ಜಲಮೂಲಗಳ ನಿರ್ವಹಣೆಗೆ ಉಪಗ್ರಹ ಹಾಗೂ ಎಐ ತಂತ್ರಜ್ಞಾನದ ಡಿಜಿಟಲ್‌ ವಾಟರ್‌ ಸ್ಟಾಕ್‌ ಅಳವಡಿಕೆ: ಸಚಿವ ಎನ್‌ ಎಸ್‌ ಭೋಸರಾಜು

Most read

ಬೆಂಗಳೂರು: ರಾಜ್ಯದಲ್ಲಿರುವ ಜಲಮೂಲಗಳ ಸಮಗ್ರ ನಿರ್ವಹಣೆ ಹಾಗೂ ನೀರಿನ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ನಿಟ್ಟಿನಲ್ಲಿ ಉಪಗ್ರಹ ದತ್ತಾಂಶ ಹಾಗೂ ಎಐ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಣೆಯನ್ನು ನೀಡಿರುವ ಅವರು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಕುಸಿತಗೊಂಡಿರುವ ಹಾಗೆಯೇ, ನೀರಿನ ಲಭ್ಯತೆ ಅಸಮರ್ಪಕವಾಗಿರುವ ಸಂಧರ್ಭದಲ್ಲಿ ದೇಶದಲ್ಲೆ ಮೊದಲ ಬಾರಿಗೆ, ಕರ್ನಾಟಕ ಸರ್ಕಾರ ಡಿಜಿಟಲ್ ವಾಟರ್ ಸ್ಟಾಕ್‘ (DWS) ಎಂಬ ನೂತನ ತಂತ್ರಜ್ಞಾನ ಆಧಾರಿತ ನೀರಿನ ನಿರ್ವಹಣಾ ವೇದಿಕೆಯನ್ನು ಅನುಷ್ಠಾನಗೊಳಿಸುತ್ತಿದೆ.

ಕರ್ನಾಟಕ ಟ್ಯಾಂಕ್ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ರಾಜ್ಯದ ಕೆರೆಗಳು ಮತ್ತು ಇನ್ನಿತರ ಜಲಮೂಲಗಳನ್ನು ಡಿಜಿಟಲ್ ವಾಟರ್ ಸ್ಟಾಕ್ (DWS) ಚಟುವಟಿಕೆ ಅಡಿಯಲ್ಲಿ ಸಮರ್ಪಕವಾಗಿ ಸರ್ವೇ ಸೇರಿದಂತೆ ಮೇಲ್ವಿಚಾರಣೆ ಹಾಗೂ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದನ್ನು ಖಚಿತಪಡಿಸಲಿದೆ.

ಉಪಗ್ರಹ ಸೆನ್ಸಾರ್‌ ಹಾಗೂ ಇಮೇಜಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಮೂಲಕ ರಾಜ್ಯದ ಸರೋವರಗಳು, ಕೆರೆಗಳು ಮತ್ತು ಭೂಗರ್ಭದ ಜಲಧಾರೆಗಳ (aquifer‌) ಗಳ ಸಮಗ್ರ ನಿರ್ವಹಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. ವಿವಿಧ ಇಲಾಖೆಗಳಲ್ಲಿ ಹಂಚಿಹೋಗಿರುವ ಜಲಮೂಲಗಳ ದತ್ತಾಂಶಗಳನ್ನು ಒಗ್ಗೂಡಿಸುವ ಮೂಲಕ ಒಂದೇ ವೇದಿಕೆಯಡಿಯಲ್ಲಿ ನಿರ್ವಹಿಸುವುದು ಇದರ ಮುಖ್ಯ ಉದ್ದೇಶವಾಗಿವೆ.

ರಾಜ್ಯದಲ್ಲಿ 41,000ಕ್ಕೂ ಹೆಚ್ಚು ನೀರಿನ ಮೂಲಗಳಿದ್ದು, 34,000ಕ್ಕೂ ಹೆಚ್ಚು ಕೆರೆಗಳನ್ನು ಈಗಾಗಲೇ ಸಮೀಕ್ಷೆ ಮಾಡಲಾಗಿದೆ ಮತ್ತು 31,000ಕ್ಕೂ ಹೆಚ್ಚು ಜಿಯೋಟ್ಯಾಗ್‌ ಮಾಡಲಾಗಿದೆ. 42,678 ಎಕರೆ ಅಕ್ರಮ ಅತಿಕ್ರಮಣ ಗುರುತಿಸಲಾಗಿದ್ದು, 29,000 ಎಕರೆ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಮೊದಲ ಹಂತದಲ್ಲಿ ಅಂತರ್ಜಲದ ನೀರಿನ ಅತಿಯಾದ ಬಳಕೆ ಮಾಡುತ್ತಿರುವ 41  ತಾಲ್ಲೂಕುಗಳಲ್ಲಿ ಡಿಜಿಟಲ್‌ ವಾಟರ್‌ ಸ್ಟಾಕ್‌ ಯೋಜನೆಯನ್ನು ಜಾರಿಗೆ ತರಲಾಗುವುದು. ರಾಜ್ಯದ ಜಲಮೂಲಗಳನ್ನು ನೈಸರ್ಗಿಕವಾದ ಉಳಿತಾಯ ಖಾತೆಗಳಂತೆ ಪರಿವರ್ತಿಸಲು ಹಾಗೆಯೇ, ಲಭ್ಯವಿರುವಂತಹ ಜಲಮೂಲಗಳ ಸಮರ್ಪಕ ನಿರ್ವಹಣೆ ಮಾಡುವುದಕ್ಕೆ ನಮ್ಮ ಸರಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಬಹಳಷ್ಟು ಸಹಕಾರಿಯಾಗಿರಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಏನಿದು ಡಿಜಿಟಲ್‌ ವಾಟರ್‌ ಸ್ಟಾಕ್:‌

ಉಪಗ್ರಹಗಳ ಸೆನ್ಸರ್‌ಗಳಿಂದ ಪಡೆದ ದತ್ತಾಂಶಗಳು, ಎಐ ಹಾಗೂ ಮಷಿನ್‌ ಲರ್ನಿಂಗ್‌ನಿಂದ ಇಮೇಜಿಂಗ್‌ನ ವಿಶ್ಲೇಷಣೆ ಮಾಡುವ ತಂತ್ರಜ್ಞಾನ ಇದಾಗಿದೆ. ಇದರಿಂದ ಜಲಮೂಲಗಳ ಐದು ವರ್ಷಗಳ ಹಿಂದಿನ ದತ್ತಾಂಶವನ್ನು ಪಡೆದುಕೊಂಡು, ಪ್ರಸ್ತುತ ಇರುವ ಸ್ಥಿತಿಗತಿಗಳ ಹೋಲಿಕೆ ಮಾಡಬಹುದಾಗಿದೆ. ಅಲ್ಲದೇ, ಯಾವುದೇ ಜಲಮೂಲದ ಸ್ವರೂಪ, ನೀರಿನ ಶೇಖರಣೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಗುರುತಿಸುವ ಮೂಲಕ ಅದನ್ನು ಸರಿಪಡಿಸುವ ಕಾರ್ಯ ಮಾಡಲು ಇದು ಅನುವು ಮಾಡಿಕೊಡಲಿದೆ.

ಮಾಸ್ಟರ್ ವಾಟರ್‌ ಅಟ್ಲಸ್ ಮತ್ತು ಡ್ಯಾಶ್‌ಬೋರ್ಡ್:

ಡಿಜಿಟಲ್‌ ವಾಟರ್‌ ಸ್ಟಾಕ್‌ ಮೂಲಕ ರಾಜ್ಯಮಟ್ಟದ ನೀರಿನ ನಿರ್ವಹಣೆಯ ಡ್ಯಾಶ್‌ಬೋರ್ಡ್ ಮತ್ತು “ಮಾಸ್ಟರ್ ವಾಟರ್ ಅಟ್ಲಸ್” ರಚಿಸಲಾಗುವುದು. ಇದು ಅಂತರ್ಜಲದ ಮಟ್ಟ, ಮಳೆಯ ಪ್ರಮಾಣ, ಮೇಲ್ಮೈ ಹರಿವು, ಬಳಕೆ ಮತ್ತು ನೀರಿನ ಗುಣಮಟ್ಟದ ಡೇಟಾವನ್ನು ಸಂಗ್ರಹಿಸಿ, ನಿಖರ ದತ್ತಾಂಶಗಳ ಮೂಲಕ ನೀರಿನ ಮೂಲಗಳ ಸ್ಥಿತಿಯನ್ನು ನಿರ್ವಹಿಸಲು ಅನುವು ಮಾಡಿಕೊಡಲಿದೆ.

ಈ ಯೋಜನೆಯ ಮೂಲಕ ನಗರೀಕರಣ ಹಾಗೂ ಕೃಷಿ ಒತ್ತಡದಿಂದ ಉಂಟಾಗುವ ನೀರಿನ ಮೂಲಕ ಕುಸಿತ, ಮಾಲಿನ್ಯ ಮತ್ತು ಅತಿಕ್ರಮಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಲು ಹಾಗೂ ತಕ್ಷಣದ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article