ಬೆಂಗಳೂರು : ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ ಐಎ ಎಸ್ /ಕೆಐಎಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಲ್ಲಿ 16 ಮಂದಿ ಸರ್ಕಾರಿ ಹುದ್ದೆ ಪಡೆದಿದ್ದಾರೆ.
ಹಜ್ ಭವನದಲ್ಲಿ ಆರಂಭಿಸಿರುವ ತರಬೇತಿ ಕೇಂದ್ರದಲ್ಲಿ ರಾಜ್ಯದ ಎಲ್ಲೆಡೆಯಿಂದ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಅದರ ನಡುವೆಯೇ ಪರೀಕ್ಷೆ ಪಡೆದು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆ ಪಡೆದಿದ್ದಾರೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಭಾಂಗಣದಲ್ಲಿ ಸೋಮವಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು, ಉನ್ನತ ಶಿಕ್ಷಣ ಪಡೆದ ಸಮುದಾಯದ ಅಭ್ಯರ್ಥಿ ಗಳ ಉಜ್ವಲ ಭವಿಷ್ಯಕ್ಕೆ ಆರಂಭಿಸಿದ ತರಬೇತಿ ಕೇಂದ್ರದಲ್ಲಿ ಅತ್ಯಲ್ಪ ಅವಧಿಯಲ್ಲಿ 16 ಮಂದಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಕನಿಷ್ಠ 50 ಮಂದಿ ಐಎಎಸ್ ಪಾಸ್ ಮಾಡುವ ಮಟ್ಟಕ್ಕೆ ಗುಣಮಟ್ಟದ ತರಬೇತಿ ನೀಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ 2023-24 ಸಾಲಿನಲ್ಲಿ ಐದು ಲಕ್ಷ ವಿದ್ಯಾರ್ಥಿಗಳಿಗೆ 161 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ತಿಳಿಸಿದರು. ಇಲಾಖೆಗೆ ನಿಗದಿಯಾಗಿದ್ದ 1535 ಕೋಟಿ ರೂ. ಅನುದಾನದ ಪೈಕಿ 1525 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ವೆಚ್ಚವಾಗುವ ಮೂಲಕ ಶೇ. 99.75 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು. ಅಲ್ಪಸಂಖ್ಯಾತರ ನಿರ್ದೇನಾಲಯ ವ್ಯಾಪ್ತಿಯ ವಸತಿ ಕಾಲೇಜು, ಎಪಿಜೆ ಕಲಾಂ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿರುವ ಬಗ್ಗೆ ಸಚಿವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಸತಿ ಕಾಲೇಜಿನ ಪಿಯುಸಿ ಪರೀಕ್ಷೆಯಲ್ಲಿ 1908 ವಿದ್ಯಾರ್ಥಿಗಳ ಪೈಕಿ 1869 ವಿದ್ಯಾರ್ಥಿಗಳು ತೇರ್ಗಡೆಯಾಗಿ 686 ವಿದ್ಯಾರ್ಥಿಗಳು ಅಗ್ರಶ್ರೇಣಿ, 1118 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಮೂಲಕ ಶೇ.98 ರಷ್ಟು ಫಲಿತಾಂಶ ಬಂದಿದ್ದು, ಇದೇ ಮೊದಲ ಬಾರಿಗೆ ಎಪಿಜೆ ಕಲಾಂ ವಸತಿ ಶಾಲೆಯಲ್ಲಿ ಆರಂಭಿಸಿದ ಸಿಬಿಎಸ್ಇ ಪಠ್ಯ ಕ್ರಮದಲ್ಲಿ 1228 ವಿದ್ಯಾರ್ಥಿಗಳ ಪೈಕಿ 1183 ವಿದ್ಯಾರ್ಥಿಗಳು ತೇರ್ಗಡೆಯಾಗಿ 20 ವಿದ್ಯಾರ್ಥಿಗಳು ಅಗ್ರಶ್ರೇಣಿ, 369 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮೂಲಕ ಶೇ. 97 ರಷ್ಟು, ರಾಜ್ಯ ಪಠ್ಯ ಕ್ರಮದ ವಸತಿ ಶಾಲೆಗಳಲ್ಲಿ ಶೇ. 91.20 ರಷ್ಟು ಫಲಿತಾಂಶ ಬಂದಿರುವ ಬಗ್ಗೆ ಅಧಿಕಾರಿಗಳು ವಿವರಿಸಿದರು. ಇದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.