ಬೆಂಗಳೂರು: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿಗಳ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ಧತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಭಾರತೀಯರ ಅಭಿಪ್ರಾಯ ಪಡೆಯದೆ ನೇರವಾಗಿ ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು ಮೊದಲಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಕಾರ್ಯವನ್ನು ಮಾಡಿತ್ತು. ಮೋದಿ ಸರ್ಕಾರ ಡಿಸೆಂಬರ್ 17ರಂದು ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಡಿ.18ರಂದು ಅಂಗೀಕಾರ ಪಡೆದಿದೆ. ಸುಮಾರು 12.16 ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ ಎಂದರು.
ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ. 51.6 ಮಹಿಳೆಯರಿದ್ದಾರೆ ಎಂದು ವಿವರಿಸಿದರು.
ಮನಮೋಹನ್ ಸಿಂಗ್ ಅವರ ಜನಪರ ಕಾಯ್ದೆಯನ್ನು ಹಿಂಪಡೆದುಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ನರೇಗಾ ಕಾಯ್ದೆ ಪ್ರಕಾರ ಜನಸಾಮಾನ್ಯರು, ಕೂಲಿ ಕಾರ್ಮಿಕರು, ಕೃಷಿ ಕಾರ್ಯಗಳ ಜೊತೆಯಲ್ಲಿ ತಾವಿದ್ದ ಸ್ಥಳದಲ್ಲೇ ನರೇಗಾ ಅಡಿ ಕೂಲಿ ಕೆಲಸ ಮಾಡಲು ಅವಕಾಶವಿತ್ತು. ಆ ಮೂಲಕ ಹಳ್ಳಿಗಾಡಿನ ಆರ್ಥಿಕತೆ ಕಟ್ಟಲು ಸಾಧ್ಯವಾಗಿತ್ತು. ಸ್ಥಳೀಯವಾಗಿ ಆಸ್ತಿ ಸೃಜನೆಯಾಗುತ್ತಿತ್ತು. ಉದ್ಯೋಗ ಕೇಳಿ ಪಡೆಯುವ ಹಕ್ಕು ಜನರಿಗಿತ್ತು. ಈಗ ಇದ್ಯಾವುದೂ ಇಲ್ಲವಾಗಿದೆ ಎಂದರು.
ಕಳೆದ 11 ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಅಂದರೆ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ಪ್ರಸ್ತುತ ಕಾಯ್ದೆಯಡಿ 100 ದಿನ ಕನಿಷ್ಟ ಕೆಲಸ ನೀಡಬೇಕಾಗಿತ್ತು. ಅವರು ಎಲ್ಲಿ ವಾಸಿಸುತ್ತಾರೋ ಅಲ್ಲಿಯೇ ಕೆಲಸ ನೀಡಬೇಕಾಗಿತ್ತು. ಈಗ ಹೊಸ ಕಾಯ್ದೆ ಸೆಕ್ಷನ್ 5(1) ಪ್ರಕಾರ ಸರ್ಕಾರ ಅಧಿಸೂಚಿತ ಪ್ರದೇಶದಲ್ಲಿ ಮಾತ್ರ ಉದ್ಯೋಗ ನೀಡಲಾಗುತ್ತದೆ. ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯತ್ ಗಳಿಗೂ ಖಾತ್ರಿಯಿರುವುದಿಲ್ಲ ಎಂದರು.
ವರ್ಷದ ಯಾವುದೇ ಅವಧಿಯಲ್ಲಿ ಲಭ್ಯವಾಗುತ್ತಿದ್ದ ಕೂಲಿ ಕೆಲಸವನ್ನು ಈಗ ನಿರ್ಬಂಧಿಸಲಾಗಿದ್ದು, ಕೃಷಿ ಚಟುವಟಿಕೆ ಅವಧಿಯ 60 ದಿನ ಯೋಜನೆಯಡಿ ಯಾವುದೇ ಉದ್ಯೋಗ ನೀಡಲಾಗುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹಣವನ್ನು ಸರಿದೂಗಿಸುವ ಅವಕಾಶವನ್ನು ತೆಗೆದು ಹಾಕಲಾಗಿದೆ. ಹಿಂದಿನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಪೂರ್ಣ ಅನುದಾನವನ್ನು ಭರಿಸುತ್ತಿತ್ತು. ಹೊಸ ಕಾಯ್ದೆ ಪ್ರಕಾರ ಶೇ.60 ರಷ್ಟು ಕೇಂದ್ರ ಹಾಗೂ ಶೇ.40ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಇದು ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸು ಹೊರೆಯನ್ನು ಹೇರಲಿದ್ದು, ಇದು ಸಂವಿಧಾನದ ಆರ್ಟಿಕಲ್ 258 ಮತ್ತು 280ಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಗಳಿಗೆ ಇದ್ದ ಅಧಿಕಾರವನ್ನು ಇದೀಗ ಕೇಂದ್ರ ಸರ್ಕಾರ ಕಿತ್ತು ಕೊಂಡಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಹೊಸ ಕಾಯ್ದೆಯನ್ನು ಜಾರಿಗೊಳಿಸದಿರುವಂತೆ ಕೋರಿ ಪ್ರಧಾನಿಯವರಿಗೆ ಡಿ.30ರಂದು ನಾನು ಪತ್ರ ಬರೆದಿದ್ದೇನೆ. ಹೊಸ ಕಾಯ್ದೆಯನ್ನು ರದ್ದುಪಡಿಸಬೇಕು. ನರೇಗಾ ಕಾಯ್ದೆ ಮತ್ತೆ ಜಾರಿಗೊಳಿಸಬೇಕು. ಮಹಿಳೆಯರು, ದಲಿತರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು. ಪಂಚಾಯತ್ಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ ಎಂದರು.
ಹೊಸ ಬಿಲ್ ಮೂಲಕ ಗ್ರಾಮೀಣ ಜನರ ಜೀವನೋಪಾಯ ಕಸಿಯಲಾಗುತ್ತಿದೆ. ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಆಯವ್ಯಯದ ಮೇಲೆ ಹೆಚ್ಚಿನ ಹೊರೆಯನ್ನು ಸಂವಿಧಾನ ಬಾಹಿರವಾಗಿ ಹೇರಲಾಗುತ್ತಿದೆ. ಹೊಸ ಕಾಯ್ದೆಯಿಂದ ನಿರುದ್ಯೋಗ ಹೆಚ್ಚಳ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ, ದಲಿತ ಹಾಗೂ ಆದಿವಾಸಿ ಕುಟುಂಬಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿ, ಗ್ರಾಮೀಣ ಜೀವನೋಪಾಯಗಳ ಕುಸಿತದಿಂದ ಗ್ರಾಮೀಣ ಬದುಕು ದುಸ್ತರಗೊಳ್ಳಲಿದೆ. ಪಂಚಾಯತ್ಗಳು ಕೇವಲ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುವಂತಾಗುತ್ತದೆ. ಈ ಮೂಲಕ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಾಗುತ್ತಿದೆ ಎಂದರು.
ಮನುಸ್ಮೃತಿ ಜಾರಿಗೆ ಹುನ್ನಾರ:
ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು. 20 ವರ್ಷಗಳ ಹಿಂದೆ ಮನಮೋಹನ ಸಿಂಗ್ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸುವ ಸಂದರ್ಭದಲ್ಲೇ ಬಿಜೆಪಿ ಯೋಜನೆಯನ್ನು ವಿರೋಧಿಸಿತ್ತು. ಆಹಾರ ಭದ್ರತಾ ಕಾಯ್ದೆಯನ್ನು ಸಹ ಗೇಲಿ ಮಾಡಿತ್ತು. ಜನಪರವಾದ ಕಾನೂನುಗಳನ್ನು ನಾಶ ಮಾಡುವುದೇ ಬಿಜೆಪಿ ಕೆಲಸ.
ಮನುಸ್ಮೃತಿ ಪ್ರಕಾರ ಮಹಿಳೆಯರು, ದಲಿತರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು ಎಂದು ಹೇಳುತ್ತದೆ. ಅವರು ಸ್ವಾಭಿಮಾನದಿಂದ ಬದುಕಬಾರದು. ಅವರು ಪೂರ್ಣ ಸೇವಕರಾಗಿಯೇ ಇರಬೇಕು ಎಂದು ಹೇಳುತ್ತದೆ. ಇಂತಹ ಮನುಸ್ಮೃತಿಯಿಂದ ಪ್ರೇರಣೆ ಪಡೆದಿರುವ RSS ಬಿಜೆಪಿ ಸರ್ಕಾರಕ್ಕೆ ಮಾರ್ಗದರ್ಶಕವಾಗಿದೆ. ಮಹಾತ್ಮಾ ಗಾಂಧಿಯನ್ನು ಗೋಡ್ಸೆ ಮೊದಲ ಬಾರಿ ಕೊಂದು ಹಾಕಿದರೆ, ಇದೀಗ ನರೇಗಾ ಕಾಯ್ದೆಯಲ್ಲಿ ಇದ್ದ ಮಹಾತ್ಮಾ ಗಾಂಧಿ ಹೆಸರನ್ನು ತೆಗೆದು ಹಾಕುವ ಮೂಲಕ ಬಿಜೆಪಿ ಮತ್ತೆ ಅವರನ್ನು ಮತ್ತೆ ಮತ್ತೆ ಕೊಲ್ಲುವ ಕೆಲಸ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, 20 ವರ್ಷಗಳ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯನ್ನುಈಗ ರದ್ದುಪಡಿಸಲಾಗಿದೆ. ಈ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಸ್ಥಳೀಯ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ. ಜತೆಗೆ ರಾಜ್ಯಗಳ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳಲಿದೆ ಎಂದು ವಿವರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಚಲುವರಾಯ ಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.
ಬೇಡಿಕೆಗಳು:
ವಿಕಸಿತ ಭಾರತ್ ಗ್ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮರುಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು ಮತ್ತು ಪಂಚಾಯತಿಗಳ ಸ್ವಯಂ ಆಡಳಿತದ ಹಕ್ಕನ್ನು ಮರುಸ್ಥಾಪಿಸಬೇಕು.
ನರೇಗಾದಲ್ಲಿ ಪ್ರತಿವರ್ಷ 100 ದಿನ ಉದ್ಯೋಗ ಖಾತ್ರಿ ಇತ್ತು. ಆದರೆ ವಿಭಿ ರಾಮ್ ಜಿ ಯೋಜನೆಯು ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ.
ನರೇಗಾದಲ್ಲಿ ಮೊದಲು ವರ್ಷದ ಸರ್ವ ಋತುವಿನಲ್ಲಿಯೂ ಕೆಲಸ ದೊರಕುತ್ತಿತ್ತು. ವಿಭಿ ರಾಮ್ ಜಿ ಅಡಿಯಲ್ಲಿ ಕೃಷಿ ಚಟುವಟಿಕೆ ಸಂದರ್ಭದಲ್ಲಿ 60 ದಿನಗಳ ಕಾಲ ಕೆಲಸ ನೀಡುವುದಿಲ್ಲ.
ನರೇಗಾದಲ್ಲಿ ಪಂಚಾಯತ್‌ಗಳಿಗೆ ಕೆಲಸದ ಬೇಡಿಕೆಯಷ್ಟೇ ಅನುದಾನ ಲಭ್ಯವಿದ್ದು, ಅದಕ್ಕೆ ಅನುಗುಣವಾಗಿ ಕೆಲಸದ ಯೋಜನೆ ತಯಾರಿಸಿ, ಉದ್ಯೋಗಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ವಿಭಿ ರಾಮ್ ಜಿ ಅಡಿಯಲ್ಲಿ ಕೂಲಿ ಕಾರ್ಮಿಕರು ಅನುದಾನ ನೀಡುವುದಕ್ಕೆ ಕಾಯಬೇಕು. ಒಂದು ವೇಳೆ ಆ ಪಂಚಾಯತಿಗೆ ಕೇಂದ್ರ ಸರ್ಕಾರ ಕೆಲಸ ನಿರ್ಧರಿಸುವುದನ್ನೇ ಕಾಯಬೇಕಿದೆ.
ನರೇಗಾದಲ್ಲಿ ಕೆಲಸವನ್ನು ದಾಖಲೆ ಪುಸ್ತಕಗಳಲ್ಲಿ ದಾಖಲಿಸಲಾಗುತ್ತಿತ್ತು. ಭಾರತದ ಪ್ರತಿ ಗ್ರಾಮವೂ ಈ ಯೋಜನೆಯ ಲಾಭ ಪಡೆಯಬಹುದಾಗಿತ್ತು. ಕೂಲಿಯನ್ನು ಬೆಲೆಯೇರಿಕೆಗೆ ಸರಿದೂಗಿಸಲಾಗುತ್ತಿತ್ತು.
ವಿಭಿ ರಾಮ್ ಜಿ: ದುಷ್ಪರಿಣಾಮಗಳು:
ನಿರುದ್ಯೋಗದ ಪ್ರಮಾಣ ಹೆಚ್ಚಳ; ಕನಿಷ್ಠ ವೇತನದ ರಕ್ಷಣೆಯಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ; ಕಾರ್ಮಿಕರ ಶೋಷಣೆ ಮತ್ತು ಒತ್ತಡ ಹೆಚ್ಚಳ; ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ; ದಲಿತ ಮತ್ತು ಅದಿವಾಸಿ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿ; ಬಲವಂತದ ವಲಸೆ, ಗ್ರಾಮೀಣ ಜೀವನೋಪಾಯಗಳ ಕುಸಿತ ಮತ್ತು ಗ್ರಾಮೀಣ ಸಂಕಷ್ಟ ತೀವ್ರಗೊಳ್ಳುವ ಸಾಧ್ಯತೆ; ಪಂಚಾಯತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಸೀಮಿತಗೊಳ್ಳಲಿವೆ; ಸ್ಥಳೀಯ ಕಾಮಗಾರಿಗಳನ್ನು ನಿರ್ಧರಿಸುವಲ್ಲಿ ಪಂಚಾಯತಿಗಳ ಅಧಿಕಾರ ಮೊಟಕು ಮತ್ತು ಗ್ರಾಮೀಣ ಆಸ್ತಿಗಳನ್ನು ನಿರ್ಮಿಸುವಂತೆ ಜನರು ಬೇಡಿಕೆ ಇಡುವುದು ಅಸಾಧ್ಯವಾಗುತ್ತದೆ ಎಂದರು.

