ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ 5 ಲಕ್ಷ ಪರಿಹಾರ: ಡಿಸಿಎಂ ಡಿ.ಕೆ.ಶಿ

Most read

“ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ಪರಿಹಾರ, ಮನೆಗೆ ನೀರು ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ 10 ಸಾವಿರ ಪರಿಹಾರ, ವಸತಿ ಇಲ್ಲದವರಿಗೆ ವಾಸಿಸಲು ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಇದರ ಜತೆಗೆ ನಗರದಾದ್ಯಂತ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದ್ದು, ಮಳೆ ನೀರುಗಾಲುವೆಗಳನ್ನು ಸ್ವಚ್ಚಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲು ವಿಶ್ವಬ್ಯಾಂಕಿನಿಂದ 1 ಸಾವಿರ ಕೋಟಿ ಸಾಲ ಪಡೆದು ಈಗಾಗಲೇ ಕೆಲಸ ಮಾಡಲಾಗುತ್ತಿದೆ” ಎಂದೂ ತಿಳಿಸಿದ್ದಾರೆ.

ಮಳೆಯಿಂದ ಸಮಸ್ಯೆಗೆ ಒಳಗಾಗಿರುವ ಯಲಹಂಕದ ಕೇಂದ್ರಿಯ ವಿಹಾರ ವಸತಿ ಸಮುಚ್ಚಯ, ಬ್ಯಾಟರಾಯನಪುರದ ಮರಿಯಣ್ಣಪಾಳ್ಯ, ಕೆ ಆರ್ ಪುರಂನ ಹೊರಮಾವಿನ ಶ್ರೀ ಸಾಯಿ ಬಡಾವಣೆಗೆ ಶಿವಕುಮಾರ್ ಅವರು ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪರಿಹಾರ ಕಾರ್ಯ ವೀಕ್ಷಣೆ ಜತೆಗೆ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಸದಸ್ಯರ ಜತೆ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದರು. ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿಗಳ ಜೊತೆ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಸ್ಥಳಾಂತರಗೊಂಡ ನಿವಾಸಿಗಳಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಭೇಟಿ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಅವರು, “ನೀರುಗಾಲುವೆ ಸ್ವಚ್ಛತಾ ಕೆಲಸದ ವಿಚಾರವಾಗಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಕೆಲಸ ಮಾಡುತ್ತಿದ್ದಾರೆ. ಎನ್ ಡಿಆರ್ ಎಫ್ ಅನುದಾನ ಸೇರಿದಂತೆ ವಿವಿಧ ಯೋಜನೆಗಳ ಅಡಿ ಕೆರೆಗಳ ಸ್ವಚ್ಚತೆ, ಹೂಳು ತೆಗೆಯುವ ಕೆಲಸ ಮಾಡಲಾಗುವುದು. ಶೀಘ್ರದಲ್ಲೇ ಕೆರೆ ನಿರ್ವಹಣಾ ಸಮಿತಿಯ ಸಭೆ ಕರೆಯಲಾಗುವುದು” ಎಂದು ಹೇಳಿದರು.

ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

“ಅನೇಕ ಕಡೆ ಖಾಸಗಿಯವರು ರಾಜಕಾಲುವೆ ಒತ್ತುವರಿ ತೆರವುಗೊಳಿಸದಂತೆ ನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇವರುಗಳು ಕೆಲಸ ಮಾಡಲು ಬಿಡುತ್ತಿಲ್ಲ. ತುರ್ತು ಸಂದರ್ಭದಲ್ಲಿ ಇವುಗಳಿಗೆ ಅವಕಾಶವಿಲ್ಲ. ತೆರವುಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಯಾವುದನ್ನೂ ಪರಿಗಣಿಸದೆ ಕೂಡಲೇ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆ ಅಡಿಯಲ್ಲಿ ಕೂಡಲೇ ಆದೇಶ ಹೊರಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಜೊತೆಗೆ ಬಿಡಿಎ ಮತ್ತು ಬಿಬಿಎಂಪಿಗೂ ಸೂಚನೆ ನೀಡಿದ್ದೇನೆ. ಯಾರೇ ಖಾಸಗಿಯವರು ಅಡ್ಡಿ ಪಡಸಿದರೂ ನಾವು ನಮ್ಮ ಕೆಲಸ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ನ್ಯಾಯಲಯದ ಪ್ರಕರಣ ಮುಖ್ಯವಲ್ಲ, ನಮಗೆ ಸಾರ್ವಜನಿಕರ ಹಿತ ಮುಖ್ಯ. ನೀರು ಸರಾಗವಾಗಿ ಹರಿಯುವ ಕಡೆ ಒತ್ತುವರಿ ತೆರವುಗೊಳಿಸಲು ಕೂಡಲೇ ಕೆಲಸ ಮಾಡಬೇಕು ಎಂದು ಆದೇಶ ನೀಡಿದ್ದೇನೆ” ಎಂದರು.

“ಯಲಹಂಕದ ಕೇಂದ್ರಿಯ ವಿಹಾರದಲ್ಲಿ 8 ಬ್ಲಾಕ್ ಗಳಿದ್ದು ಸುಮಾರು 600 ಕ್ಕೂ ಹೆಚ್ಚು ಫ್ಲಾಟ್ ಗಳಿವೆ. ಇವುಗಳನ್ನು ಸದ್ಯದ ಮಟ್ಟಿಗೆ ಬಿಬಿಎಂಪಿ ರಕ್ಷಣಾ ಕಾರ್ಯಕ್ಕಾಗಿ ಸುಪರ್ಧಿಗೆ ತೆಗೆದುಕೊಂಡಿದೆ. ಶೇ 95 ರಷ್ಟು ನಿವಾಸಿಗಳು ಸ್ಥಳಾಂತರಕ್ಕೆ ಸಹಕಾರ ನೀಡಿದ್ದಾರೆ. 20 ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದಿದ್ದರೂ ನಾವು ಇರುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಇಲ್ಲಿಯೇ ಬಿಡಲು ಆಗುವುದಿಲ್ಲ. ಏಕೆಂದರೆ ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ ಹೀಗಿದ್ದಾಗ ಏನಾದರೂ ತೊಂದರೆ ಆದರೆ ನಾವು ಜವಾಬ್ದಾರರಾಗುತ್ತೇವೆ. ಈ ಕಾರಣಕ್ಕೆ ಅವರ ಮನವೊಲಿಸಿ ಹತ್ತಿರದಲ್ಲಿಯೇ ವಸತಿಗೃಹಗಳಲ್ಲಿ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

“ಅನೇಕ ವಯಸ್ಸಾದವರು ಮನೆ ಬಿಟ್ಟು ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯ ಬಗ್ಗೆ ಭಾವನಾತ್ಮಕವಾಗಿ ಯೋಚನೆ ಮಾಡುತ್ತಿದ್ದಾರೆ. ಅಂತಹವರಿಗೆ ಒಂದು ವಾರದ ಮಟ್ಟಿಗೆ ಹತ್ತಿರದಲ್ಲಿಯೇ ವಸತಿಗೃಹಗಳಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ಇದು ನಮ್ಮ ಜವಾಬ್ದಾರಿ. ಇಲ್ಲಿನ ನಿವಾಸಿಗಳ ಸಂಘದವರೂ ಸಹಕಾರ ನೀಡುತ್ತಿದ್ದಾರೆ. ತೊಂದರೆಗೆ ಒಳಗಾದವರಿಗೆ ಅವರ ಮನೆಯಂತೆಯೇ ಸೌಲಭ್ಯ ಕಲ್ಪಿಸಿಕೊಡಲಾಗುವುದು. ನಿವಾಸಿಗಳು ಮುಜುಗರಕ್ಕೆ ಒಳಗಾಗದೆ ಅಧಿಕಾರಿಗಳ ಬಳಿ ಕೇಳಿ ಸೌಲಭ್ಯ ಪಡೆದುಕೊಳ್ಳಬೇಕು” ಎಂದರು.

ಮಳೆ ನೀರು ತುಂಬಿಕೊಂಡಿರುವುದಕ್ಕೆ ಭವಿಷ್ಯದಲ್ಲಿ ಪರಿಹಾರವೇನು ಎಂದು ಕೇಳಿದಾಗ, “ಬೆಂಗಳೂರಿನ ಹಾಗೂ ಯಲಹಂಕ ಇತಿಹಾಸದಲ್ಲಿಯೇ 115- 120 ವರ್ಷಗಳ ನಂತರ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ನಮಗೆ ಇಷ್ಟು ಜಾಸ್ತಿ ಮಳೆ ಬರುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಎಲ್ಲೆಲ್ಲಿ ನೀರು ನುಗ್ಗುತ್ತಿದೆ ಹಾಗೂ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದಕ್ಕೆ ಜಾಗಗಳನ್ನು ಗುರುತಿಸಲಾಗುತ್ತಿದೆ” ಎಂದು ಹೇಳಿದರು.

“ಅಕ್ಕಪಕ್ಕದಲ್ಲಿ ಕೆರೆಗಳ ಪಕ್ಕ ನೀರು ಹರಿಯಲು ಮತ್ತು ನಿಂತುಕೊಳ್ಳಲು ಜಾಗವಿತ್ತು, ಈಗ ಜಾಗ ಕಡಿಮೆಯಾಗಿದೆ, ಅದಕ್ಕಾಗಿ ಶಾಶ್ವತ ಪರಿಹಾರವನ್ನು ಕಲ್ಪಿಸಲಾಗುವುದು. ಈ ರೀತಿಯ ಅವಘಡ ನಮ್ಮಲ್ಲಿ ಮಾತ್ರವಲ್ಲ, ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ಆಗಿದೆ. ಇತ್ತೀಚೆಗೆ ಪ್ರಾನ್ಸ್ ಅಲ್ಲಿಯೂ ತೊಂದರೆ ಆಗಿದೆ. ನಾವು ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ” ಎಂದರು.

More articles

Latest article