ಹಾಸ್ಯ ನಟ ಮಿತ್ರಾ ಯಾರಿಗೆ ಗೊತ್ತಿಲ್ಲ ಹೇಳಿ. ಹಾಸ್ಯದ ಮೂಲಕ ಎಲ್ಲರನ್ನು ನಕ್ಕು ನಗಿಸಿದ್ದರು. ಹೀಗೆ ಯಶಸ್ವಿ ಹಾಸ್ಯ ನಟನಾಗಿರುವಾಗಲೇ ಚಿತ್ರರಂಗದಿಂದ ದೂರ ಉಳಿದುಬಿಟ್ಟರು. ಅದಕ್ಕೆಲ್ಲ ಅವರೇ ಮಾಡಿಕೊಂಡ ಕೆಲವು ತಪ್ಪುಗಳು. ಆ ಬಗ್ಗೆ ಮಿತ್ರಾ ಅವರೇ ಮಾತನಾಡಿದ್ದಾರೆ. ಹಳೆಯ ದಿನಗಳನ್ನು ನೆನೆದಿದ್ದಾರೆ.
ನಟ ಮಿತ್ರಾ ರಾಗ ಎಂಬ ಸಿನಿಮಾ ಮಾಡಿದ್ದು ಎಲ್ಲರಿಗೂ ನೆನಪಿರಬಹುದು. ಇವರದ್ದೇ ನಟನೆ, ಇವರದ್ದೇ ಬಂಡವಾಳ. ಕುರುಡರ ಪ್ರೀತಿಯ ಸಿನಿಮಾ ಅದು. ಆ ಸಿನಿಮಾ ತೆಗೆದ ಮೇಲೆ ಮಿತ್ರಾ ಅವರಿಗೆ ನಾನಾ ಸಮಸ್ಯೆಗಳು ಎದುರಾಗಿದ್ದು. ಸುಮಾರು ಐದಾರು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದರು. ಆ ಸಮಯದಲ್ಲಿ ಟ್ರೇಲರ್ ಹಾಗೂ ಹಾಡುಗಳು ಸಖತ್ ಟ್ರೆಂಡಿಂಗ್ ನಲ್ಲಿ ಇದ್ದವು. ಹೀಗಾಗಿ ಸಿನಿಮಾ ಮೇಲೆ ಮಿತ್ರಾ ಅವರಿಗೆ ಸೆಲ್ಫ್ ಕಾನ್ಫಿಡೆನ್ಸ್ ಹೆಚ್ಚಾಗಿತ್ತು. ಅವರ ರಾಗ ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಬಾಹುಬಲಿ ರಿಲೀಸ್ ಗೆ ರೆಡಿ ಇತ್ತು. ಕನ್ನಡದ ಬಿಗ್ ಸ್ಟಾರ್ ಗಳ ಸಿನಿಮಾಗಳು ಸಾಲಲ್ಲಿ ಇದ್ದವು. ಇದೆಲ್ಲದರ ನಡುವೆ ಸಿನಿಮಾ ರಿಲೀಸ್ ಮಾಡಬೇಡ ಅಂತ ಜಯಣ್ಣ ಬೋಗೇಂದ್ರ ಅವರೇ ಸಲಹೆ ಕೊಟ್ಟರು ಮಿತ್ರಾ ಕೇಳಿರಲಿಲ್ಲ.
ತಮ್ಮ ಸಿನಿಮಾವನ್ನು ಹೊತ್ತಲ್ಲದ ಹೊತ್ತಲ್ಲಿ ರಿಲೀಸ್ ಮಾಡಿದರು, ಹಾಕಿದ ಬಂಡವಾಳವೂ ಕೈಗೆ ಬರದಂತೆ ಸೋಲು ಕಂಡಿತು. ಈ ಸೋಲಿನಿಂದ ಮಿತ್ರಾ ಅನುಭವಿಸಿದ ನಷ್ಟ ಕಡಿಮೆಯಲ್ಲ, ಕಷ್ಟವೂ ಅಷ್ಟಿಷ್ಟಲ್ಲ. ಎರಡು ಹೊಟೇಲ್ ಉದ್ಯಮವೂ ಬಿದ್ದು ಹೋಯ್ತು, ಹದಿನಾಲ್ಕು ಸ್ಟಾರ್ಟ್ ಅಪ್ ಕಂಪನಿಗಳು ನೆಲ ಕಚ್ಚಿದವು, ಕೋರ್ಟ್ ಕೇಸ್ ಗಳಾದವೂ, ರೌಡಿಗಳು ಬರುವುದಕ್ಕೆ ಶುರುವಾದರು, ಸಿನಿಮಾಗಳು ಇಲ್ಲ, ಹಣವೂ ಇಲ್ಲ. ಹಿಂಗೆ ಒಂದ ಎರಡಾ ಎಲ್ಲಾ ಕಷ್ಟವನ್ನು ಅನುಭವಿಸಿ, ಸಿನಿಮಾ ನಿರ್ಮಾಣವೇ ಬೇಡ ಅಂತ ಈಗ ಕರಾವಳಿ ಮೂಲಕ ಒಂದೊಳ್ಳೆ ಪಾತ್ರದ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ.