ಲಬೇಕು, ಆನಂತರ ಕನಕಪುರದಲ್ಲಿ ಉಪಚುನಾವಣೆ ನಡೆದು ಅಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸಿ ಗೆಲ್ಲಬೇಕು. ಇದು ಒಂದು ಬಗೆಯಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ. ಇದರ ಬದಲು ನೇರವಾಗಿ ಡಿ.ಕೆ.ಸುರೇಶ್ ಅವರನ್ನೇ ಚನ್ನಪಟ್ಟಣದಿಂದ ಕಣಕ್ಕಿಳಿಸಬಹುದಲ್ಲವೇ ಎಂಬ ಪ್ರಶ್ನೆ ಏಳುತ್ತದೆ.
ಮೇಲ್ನೋಟಕ್ಕೆ ಡಿ.ಕೆ.ಸುರೇಶ್ ಅವರನ್ನು ಚನ್ನಪಟ್ಟಣದಲ್ಲಿ ಸ್ಪರ್ಧೆ ಇಳಿಸಿದರೆ ಗೆಲ್ಲುವ ಸಾಧ್ಯತೆ ಕಡಿಮೆ ಇರುವುದರಿಂದ ಡಿ.ಕೆ. ಶಿವಕುಮಾರ್ ಅವರೇ ಸ್ಪರ್ಧಿಸುತ್ತಿದ್ದಾರೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ರಾಜಕೀಯದಲ್ಲಿ ಪಳಗಿದ ಹುಲಿಯಾಗಿರುವ ಡಿ.ಕೆ. ಶಿವಕುಮಾರ್ ಕೇವಲ ಇದೊಂದೇ ಕಾರಣಕ್ಕೆ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಭಾವಿಸುವಂತಿಲ್ಲ.ಅವರ ಮನಸಲ್ಲಿ ಹಲವು ಲೆಕ್ಕಾಚಾರಗಳಿವೆ.
ಬೆಂಗಳೂರು ಗ್ರಾಮಾಂತರದ ಸೋಲು ಡಿ.ಕೆ. ಸೋದರರ ಮಹತ್ವಾಕಾಂಕ್ಷಿ ರಾಜಕಾರಣಕ್ಕೆ ಬಿದ್ದ ಬಹುದೊಡ್ಡ ಪೆಟ್ಟು. ಅದರಲ್ಲಿ ಅನುಮಾನವೇ ಇಲ್ಲ. ಸೋಲಿನ ನಂತರ ಇಬ್ಬರೂ ಏನೂ ಆಗಿಲ್ಲವೆಂಬಂತೆ ವರ್ತಿಸಿದರೂ ಈ ಸೋಲನ್ನು ಅವರು ಅರಗಿಸಿಕೊಂಡಿಲ್ಲವೆಂಬುದು ಅವರ ಮುಖಭಾವದಿಂದಲೇ ತಿಳಿಯುತ್ತದೆ. ಸೋಲಿಲ್ಲದ ಸರದಾರರಂತೆ ಬೀಗುತ್ತಿದ್ದ ಇಬ್ಬರೂ ನಾಯಕರಿಗೆ ಈ ಸೋಲಿನಿಂದ ಕಲಿಯುವ ಪಾಠಗಳೂ ಇವೆ.
ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಅವರ ಶಕ್ತಿ ದೊಡ್ಡಪ್ರಮಾಣದಲ್ಲಿ ಅಲ್ಲವಾದರೂ ಸಣ್ಣದಾಗಿ ಕ್ಷೀಣಿಸಿದೆ. ಕಾಂಗ್ರೆಸ್ ಪಕ್ಷ ಒಂಭತ್ತು ಸಂಸದರನ್ನು ಗೆಲ್ಲಿಸಿಕೊಂಡರೂ ತಮ್ಮನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲವಲ್ಲ ಎಂಬ ವೇದನೆ ಡಿ.ಕೆ.ಶಿ ಅವರದು. ಎರಡು ಅಥವಾ ಮೂರು ವರ್ಷಗಳ ಬಳಿಕ ಸಿದ್ಧರಾಮಯ್ಯ ಅವರ ನಂತರ ಮುಖ್ಯಮಂತ್ರಿಯಾಗಬೇಕೆಂಬ ಮಹದಾಸೆ ಇಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇದು ಸಣ್ಣ ಹೊಡೆತ ಕೊಟ್ಟಿರುವುದೂ ಸುಳ್ಳಲ್ಲ. ಹೀಗಾಗಿ ಅವರಿಗೆ ಒಂದು ದೊಡ್ಡದಾಗಿ ಸೆಲಬ್ರೇಟ್ ಮಾಡುವಂಥ ಗೆಲುವು ಬೇಕಿದೆ. ಇದಕ್ಕಾಗಿ ಚನ್ನಪಟ್ಟಣದ ವೇದಿಕೆಯನ್ನು ಅವರು ಬಳಸಿಕೊಳ್ಳಲು ಹೊರಟಿದ್ದಾರೆ.
ರಾಜಕಾರಣದಲ್ಲಿ ಏನೇ ತತ್ತ್ವ ಸಿದ್ಧಾಂತ ಮೌಲ್ಯದ ಚರ್ಚೆ ನಡೆದರೂ ಕೊನೆಯಲ್ಲಿ ಲೆಕ್ಕಾಚಾರಕ್ಕೆ ಸಿಗುವುದು ಸೋಲು ಮತ್ತು ಗೆಲುವು ಮಾತ್ರ. ಹೀಗಾಗಿ ಒಂದು ಸೋಲಿನ ಏಟಿನಿಂದ ಹೊರಬರಲು ಇನ್ನೊಂದು ಗೆಲುವೇ ಬೇಕಾಗುತ್ತದೆ. ಡಿಕೆಶಿ ಮಾಡಲು ಹೊರಟಿರುವುದು ಅದನ್ನೇ.
ಡಿ.ಕೆ.ಶಿವಕುಮಾರ್ ರಂಗಪ್ರವೇಶದಿಂದಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೀಶ್ವರ್ ವಿಚಲಿತರಾದಂತೆ ಕಾಣುತ್ತಿದೆ. ಇಬ್ಬರ ಹೇಳಿಕೆಗಳನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ. ಇದೇ ಡಿಕೆಶಿ ಅವರ ಮೊದಲ ಗೆಲುವು. ಚನ್ನಪಟ್ಟಣ, ರಾಮನಗರ, ಕನಕಪುರ ಕ್ಷೇತ್ರಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಗಿರುವ ಹಿಡಿತ ಎದುರಾಳಿಗಳಿಗೆ ಗೊತ್ತಿಲ್ಲದೇ ಏನಿಲ್ಲ. ಬಿಜೆಪಿ ಜೆಡಿಎಸ್ ಮೈತ್ರಿಕೂಟದಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಸ್ಪಷ್ಟತೆಯೂ ಇಲ್ಲ. ಕ್ಷೇತ್ರವನ್ನು ಬಿಟ್ಟುಕೊಡಿ ಎಂದು ಬಿಜೆಪಿ ಕೇಳುವ ಸಾಧ್ಯತೆ ಹೆಚ್ಚು. ಯಾಕೆಂದರೆ ಸಿ.ಪಿ.ಯೋಗೀಶ್ವರ್ ಹೊರತುಪಡಿಸಿ ಇನ್ಯಾರಿಗೂ ಡಿಕೆಶಿಗೆ ಪ್ರಬಲ ಸ್ಪರ್ಧೆ ನೀಡುವ ಶಕ್ತಿ ಇದ್ದಂತೆ ಕಾಣುವುದಿಲ್ಲ. ಇದು ನಾವೇ ಗೆದ್ದ ಕ್ಷೇತ್ರವಾದ್ದರಿಂದ ನಮಗೇ ಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹಠ ಹಿಡಿಯಬಹುದು. ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸ್ಪರ್ಧೆಗೆ ಇಳಿಸುವ ಪ್ರಯೋಗವನ್ನೂ ಮಾಡಬಹುದು. ಆದರೆ ನಿಖಿಲ್ ಅಥವಾ ಇನ್ಯಾರೇ ಸ್ಪರ್ಧಿಸಿದರೂ ಡಿಕೆಶಿ ಮುಂದೆ ಗೆಲ್ಲುವುದು ಕಷ್ಟ. ಹೀಗಾಗಿ ಜೆಡಿಎಸ್ ಬಿಜೆಪಿ ಎರಡೂ ಪಕ್ಷಗಳಿಗೆ ದೊಡ್ಡ ಸವಾಲು ಎದುರಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಗೆಲುವಿಗೆ ಹಲವು ಕಾರಣಗಳಿದ್ದವು. ಬೆಂಗಳೂರು ನಗರ ಭಾಗಕ್ಕೆ ಬರುವ ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಆದ ಹಿನ್ನೆಡೆ ಡಿ.ಕೆ.ಸುರೇಶ್ ಚೇತರಿಸಿಕೊಳ್ಳಲು ಬಿಡಲಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಮೀರಿದ ಲೀಡ್ ಅವರಿಗೆ ದೊರೆಯಿತು. ಆದರೆ ಡಿಕೆ ಸೋದರರು ಈ ನಷ್ಟವನ್ನು ಬೇರೆ ಕಡೆ ತುಂಬಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದರು. ಆದರೆ ಇತರ ಕ್ಷೇತ್ರಗಳಲ್ಲಿ ದೊಡ್ಡ ಲೀಡ್ ಪಡೆಯುವ ಯತ್ನಕ್ಕೆ ಅಡ್ಡಗಾಲು ಇಟ್ಟವರು ಕುಮಾರಸ್ವಾಮಿ ಮತ್ತು ಯೋಗೀಶ್ವರ್. ಹೀಗಾಗಿ ಇಬ್ಬರ ವಿರುದ್ಧವೂ ಒಂದು ಸೇಡು ತೀರಿಸಿಕೊಳ್ಳುವ ತವಕ ಡಿಕೆಶಿ ಅವರದ್ದು. ಚನ್ನಪಟ್ಟಣದಲ್ಲಿ ಗೆದ್ದರೆ ಈ ಇಬ್ಬರೂ ನಾಯಕರಿಗೆ ತುಸು ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಡಿಕೆಶಿ ಅವರೇ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಸವಾಲುಗಳಿಗೆ ಒಡ್ಡಿಕೊಳ್ಳುವ ಧೈರ್ಯ ತೋರುವ, ದೇವೇಗೌಡರನ್ನೇ ಸೋಲಿಸಿದ್ದ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ವರ್ಚಸ್ಸಿಗೆ ಆಗಿರುವ ಧಕ್ಕೆಯನ್ನು ನಿವಾರಿಸಿಕೊಳ್ಳಲೆಂದೇ ಚನ್ನಪಟ್ಟಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಂದುವೇಳೆ ಅಲ್ಲಿ ಸೋತು ಹೋದರೆ? ಹಾಗೇನಾದರೂ ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಆದ ಸೋಲಿಗಿಂತ ದೊಡ್ಡ ಏಟು ತಿನ್ನಬೇಕಾಗುತ್ತದೆ. ಇದರ ಅರಿವೂ ಅವರಿಗಿದೆ. ರಾಜಕೀಯದಲ್ಲಿ ಆಗಾಗ ರಿಸ್ಕ್ ತೆಗೆದುಕೊಳ್ಳದೇ ಹೋದಲ್ಲಿ ದೊಡ್ಡ ನಾಯಕರಾಗಲು ಹೇಗೆ ಸಾಧ್ಯ ಅಲ್ಲವೇ?
ದಿನೇಶ್ ಕುಮಾರ್ ಎಸ್.ಸಿ