ನವದೆಹಲಿ: ದೇಶದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂವಾದ ಹಾಗೂ ಚರ್ಚೆ ನಡೆಸಲು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮುಸ್ಲಿಂ ಸಮಾಜದ ಧರ್ಮ ಗುರುಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಉಮರ್ ಅಹ್ಮದ್ ಇಲಿಯಾಸಿ ಹೇಳಿದ್ದಾರೆ.
ದೆಹಲಿಯ ಹರಿಯಾಣ ಭವನದಲ್ಲಿ ನಡೆದ ಸಭೆಯಲ್ಲಿ ಇಮಾಮರು, ಮುಫ್ತಿ ಹಾಗೂ ಮದರಸಾಗಳ ಮುಖ್ಯಸ್ಥರು (ಮೊಹ್ತಮಿಮ್) ಸೇರಿ ಮುಸ್ಲಿಂ ಸಮಾಜದ 60 ಪ್ರಮುಖರು ಪಾಲ್ಗೊಂಡಿದ್ದರು. ಅಖಿಲ ಭಾರತ ಇಮಾಮ್ ಸಂಘಟನೆಯ ಆಹ್ವಾನದ ಮೇರೆಗೆ ಹಾಗೂ ಆರ್‌ಎಸ್ಎಸ್ ಮುಖಂಡರಾದ ಮೋಹನ್ ಭಾಗವತ್ ಕೃಷ್ಣ ಗೋಪಾಲ್ ಹಾಗೂ ಇಂದ್ರೇಶ್ ಕುಮಾರ್ ಅವರೂ ಹಾಜರಿದ್ದರು. ಮೂರೂವರೆ ಗಂಟೆ ನಡೆದ ಸಭೆಯಲ್ಲಿ, ಸಮಾಜದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಎಂದು ಇಲಿಯಾಸಿ ತಿಳಿಸಿದ್ದಾರೆ.
ಇಂದಿನ ಸಭೆ ಸಕಾರಾತ್ಮಕವಾಗಿ ನಡೆದಿದೆ ಎಂಬುದಾಗಿ ಆರ್ ಎಸ್ ಎಸ್ ಹೇಳಿದೆ. ದೇಶದ ಹಿತಾಸಕ್ತಿ ಕಾಪಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು. ಈ ಉದ್ದೇಶ ಈಡೇರಿಕೆಗಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಮಾಜದ ಎಲ್ಲ ವರ್ಗಗಳ ನಡುವೆ ಸಂವಾದಗಳು ನಡೆಯಬೇಕು. ಇದು ನಿರಂತರ ಪ್ರಕ್ರಿಯೆ ಎಂದು ಆರ್ ಎಸ್ ಎಸ್ ಸಭೆಗೆ ವಿವರಿಸಿತು ಎಂದು ಸಂಘ ಪರಿವಾರದ ಮಾಧ್ಯಮ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಮಂದಿರಗಳು ಹಾಗೂ ಮಸೀದಿಗಳ ನಡುವೆ ಮಾತುಕತೆ ನಡೆಯಬೇಕು, ಪೂಜಾರಿಗಳು ಹಾಗೂ ಇಮಾಮರ ನಡುವೆ, ಗುರುಕುಲಗಳು ಹಾಗೂ ಮದರಸಾಗಳ ಮಧ್ಯೆ ಸಂವಾದ ನಡೆಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾದೆ.
ಈ ಸಭೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾಗವತ್ ಅವರು ಉಭಯ ಸಮುದಾಯಗಳ ಮಧ್ಯೆ ರಚನಾತ್ಮಕ ಸಂವಾದ ನಡೆಸುವ ಪ್ರಯತ್ನಗಳನ್ನು ಅಖಿಲ ಭಾರತ ಇಮಾಮ್ ಸಂಘಟನೆ ಮತ್ತು ಆರ್ ಎಸ್ ಎಸ್ ಮುಂದುವರಿಸಿಕೊಂಡು ಹೋಗಬೇಕು ಎಂಬ ಅಭಿಪ್ರಾಯಕ್ಕೆ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು ಎಂದು ತಿಳಿಸಿದರು ಎಂದು ಇಲಿಯಾಸಿ ತಿಳಿಸಿದರು.