ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯ ಕಾವು ವಿಪರೀತವಾಗಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸುವಷ್ಟು ತಾಪಮಾನ ದಾಖಲಾಗುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದ್ದರೂ ಸಹ, ತಾಪಮಾನ ಇಳಿಕೆಯಾಗುತ್ತಿಲ್ಲ.
ಗುಲ್ಬರ್ಗ, ರಾಯಚೂರು, ಬಳ್ಳಾರಿ, ಚಿತ್ರದುರ್ಗದಂಥ ನಗರಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇದ್ದು, ಬೆಂಗಳೂರಿನಲ್ಲೂ ಸಹ ತಾಪಮಾನ 37ನ್ನು ದಾಟುತ್ತಿದೆ.
ಉಷ್ಣಾಂಶದ ಹೆಚ್ಚಳದಿಂದಾಗಿ Sun Stroke (ಶಾಖಾಘಾತ) ಆಗುವ ಸಾಧ್ಯತೆ ಹೆಚ್ಚಿದ್ದು, ಮಕ್ಕಳಿಗೆ ಹೆಚ್ಚು ತೊಂದರೆಯಾಗುವುದರಿಂದ ಅತಿಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿದೆ.
ಮಕ್ಕಳ ಮೇಲೆ ಅತಿಯಾದ ಶಾಖದ ಪರಿಣಾಮ ಬೀರಿದ್ದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಕುರಿತು ವಾರ್ತಾ ಇಲಾಖೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ.
- ಮಕ್ಕಳಿಗೆ Sun Stroke ಆದಾಗ ತಕ್ಷಣವೇ ಮಗುವನ್ನು ಮನೆಯೊಳಗೆ ಅಥವಾ ನೆರಳಿನ ಪ್ರದೇಶಕ್ಕೆ ಕರೆದೊಯ್ಯಿರಿ
- ಕೂಡಲೇ ಮಗುವಿನ ಬಟ್ಟೆಗಳನ್ನು ಸಡಿಲಗೊಳಿಸಿ
- ಮಗುವಿನ ಕಾಲನ್ನು ಸ್ವಲ್ಪ ಎತ್ತರದಲ್ಲಿರಿಸಿ ಮಲಗಿಸಿ
- ಒದ್ದೆ ಬಟ್ಟೆಯಿಂದ ದೇಹವನ್ನು ಒರೆಸಿರಿ
- ಮಗುವು ವಾಂತಿ ಮಾಡುತ್ತಿದ್ದಲ್ಲಿ ಉಸಿರುಗಟ್ಟುವುದನ್ನು ತಪ್ಪಿಸಲು ಒಂದು ಪಕ್ಕಕ್ಕೆ ತಿರುಗಿಸಿ ಮಲಗಿಸಿ
- ಮಗುವು ಎಚ್ಚರವಾಗಿದ್ದಲ್ಲಿ ಸ್ವಲ್ಪಸ್ವಲ್ಪವೇ ನೀರನ್ನು ಕುಡಿಸಿ
ಈ ತುರ್ತು ಚಿಕಿತ್ಸೆಯ ಜೊತೆಗೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ಶಾಖಾಘಾತದಿಂದ ಮಕ್ಕಳಿಗಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.