ಬೆಂಗಳೂರು: ಸೈಬರ್ ವಂಚನೆಗಳನ್ನು ಕುರಿತು ಪ್ರತಿದಿನ ವರದಿಗಳು ಪ್ರಕಟವಾಗುತ್ತಲೇ ಇವೆ. ಪೊಲೀಸರೂ ಇಂತಹ ವಂಚನೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಆದರೂ ಸಾರ್ವಜನಿಕರು ಮೋಸ ಹೋಗುತ್ತಿರುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬೆಂಗಳೂರಿನ ನಿವಾಸಿಯೊಬ್ಬರಿಗೆ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹೆದರಿಸಿ ರೂ.1.78 ಕೋಟಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಪ್ರಕರಣ ಹೊಸ ಸೇರ್ಪಡೆಯಾಗಿದೆ. ಮಹದೇವಪುರದ ಕೆಜಿಎಫ್ ಮುನಿರೆಡ್ಡಿ ಪಾಳ್ಯದ ನಿವಾಸಿ ಎಲ್.ಪರಮಶಿವಂ ಅವರು ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಂಡ ಸಂತ್ರಸ್ತರಾಗಿದ್ದಾರೆ. ಇವರ ದೂರು ಆಧರಿಸಿ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜನವರಿ 3ರಂದು ಪರಮಶಿವಂಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಕ್ರೆಡಿಟ್ ಕಾರ್ಡ್ ಬಿಲ್ ರೂ. 1.20 ಲಕ್ಷ ಪಾವತಿ ಮಾಡಿಲ್ಲ. ಈ ಬಗ್ಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಖಾತೆ ಪರಿಶೀಲನೆ ಮಾಡುವ ಅವಶ್ಯಕೆತ ಇದ್ದು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಆರ್‌ಬಿಐಗೆ ವರ್ಗಾವಣೆ ಮಾಡಬೇಕು ಎಂದು ಬೆದರಿಸಿದ್ದಾನೆ. ಆತನ ಸೂಚನೆಯಂತೆ ಪರಮಶಿವಂ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ರೂ. 1.17 ಕೋಟಿ ಹಣವನ್ನು ವಂಚಕ ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ವರ್ಗಾವಣೆ ಮಾಡಿದ್ದಾರೆ. ನಂತರ ಈ ಸಂಬಂಧ ವಿಚಾರಿಸಲು ಅವರು ಕರೆ ಮಾಡಿದಾಗ ಆರೋಪಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.