ನಾಡದೇವತೆ ಚಾಮುಂಡೇಶ್ವರಿಯ ಅಂಬಾರಿಯನ್ನು ಹಲವು ವರ್ಷ ಹೊತ್ತು ಅರ್ಜುನ ಕಳೆದ ವರ್ಷ ಅಸುನೀಗಿದ. ಒಂಟಿ ಕಾಳಗದಲ್ಲಿ ಬದುಕುಳಿಯಲಿಲ್ಲ. ಆದರೆ ಅರ್ಜುನನ ಸಮಾಧಿ ಕಡೆಗೆ ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಇದು ದರ್ಶನ್ ಅವರ ಬೇಸರಕ್ಕೆ ಕಾರಣವಾಗಿ ಪೋಸ್ಟ್ ಹಾಕಿದ್ದರು. ಅದಾದ ಬಳಿಕ ನವೀನ್ ಎಂಬಾತ ವಾಟ್ಸಾಪ್ ಗ್ರೂಪ್ ಮಾಡಿ ಅದರಿಂದ ಹಣ ಸಂಗ್ರಹ ಮಾಡುತ್ತಿದ್ದರು. ಈ ವಿಚಾರ ತಿಳಿದು ದರ್ಶನ್, ಹಣ ಸಂಗ್ರಹ ಮಾಡುವುದನ್ನು ನಿಲ್ಲಿಸಿ, ನಾನೇ ವ್ಯವಸ್ಥೆ ಮಾಡಿಕೊಡುತ್ತೇನೆಂದು ಹೇಳಿದ್ದರು.
ಅದಕ್ಕೆ ತಕ್ಕ ಹಾಗೆ ಅರ್ಜುನ ಸಮಾಧಿ ಕಟ್ಟಲು ಸ್ಲ್ಯಾಬ್ ಕಲ್ಲುಗಳನ್ನು ದರ್ಶನ್ ಕಳುಹಿಸಿಕೊಟ್ಟಿದ್ದಾರೆ. ಸಮಾಧಿ ನಿರ್ಮಾಣಕ್ಕೆ ದರ್ಶನ್ ಅಭಿಮಾನಿಗಳು ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಡೆದಿದ್ದಾರೆ. ಹೊರಗಿನವರು ಬಂದು ಈ ಕೆಲಸ ಮಾಡಬಾರದು ಎಂದು ಹೇಳಿ, ಅವರೇ ಮುಂದೆ ನಿಂತು ಸಮಾಧಿ ಕಟ್ಟಿದ್ದಲ್ಲದೆ, ಕಲ್ಲುಗಳಿಗೆ ನೀಡಿದ್ದ 30 ಸಾವಿರ ಹಣವನ್ನು ವಾಪಾಸ್ ನೀಡಿದ್ದಾರೆ.
ಆದರೆ ಆ ಹಣ ನಮಗೆ ಬಂದಿಲ್ಲ ಅಂತ ದರ್ಶನ್ ಆಪ್ತ ನಾಗರಾಜು ಹೇಳಿದ್ದಾರೆ. ಹಾಗಾದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಹಣ ಕಳುಹಿಸಿದ್ದು ಯಾರಿಗೆ ಎಂಬ ಮೂಲ ಹುಡುಕುತ್ತಾ ಹೊರಟಾಗ ಮೈಸೂರು ಮೂಲದ ನವೀನ್ ಹೆಸರು ಚಾಲ್ತಿಗೆ ಬಂದಿದೆ. ಇದೇ ನವೀನ್ ಅರ್ಜುನನ ಸ್ಮಾರಕ ಕಟ್ಟಲು ವಾಟ್ಸಾಪ್ ಗ್ರೂಪ್ ಮಾಡಿ ಹಣ ಸಂಗ್ರಹ ಮಾಡಿದ್ದರು. ಅರ್ಜುನನ ಸಮಾಧಿ ಕಟ್ಟಲು ಬಂದಾಗಲೂ ನವೀನ್ ಅದೇ ಜಾಗದಲ್ಲಿ ಇದ್ದರು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ನವೀನ್ ಅವರಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆಲ್ಲ ನವೀನ್ ಅವರೇ ಉತ್ತರ ನೀಡಬೇಕು. ಆದರೆ ಹೋದಲ್ಲಿ ಬಂದಲ್ಲಿ ದರ್ಶನ್ ಅವರಿಗೆ ಈ ರೀತಿಯ ಮೋಸವೇ ಆಗುವುದು ವಿಪರ್ಯಾಸವೇ ಸರಿ.