ಅಂಬೇಡ್ಕರ್ ಚುನಾವಣೆ ಗೆಲ್ಲಲು ಜನಸಂಘದ ಬೆಂಬಲವಿತ್ತೇ?

Most read

ಮೂಲ: ಶಿವಸುಂದರ್‌, The Wire, ಮೇ 15, 2025

ಕನ್ನಡಕ್ಕೆ: ಮನೋಜ್‌ ಆರ್‌ ಕಂಬಳಿ

ಭಾರತೀಯ ರಾಜಕಾರಣದ ಹಿಂದೂತ್ವ ಶಕ್ತಿಗಳಾದ ಹಿಂದೂ ಮಹಾಸಭಾ, ಆರ್‌ಎಸ್‌ಎಸ್ ಮತ್ತು ಜನಸಂಘಗಳು ಅಂಬೇಡ್ಕರ್ ಅವರ ಚುನಾವಣಾ ಪ್ರಚಾರಗಳನ್ನು ಎಂದಿಗೂ ಬೆಂಬಲಿಸಲಿಲ್ಲ, ಅಥವಾ ಅವರು ಅವರ ಬೆಂಬಲವನ್ನು ಪಡೆಯಲಿಲ್ಲ. ಇದು ಐತಿಹಾಸಿಕ ಸತ್ಯ ಶಿವಸುಂದರ್‌.

2004ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅತಿಯಾದ ಆತ್ಮವಿಶ್ವಾಸದಿಂದ “ಸಂವಿಧಾನವನ್ನು ಬದಲಾಯಿಸುವ” ಬಗ್ಗೆ ಸಂಘಪರಿವಾರವು ಪ್ರಚಾರ ಮಾಡಿ ಭಾರೀ ಮುಖಭಂಗ ಅನುಭವಿಸಿತು. ಆನಂತರ ಅದು ಮತ್ತೆ ಜನರ ವಿಶ್ವಾಸವನ್ನು ಗಳಿಸಲು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಪರಂಪರೆಯನ್ನು  ಪೂಜನೀಯ ಭಾವದಿಂದ ಕಾಣುವ ದಲಿತ ಮತ್ತು ಹಿಂದುಳಿದ ವರ್ಗಗಳ ಬಳಿ ಹೋಗಿ ಸಂವಿಧಾನವನ್ನೆ ಅಸ್ತ್ರವಾಗಿ ಬಳಸಿಕೊಂಡು ಇಲ್ಲಿಯವರೆಗೂ ಒಂದು ಕ್ಷಣವೂ ವ್ಯರ್ಥಮಾಡದೆ ಕೆಲಸ ಮಾಡಿದೆ.

ಸಂಘಪರಿವಾರವು ಸಂವಿಧಾನ ವಿರೋಧಿ ಎಂಬ ಗ್ರಹಿಕೆಯನ್ನು ಸುಳ್ಳು ಎಂದು ಬಿಂಬಿಸಲು ಈಗಾಗಲೇ ಹಲವಾರು ಅಭಿಯಾನಗಳನ್ನು ಮಾಡಿದೆ. ಅದರಲ್ಲಿ, 1952 ರಲ್ಲಿ ಅಂಬೇಡ್ಕರ್ ಅವರು ಉತ್ತರ ಮುಂಬೈ (ಮೀಸಲು) ಕ್ಷೇತ್ರದಿಂದ ಮೊದಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ನಂತರ ಭಂಡಾರ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಂಬೇಡ್ಕರ್ ಅವರಿಗೆ ಸಹಾಯಕ್ಕೆ ಬಂದಿದ್ದು ಭಾರತೀಯ ಜನಸಂಘ ( ಇಂದಿನ ಭಾರತೀಯ ಜನತಾ ಪಾರ್ಟಿ)ವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಪ್ರಚಾರ ಮಾಡುತ್ತಿರುವುದು ಒಂದು.

ಇನ್ನೊಂದು, 2024ರ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳಾದ ತಮಿಳುನಾಡಿನ ಅಶ್ವತ್ಥಾಮನ್ ಅಲ್ಲಿಮುತ್ತು ಹಾಗೂ ಕರ್ನಾಟಕ ಮತ್ತು ಇತರೆ ರಾಜ್ಯಗಳ ಬಿಜೆಪಿಯ ನಾಯಕರು, ಈಗಾಗಲೇ ಅಂಬೇಡ್ಕರ್ ಅವರನ್ನು ಬಾಂಬೆ ರಾಜ್ಯದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಬೆಂಬಲ ನೀಡಿದ್ದಲ್ಲದೆ, ಮೇಲ್ಮನೆಯಲ್ಲಿ ಅವರು ಗೆಲ್ಲಲು ನಿರ್ಣಾಯಕವಾಗಿ ಜನಸಂಘವು ಬೆಂಬಲ ನೀಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರು ತಮ್ಮ ಗೆಳೆಯನಿಗೆ ಬರೆದ ಪತ್ರವನ್ನು ಉಲ್ಲೇಖಿಸಿ, ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋಲಲು ಸಾವರ್ಕರ್ ಮತ್ತು ಕಮ್ಯೂನಿಸ್ಟ್ ನಾಯಕ ಶ್ರೀಪಾದ ಅಮೃತ್ ಡಾಂಗೆಯ ಕೈವಾಡವಿದೆ ಎಂದು ಹೇಳಿದ್ದಾರೆ. ಇದು ಅಂಬೇಡ್ಕರ್ ಅವರ ದಾಖಲೆಯಲ್ಲಿಯೇ ಇದೆ. ಬಿಜೆಪಿ ನಾಯಕರು ಪತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದರೂ, ಇದನ್ನು ಸುಳ್ಳು ಎಂದು ಹೇಳುತ್ತಾರೆಂಬ ಭರವಸೆಯಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಅದೇ ಪತ್ರವನ್ನು ಐತಿಹಾಸಿಕ ಪುರಾವೆಯಾಗಿ ಉಲ್ಲೇಖಿಸಿ, ಅಂಬೇಡ್ಕರ್ ಅವರ ಸೋಲಿಗೆ ಸಂಘಪರಿವಾದ ಪಿತೂರಿಯನ್ನು ಬಯಲಿಗೆಳೆಯುತ್ತಿದ್ದಾರೆ.

ಪ್ರಸ್ತುತ ರಾಜಕೀಯದ ಅನುಕೂಲಕ್ಕಾಗಿ ಅನೇಕ ವಿಚಾರಗಳನ್ನು ಕಾರ್ಖಾನೆಯಲ್ಲಿ ವಸ್ತು ತಯಾರಿಸುವಂತೆ ತಯಾರಿಸಲಾಗುತ್ತಿದೆ ಮತ್ತು ಅದನ್ನೆ ಪುನರುತ್ಪಾದಿಸಿ ಕೊಡಲಾಗುತ್ತಿದೆ. ಆದರೆ ಇವುಗಳನ್ನು ಆ ಸಂದರ್ಭಕ್ಕೆ ಮಾತ್ರ ಬಳಸಿಕೊಳ್ಳದೆ ಹಾಗೂ ಅಂಬೇಡ್ಕರ್ ಅವರ ರಾಜಕೀಯ ತಂತ್ರಗಳನ್ನು ಅರಿಯದೆ ಇತಿಹಾಸವನ್ನು ಮರು ನಿರ್ಮಿಸಿ ಯಾವುದೇ ಅರ್ಥವಿಲ್ಲ. 

ಅಂಬೇಡ್ಕರ್ ಮತ್ತು ರಾಜ್ಯಸಭಾ : ಜನಸಂಘ ನಿರ್ವಹಿಸಿದ ಪಾತ್ರವೇನು?

ಅಂಬೇಡ್ಕರ್ ಅವರ ರಾಜ್ಯಸಭಾ ಚುನಾವಣೆಯ ಇತಿಹಾಸದ ದಾಖಲೆಗಳನ್ನು ಗಮನಿಸಿದರೆ ನಮಗೆ ತಿಳಿಯುವುದೇನೆಂದರೆ ಅಂಬೇಡ್ಕರ್ ಅವರು ಕಾಂಗ್ರೆಸ್ ಕಾರಣಕ್ಕಾಗಿ ರಾಜ್ಯಸಭೆಗೆ ಹೋಗಿದ್ದು ಬಿಟ್ಟರೆ, ಇಲ್ಲಿ ಜನಸಂಘದ ಯಾವುದೇ ಪಾತ್ರವಿಲ್ಲ ಹಾಗೂ ಜನಸಂಘದ ಸಣ್ಣ ಕುರುಹು ಸಹ ಇಲ್ಲಿ ಕಾಣಸಿಗುವುದಿಲ್ಲ.

ಯಾಕೆಂದರೆ ರಾಜ್ಯಸಭೆಯ ಸದಸ್ಯರನ್ನು ಆಯಾ ರಾಜ್ಯವಿಧಾನ ಸಭೆಯ ಸದಸ್ಯರುಗಳು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಿದ್ದರು.‌

ಮೊದಲ ರಾಜ್ಯಸಭೆಯು ರಚನೆಯಾಗಿದ್ದು 1952 ರಲ್ಲಿ 217 ಸದಸ್ಯರಿಂದ. ಅವರಲ್ಲಿ 12 ಜನರನ್ನು ನಾಮನಿರ್ದೇಶನ ಮಾಡಲಾಗಿತ್ತು. ವಿವಿಧ ರಾಜ್ಯ ವಿಧಾನಸಭೆಗಳಿಂದ 295 ಸದಸ್ಯರನ್ನು ಆಯ್ಕೆಮಾಡಲಾಗಿತ್ತು. 1952 ರಲ್ಲಿ ಬಾಂಬೆ ವಿಧಾನಸಭೆಯಿಂದ 17 ಸದಸ್ಯರಿಗೆ ಮಾತ್ರ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿತ್ತು. ಬಾಂಬೆ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 281. ಯಾಕೆಂದರೆ, ಪ್ರತಿಯೊಬ್ಬ ರಾಜ್ಯಸಭಾ ಸದಸ್ಯರಿಗೂ ಮುಂಬೈ ವಿಧಾನಸಭೆಯ 16 ಶಾಸಕರಿಂದ ಅನುಮೋದನೆ ಅಥವಾ ಮತದ ಅಗತ್ಯವಿತ್ತು.

1951-1952 ರ ಬಾಂಬೆ ವಿಧಾನಸಭಾ ಚುನಾವಣೆಯಲ್ಲಿ 281 ಕ್ಷೇತ್ರದಲ್ಲಿ ಕಾಂಗ್ರೆಸ್ 269 ಕ್ಷೇತ್ರಗಳನ್ನು ಗೆದ್ದಿತ್ತು. ಅಂಬೇಡ್ಕರ್ ಅವರ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ (SCF ) ಕೇವಲ ಒಂದು ಕ್ಷೇತ್ರ, ಸಮಾಜವಾದಿ ಪಕ್ಷ ಒಂಬತ್ತು ಕ್ಷೇತ್ರ ಹಾಗೂ ಸಿಪಿಐ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಒಂದು ಕ್ಷೇತ್ರದಲ್ಲಿ ಗೆದ್ದಿತ್ತು.

ಅದೇ ಚುನಾವಣೆಯಲ್ಲಿ ಭಾರತೀಯ ಜನಸಂಘವು (ಬಿಜೆಎಸ್) ಕೇವಲ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು ಹಾಗೂ ಕೇವಲ 4,876 ಮತಗಳನ್ನು ಪಡೆದು ಎರಡು ಕ್ಷೇತ್ರಗಳಲ್ಲಿ ಸೋಲುವ ಜೊತೆಗೆ ಠೇವಣಿಯನ್ನು ಸಹ ಕಳೆದುಕೊಂಡಿತ್ತು.

ಆದ್ದರಿಂದ, ಹೇಗೆ ಒಂದು ಪಕ್ಷವು ಒಬ್ಬ ಶಾಸಕರನ್ನೂ (ಎಂಎಲ್ಎ) ಹೊಂದದೆ ಅಂಬೇಡ್ಕರ್ ಅವರ ಆಯ್ಕೆಗೆ ಸಹಾಯ ಮಾಡಿತು? ಅಥವಾ, ಹೇಗೆ ಅಂಬೇಡ್ಕರ್ ಅವರಿಗೆ ರಾಜ್ಯಸಭಾ ಸ್ಥಾನ ದೊರಕಿಸಿಕೊಡುವಲ್ಲಿ ನಿಮ್ಮದು (ಜನಸಂಘ) “ನಿರ್ಣಾಯಕʼ ಪಾತ್ರ ಎಂದು ಹೇಳಿಕೊಳ್ಳುತ್ತಿರಾ?

ಆದಾಗ್ಯೂ, ಅಂಬೇಡ್ಕರ್ ಅವರು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿದ್ದರೂ ಸಹ, ಅದು ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಿಂದ ಆಗಿರಬೇಕಲ್ಲವೆ?. ಅಥವಾ ಅವರು ಬಾಂಬೆಯಿಂದಲೇ ಆಯ್ಕೆಯಾಗಿದ್ದರೂ ಅದಕ್ಕೆ ಕಾಂಗ್ರೆಸ್ ಬೆಂಬಲ ಇರಬೇಕಲ್ಲವೆ?. ಸ್ಪಷ್ಟವಾಗಿ, ಜನಸಂಘದ ಯಾವ ಸಣ್ಣ ಪಾತ್ರವು ಸಹ ಅಂಬೇಡ್ಕರ್ ಅವರ ರಾಜ್ಯಸಭಾ ಚುನಾವಣೆಯಲ್ಲಿ ಇರಲಿಲ್ಲ. ಬಿಜೆಪಿ ಹೇಳಿಕೆಗಳು ಶುದ್ಧ ಕಟ್ಟುಕತೆಯಾಗಿದೆ.

1952 ಮತ್ತು 1954 ರ ಲೋಕಸಭಾ ಚುನಾವಣೆಗಳು ಹಾಗೂ ಹಿಂದೂತ್ವ ಬ್ರಿಗೆಡ್

1952ರ ಸಾರ್ವತ್ರಿಕ ಚುನಾವಣೆಯ ಮೊದಲು, ಅಂಬೇಡ್ಕರ್ ಅವರು ಜವಾಹರಲಾಲ್ ಅವರ ಕ್ಯಾಬಿನೆಟ್‌ ಗೆ ರಾಜೀನಾಮೆ ಕೊಟ್ಟಿರುತ್ತಾರೆ. ರಾಜಕೀಯ ಮತ್ತು ಸಿದ್ಧಾಂತದ ಕಾರಣಕ್ಕಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೆ, ತಮ್ಮ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ (SCF ) ನಿಂದ ಕಾಂಗ್ರೆಸ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುತ್ತಾರೆ. ಎಸ್‌ಸಿಎಫ್‌ ನ ಪ್ರಣಾಳಿಕೆ ಕೂಡ ಕಾಂಗ್ರೆಸ್ ಮಾತ್ರವಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ಹಿಂದೂ ಮಹಾಸಭಾ ಅಥವಾ ಕಮ್ಯೂನಿಸ್ಟ್ ಪಾರ್ಟಿಗಳ ಜೊತೆಗೂ ತಾನು ಮೈತ್ರಿಯನ್ನು ಮಾಡಿಕೊಳ್ಳದ ತನ್ನ ನೀತಿಯನ್ನು ಘೋಷಿಸಿತ್ತು. ರಾಜಕೀಯವಾಗಿ ಮತ್ತು ಚುನಾವಣೆಗಾಗಿ ಸಮಾಜವಾದಿ ಪಕ್ಷದ ಜೊತೆ ಮಾತ್ರ ಮೈತ್ರಿಯನ್ನು ಮಾಡಿಕೊಳ್ಳುವುದಾಗಿ ಎಸ್‌ಸಿಎಫ್‌ ಘೋಷಿಸಿತ್ತು. ಇದು ಅಂಬೇಡ್ಕರ್ ಅವರ ನಿಲುವು ಸಹ ಆಗಿತ್ತು.

ಆದ್ದರಿಂದ ಹಿಂದೂ ಮಹಾಸಭಾ ಅಥವಾ ಜನಸಂಘದ ಬೆಂಬಲದ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅಂಬೇಡ್ಕರ್ ನಾಮಪತ್ರಸಲ್ಲಿಸಲು ಸಿದ್ಧರಾಗಿದ್ದರು.

1954 ರಲ್ಲಿ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರಗೊಳ್ಳಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭವದು. ಆಗ ಹಿಂದೂ ಮಹಾಸಭಾದ ವಿ.ಡಿ.ಸಾವರ್ಕರ್ ಮತ್ತು ಆರ್‌ ಎಸ್‌ ಎಸ್‌ ನ ಎಂ.ಎಸ್.ಗೋಲ್ವಾಲ್ಕರ್ ಪದೇ ಪದೇ ಬೌದ್ಧಧರ್ಮವನ್ನು ಸ್ವೀಕರಿಸುವ ಅವರ ನಿರ್ಧಾರವನ್ನು ವ್ಯಂಗ್ಯವಾಡುತ್ತಿದ್ದರು. ಹಾಗೂ ಅಂಬೇಡ್ಕರ್ ಅವರು ಧರ್ಮದ್ರೋಹಿ ಅಥವಾ ಧಾರ್ಮಿಕದ್ರೋಹಿ ಎಂದು ಹೇಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಅವರು, ತಮ್ಮ ಪ್ರಬುದ್ಧ ಭಾರತ ಪತ್ರಿಕೆಯಲ್ಲಿ ಸಾವರ್ಕರ್ ಅವರ “ವೀರ” ಬಿರುದಿನ ಬಗ್ಗೆ ವ್ಯಂಗ್ಯವಾಡಿ ಬರೆದಿದ್ದರು. ಇಷ್ಟೆಲ್ಲ ಆಗುವಾಗ, ಜನಸಂಘ ಅಥವಾ ಸಂಘಪರಿವಾರ ಹೇಗೆ ಅಂಬೇಡ್ಕರ್ ಗೆ ಚುನಾವಣೆಯಲ್ಲಿ ಬೆಂಬಲ ನೀಡಿತ್ತು?

ದತ್ತೊಪಂತ್ ತೆಂಗಾಡಿ ಅವರನ್ನು ಆರೆಸ್ಸಸ್, ಎಸ್‌ ಸಿ ಎಫ್‌ ನ ಕಾರ್ಯದರ್ಶಿಯಾಗಿ ನೇಮಿಸಿತು. ಮತ್ತು ಜನಸಂಘವು ಅಂಬೇಡ್ಕರ್ ಅವರ ಚುನಾವಣೆಯ ಏಜೆಂಟ್ ಆಗಿ ಕಾರ್ಯನಿರ್ವಹಿಸಿತು ಎಂದು ಸಂಘಪರಿವಾರವು ಇನ್ನೊಂದು ಸುಳ್ಳು ಹೇಳಿಕೆ ನೀಡುತ್ತಿದೆ. ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್: ಬರಹಗಳು ಮತ್ತು ಭಾಷಣಗಳ 17 ರಿಂದ 22 ಸಂಪುಟಗಳನ್ನು ಸಂಪಾದಿಸಿದ ಹರಿ ನಾರ್ಕೆ ಸಹ ಈ ಹೇಳಿಕೆ ಸುಳ್ಳು ಎಂದು ಸಾಬೀತುಪಡಿಸಿ ಬರೆದಿದ್ದಾರೆ. 

ಅಂತಹ ಹೇಳಿಕೆಗಳು ಕೇವಲ ಬಿಜೆಪಿ- ಆರೆಸ್ಸಸ್ ನವರ ವಾಟ್ಸ್ಯಾಪ್‌ ನಲ್ಲಿ ಮಾತ್ರ ಅಸ್ತಿತ್ವದಲ್ಲಿವೆ. ಅಂಬೇಡ್ಕರ್ ಅವರ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಹಿಂದೂತ್ವದ ನಾಯಕರು ಇರಲಿಲ್ಲ ಎಂಬುದನ್ನು ಯಾವುದೇ ಭಾಷಣಗಳು, ಬರಹಗಳು ಮತ್ತು ಅಧಿಕೃತ ದಾಖಲೆಗಳು ಒಂದು ಕಡೆಯೂ ಹೇಳುವುದಿಲ್ಲ.

ವಾಸ್ತವವಾಗಿ, ಹಿಂದೂಮಹಾಸಭಾದ ಹಿರಿಯ ನಾಯಕ ಮತ್ತು ಆರೆಸ್ಸಸ್ ನ ಸಹಸಂಸ್ಥಾಪಕರಾದ ಬಿ.ಎಸ್.ಮೂಂಜೆಯವರು ಅಂಬೇಡ್ಕರ್‌ಗೆ ಸಹಾಯ ಮಾಡಿದರೆ ಹಾವಿಗೆ ಹಾಲೆರೆದಂತೆ ಎಂದು ಹೇಳಿದ್ದಾರೆ. ಈ ಮಾತು 1952 ಮತ್ತು 1954ರ ಚುನಾವಣೆಯಲ್ಲಿ ಅಂಬೇಡ್ಕರ್ ಅವರಿಗೆ ಸಂಘಪರಿವಾರ ಮಾಡಿದ ಪಿತೂರಿಯನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.

ಆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್?

ಆ ಸಂದರ್ಭದಲ್ಲಿ ಕಾಂಗ್ರೆಸ್, ಅಂಬೇಡ್ಕರ್ ಅವರ ರಾಜಕೀಯ ಜೀವನದ ಬಗ್ಗೆ ಸಹಾನುಭೂತಿ ಹೊಂದಿತ್ತು ಎಂದಲ್ಲ. ಸ್ವಾಭಿಮಾನ, ಗೌರವ, ಘನತೆ ಮತ್ತು ಸಾಮಾಜಿಕ-ಆರ್ಥಿಕ ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರ್ ಅವರ ಸ್ವತಂತ್ರ ದಲಿತ-ರಾಜಕೀಯದ ದೃಷ್ಟಿಕೋನವು ಕಾಂಗ್ರೆಸ್‌ ನವರಿಗೆ ಎಂದಿಗೂ ರುಚಿಸಲಿಲ್ಲ.

ಸರ್ದಾರ್ ಪಟೇಲ್ ಹೇಳುವಂತೆ, “ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಪ್ರವೇಶಿಸಲು ಅವರು (ಕಾಂಗ್ರೆಸ್) ಬಾಗಿಲನ್ನು ಬಿಡಿ ಕಿಟಕಿಯನ್ನು ಸಹ ತೆರೆಯಲಿಲ್ಲ. ಮತ್ತು ವಿಧಾನಸಭಾ ಚುನಾವಣೆಯಲ್ಲಿ ಅವರ ಸೋಲಿಗಾಗಿ ಕಾಂಗ್ರೆಸ್ ಹಲವು ಸಲ ಪ್ರಯತ್ನಿಸಿತು” ಎನ್ನುತ್ತಾರೆ.

ಆದರೂ, ಸ್ವಾತಂತ್ರ್ಯ ಬಂದ ನಂತರ ದೇಶ ವಿಭಜನೆಯ ಸಂದರ್ಭದಲ್ಲಿ ರಾಷ್ಟ್ರೀಯ ಏಕತೆಯನ್ನು ರೂಪಿಸಲು ಮತ್ತು ರಾಜಕೀಯ ಅನುಕೂಲಕ್ಕಾಗಿ, ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಕರೆತರುವ ನಿರ್ಧಾರವನ್ನು ಮಾಡಿದರು. ಮತ್ತು 1952ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಲ್ಲಿ ಅವರನ್ನು ಬೆಂಬಲಿಸಿದರು. ಇಲ್ಲಿ ಕಾಂಗ್ರೆಸ್‌ನವರ ದ್ವಂದ್ವ ನೀತಿಯನ್ನು ಕಾಣಬಹುದು. 

ತುಳಿತಕ್ಕೊಳಗಾದ ಅಥವಾ ಅಂಚಿನಲ್ಲಿರುವ ಸಮುದಾಯವನ್ನು ಭವಿಷ್ಯದ ಭಾರತದೊಂದಿಗೆ ಸೇರಿಸಿಕೊಳ್ಳುವ ಹೊಸ ದಾರಿಯನ್ನು ಕಂಡುಕೊಳ್ಳಲು ತಮಗೆ ಲಭ್ಯವಿರುವ ಕಾಲಮಿತಿಯೊಳಗೆ ಹಲವಾರು ಕೆಲಸ ಮಾಡಬಹುದು ಎಂಬ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ಒಪ್ಪಿಕೊಂಡಿದ್ದರು.

ಆದಾಗ್ಯೂ, ಸಂವಿಧಾನವನ್ನು ಅಳವಡಿಸಿಕೊಂಡ ನಂತರ ಅಂಬೇಡ್ಕರ್ ಅವರು ಕಾಂಗ್ರೆಸ್ ಮತ್ತು ಜನಸಂಘದ ರೀತಿಯ  ಹಿಂದೂತ್ವದ ಶಕ್ತಿಗಳಿಂದ ದೂರವಿರಲು ಬಯಸಿದರು ಮತ್ತು ಪ್ರಗತಿಪರ, ಜನಪರ ಆಶಯಗಳೊಂದಿಗೆ ಮೈತ್ರಿ ಮಾಡಿಕೊಂಡರು.

ಸ್ವಾಭಾವಿಕವಾಗಿಯೇ, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್‌ನೊಂದಿಗೆ ರಾಜಕೀಯವಾಗಿ ಭಿನ್ನಾಭಿಪ್ರಾಯವಿತ್ತು. ಯಾವಾಗಲೂ ಅದನ್ನು ರಾಜಕೀಯವಾಗಿ ಮತ್ತು ಚುನಾವಣಾ ವಿರೋಧಿಯಾಗಿಯೇ ನೋಡಿದರು. ಅಂಬೇಡ್ಕರ್ ಅವರು ಕಾಂಗ್ರೆಸ್‌ನೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳದೆ ಅವರನ್ನು ಎರಡು ಚುನಾವಣೆಗಳಲ್ಲಿ ಎದುರಿಸಿದರು ಮತ್ತು ಆ ಚುನಾವಣೆಗಳಲ್ಲಿ ಸೋಲು ಕಾಣಬೇಕಾಯಿತು. ಆದರೂ ಕಾಂಗ್ರೆಸ್ ರಾಜ್ಯಸಭೆಗೆ ಅಂಬೇಡ್ಕರ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲು ಬೆಂಬಲ ನೀಡಿತು.

ಕಮ್ಯೂನಿಸ್ಟರ ಬಗ್ಗೆ ಹೇಳುವುದಾದರೆ – ದುಡಿಯುವ ವರ್ಗದ ಅಥವಾ ಕಾರ್ಮಿಕ ವರ್ಗದ ಒಕ್ಕೂಟವನ್ನು ರಚಿಸುವಲ್ಲಿ ಮತ್ತು ಆ ಮೂಲಕ ಸ್ವಾತಂತ್ರ್ಯೋತ್ತರ ಇತಿಹಾಸವನ್ನು ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವ ಅಂಬೇಡ್ಕರ್ ಅವರೊಂದಿಗೆ ರಾಜಕೀಯ ಸಂಬಂಧವನ್ನು ಬೆಳೆಸಲು ಎಂದಿಗೂ ಕಮ್ಯೂನಿಸ್ಟರು ಗಂಭೀರವಾಗಿ ಪ್ರಯತ್ನಿಸಲಿಲ್ಲ.

ಏನೇ ಇರಲಿ, ಭಾರತೀಯ ರಾಜಕಾರಣದ ಹಿಂದೂತ್ವ ಶಕ್ತಿಗಳಾದ ಹಿಂದೂ ಮಹಾಸಭಾ, ಆರ್‌ಎಸ್‌ಎಸ್ ಮತ್ತು ಜನಸಂಘಗಳು ಅಂಬೇಡ್ಕರ್ ಅವರ ಚುನಾವಣಾ ಪ್ರಚಾರಗಳನ್ನು ಎಂದಿಗೂ ಬೆಂಬಲಿಸಲಿಲ್ಲ, ಅಥವಾ ಅವರು ಅವರ ಬೆಂಬಲವನ್ನು ಪಡೆಯಲಿಲ್ಲ. ಇದು ಐತಿಹಾಸಿಕ ಸತ್ಯ.

ಕನ್ನಡಕ್ಕೆ: ಮನೋಜ್‌ ಆರ್‌ ಕಂಬಳಿ  

ಇದನ್ನೂ ಓದಿ- ಇದು ಟ್ರೋಲ್ ಅಲ್ಲ ಹೆರಾಸ್ಮೆಂಟ್

More articles

Latest article