ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ನಾಪತ್ತೆ, ಕೊಲೆ ಪ್ರಕರಣಗಳನ್ನು ಭಾಗವಾಗಿಸಿಕೊಂಡು ವಿಶೇಷ ತನಿಖಾ ತಂಡ (ಎಸ್.ಐ.ಟಿ) ಸಮಗ್ರ ತನಿಖೆ ನಡೆಸುವಂತೆ ರಾಜ್ಯದ ಪ್ರಜ್ಞಾವಂತ ಜನತೆ ಮತ್ತು ಮಹಿಳಾ ಸಮುದಾಯದ ಪರವಾಗಿ “ಕೊಂದವರು ಯಾರು?” ಎಂಬ ಸಂಘಟನೆ ರಾಜ್ಯ ಮಹಿಳಾ ಆಯೋಗವನ್ನು ಒತ್ತಾಯಿಸಿದೆ.
ಈ ಸಂಬಂಧ ಸಂಘಟನೆಯು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದೆ. ತಾರ್ಕಿಕ ಅಂತ್ಯ ಕಾಣುವವರೆಗೆ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ಅಥವಾ ಇನ್ನಾವುದೇ ಪ್ರಭಾವಿ ಶಕ್ತಿಗಳಿಂದಾಗಲೀ ನಡೆಯಬಾರದು. ಮಹತ್ವದ ತನಿಖೆಗೆ ಅಡ್ಡಿಪಡಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕೆಲವು ಮಾಧ್ಯಮಗಳಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಬೇಕು ಎಂದೂ ಆಗ್ರಹಪಡಿಸಿದೆ.
ಪುಣ್ಯಕ್ಷೇತ್ರವೆಂದು ಪೂಜಿಸಲ್ಪಡುವ ಧರ್ಮಸ್ಥಳದ ಸುತ್ತ ದುರದೃಷ್ಟವಶಾತ್, ವ್ಯಾಪಕ ಅತ್ಯಾಚಾರ, ಕೊಲೆ, ಅಪಹರಣ ಮತ್ತು ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕೊಲೆಗಳು ಸೇರಿದಂತೆ ಹೇಯ ಅಪರಾಧಗಳ ಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ. ಕಳೆದ ಹಲವು ವರ್ಷಗಳಲ್ಲಿ 2012 ರಲ್ಲಿ ಸೌಜನ್ಯ ಅವರ ಅಪಹರಣ ಮತ್ತು ಕೊಲೆ, ಅದಕ್ಕೂ ಕೇವಲ 20 ದಿನಗಳ ಮೊದಲು ಆನೆಮಾವುತ ನಾರಾಯಣ ಮತ್ತು ಅವರ ತಂಗಿ ಯಮುನಾ ಅವರ ಕೊಲೆ ನಡೆದಿದೆ.
1986 ರಲ್ಲಿ ಪದ್ಮಲತಾ ಅವರ ಅಪಹರಣ, ಹಲವು ದಿನಗಳ ಕಾಲ ಬಂಧನದಲ್ಲಿರಿಸಿ ಅವರ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. 1979 ರಲ್ಲಿ ಟೀಚರ್ ವೇದವಲ್ಲಿ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆಯೂ ಸೇರಿದಂತೆ ಇದುವರೆಗೂ ಬಗೆಹರಿಯದ, ಹಲವಾರು ಮಹಿಳೆಯರು ನಾಪತ್ತೆಯಾದ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ನಿಗೂಢ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಹಿಳೆಯರು ನಾಪತ್ತೆಯಾಗುವ, ಅತ್ಯಾಚಾರ ಮತ್ತು ಕೊಲೆಗೀಡಾಗುವ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗದಿದ್ದರೂ, ಸರ್ಕಾರ ಮತ್ತು ಸಮಾಜ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಆಘಾತ ತಂದಿದೆ. ಹಾಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಕೆಲವು ಮಾಧ್ಯಮಗಳಲ್ಲಿ ʼಮೀಡಿಯಾ ಟ್ರಯಲ್ʼ ನಡೆಯುತ್ತಿದೆ ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತನಿಖೆಯು ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕೇಂದ್ರೀಕರಿಸಿ ನಡೆಯಬೇಕು. ನಾಡಿನ ಪ್ರಜ್ಞಾವಂತ ನಾಗರೀಕರು ಸೇರಿ ‘ಕೊಂದವರು ಯಾರುʼ-‘Who Killed Women in Dharmasthala’ ಎಂಬ ಜನಾಂದೋಲನವನ್ನು ಆರಂಭಿಸಿಸಲಾಗಿದೆ. ಇಡೀ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ಗಟ್ಟಿದನಿಯಲ್ಲಿ ಪ್ರತಿಪಾದಿಸಲು ಉದ್ದೇಶಿಸಲಾಗಿದೆ.
ಈ ಪ್ರಕರಣದಲ್ಲಿ ಮಹಿಳಾ ಆಯೋಗದ ಸಕಾರಾತ್ಮಕ ಮಧ್ಯಪ್ರವೇಶವನ್ನು ಶ್ಲಾಘಿಸುತ್ತೇವೆ. ಆದರೆ ಎಸ್.ಐ.ಟಿ ರಚನೆ ನಂತರದ ಬೆಳವಣಿಗೆಗಳ ಬಗ್ಗೆ ಆತಂಕ ಎದುರಾಗಿದೆ.
ಮಹಿಳಾ ಆಯೋಗದ ಪತ್ರವನ್ನು ಉಲ್ಲೇಖಿಸಿ ಕರ್ನಾಟಕ ಸರ್ಕಾರದ ನಡಾವಳಿಯಲ್ಲಿ “……..ಹಾಗಾಗಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ರಚಿಸುವಂತೆ ಕೋರಿರುತ್ತಾರೆ” ಎಂದು ನಡಾವಳಿ ತಿಳಿಸುತ್ತದೆ. ಹಾಗೆಯೇ ಎಸ್.ಐ.ಟಿ ರಚನೆಯನ್ನು ಘೋಷಿಸುತ್ತಾ, “…ಮೇಲ್ಕಂಡ ಪ್ರಕರಣವೂ ಸೇರಿದಂತೆ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ವರ್ಗಾಯಿಸುವುದು ಹಾಗೂ ಡಿಜಿ ಮತ್ತು ಐಜಿಪಿರವರು ಈ ವಿಶೇಷ ತನಿಖಾ ತಂಡಕ್ಕೆ ಅವಶ್ಯವಿರುವ ಇತರೆ ಅಧಿಕಾರಿ/ಸಿಬ್ಬಂದಿಗಳನ್ನು ಒದಗಿಸುವುದು” ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ನಮ್ಮ ಹಕ್ಕೊತ್ತಾಯಗಳು:
1. SIT ತನಿಖೆಯ ಅಬಾಧಿತ ಮುಂದುವರಿಕೆ: ತನಿಖೆಯು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯಬೇಕು ಎಂಬ ಆಗ್ರಹವನ್ನು ಕರ್ನಾಟಕದ ನಾಗರೀಕ ಸಮಾಜ ಮುಂದಿಡುತ್ತಿರುವ ಹಾಗೆಯೇ ಮಹಿಳಾ ಆಯೋಗವೂ ಸರ್ಕಾರದ ಮುಂದಿಟ್ಟು ಒತ್ತಡ ಹೇರಬೇಕು. ಎಸ್‌ಐಟಿ ಕೇವಲ ʼಸಾಮೂಹಿಕ ಹೆಣ ಹೂಳುವಿಕೆʼಯ ಪ್ರಕರಣವನ್ನು ಅಥವಾ ಅದೇ ಸಮಯದಲ್ಲಿ ಬೆಳಕಿಗೆ ಬಂದ ಕೆಲವು ಪ್ರಕರಣಗಳನ್ನಷ್ಟೇ ಅಲ್ಲದೆ ಸೌಜನ್ಯ, ಪದ್ಮಲತಾ ಮತ್ತು ವೇದವಲ್ಲಿ ಅವರ ಪ್ರಕರಣಗಳು ಸೇರಿದಂತೆ ಎಲ್ಲಾ ಸಂಬಂಧಿತ ಪ್ರಕರಣಗಳನ್ನು ಸಮಗ್ರವಾಗಿ ಮರು ತನಿಖೆ ಮಾಡಬೇಕು ಎಂಬುದನ್ನು ಒತ್ತಿ ಹೇಳಬೇಕು.
2. ಪೂರ್ವ ನಿರ್ಧಾರಿತ ಹೇಳಿಕೆಗಳ ನಿಯಂತ್ರಣ: ಉಪಮುಖ್ಯಮಂತ್ರಿಗಳು ತಮ್ಮ ವಿಧಾನಸಭಾ ಹೇಳಿಕೆಯನ್ನು ಸಾರ್ವಜನಿಕವಾಗಿ ಹಿಂಪಡೆಯಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಗೆ ಮಹಿಳೆಯರ ಸುರಕ್ಷೆ ಆದ್ಯತೆಯಾಗಬೇಕು. ಮತ್ತು ತನಿಖೆಯ ಮೇಲೆ ಪ್ರಭಾವ ಬೀರುವ ಯಾವುದೇ ಹೇಳಿಕೆಗಳನ್ನು ನೀಡುವುದನ್ನು ಸರ್ಕಾರದ ಕ್ಯಾಬಿನೆಟ್ ಸದಸ್ಯರು ಮತ್ತು ಇನ್ನಿತರ ಜನಪ್ರತಿನಿಧಿಗಳು ನಿಲ್ಲಿಸಬೇಕು. ಸಾಕ್ಷಿಗಳು ಅಥವಾ ಸಂತ್ರಸ್ತರ ಕುಟುಂಬಗಳನ್ನು ಬೆದರಿಸುವುದನ್ನು ತಪ್ಪಿಸಲು ಸಂಪೂರ್ಣ ನಿಷ್ಪಕ್ಷಪಾತಿ ನಡವಳಿಕೆ ಮತ್ತು ತಟಸ್ಥತೆಯನ್ನು ಎತ್ತಿಹಿಡಿಯಬೇಕು.
3. ಸಾಕ್ಷಿ ರಕ್ಷಣೆ ಮತ್ತು ಬೆಂಬಲ: ಮಾಹಿತಿ ನೀಡುವವರು ಮತ್ತು ಸಾಕ್ಷಿಗಳನ್ನು ರಕ್ಷಿಸಲು ತಕ್ಷಣದ ಕ್ರಮಗಳು, ಪೊಲೀಸ್ ರಕ್ಷಣೆ ನೀಡಬೇಕು ಮತ್ತು ಟಿವಿ ಚಾನೆಲ್‌ಗಳು ಸೇರಿದಂತೆ. ಪಕ್ಷಪಾತದ ಹೇಳಿಕೆಗಳಿಂದ ಉಂಟಾಗುವ ಯಾವುದೇ ಬೆದರಿಕೆಗಳನ್ನು ಸರ್ಕಾರವು ಪರಿಹರಿಸಬೇಕು.
4. ಎಲ್ಲಾ ಧರ್ಮಗಳ ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಮೇಲೆ ಗಮನ: ಎಲ್ಲಾ ಧರ್ಮಗಳ ಯಾತ್ರಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಭದ್ರತಾ ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸಿ, CCTV ಕಣ್ಗಾವಲು, ಮಹಿಳೆಯರಿಗಾಗಿ ಸಹಾಯ ಕೇಂದ್ರಗಳು ಮತ್ತು ಲಿಂಗಾಧಾರಿತ ಹಿಂಸಾಚಾರದ ಬಗ್ಗೆ ಜಾಗೃತಿ ಅಭಿಯಾನಗಳು ಜಾರಿಯಾಗಬೇಕು.
5. ಲಿಂಗ ನ್ಯಾಯ ಮತ್ತು ಹೊಣೆಗಾರಿಕೆ: SIT ಯ ತನಿಖೆಯಲ್ಲಿ ಲಿಂಗ ಸಂವೇದನೆಯೊಂದಿಗೆ ಸಹಾಯ ಮಾಡಲು ಮಹಿಳಾ ಹಕ್ಕುಗಳ ತಜ್ಞರನ್ನು ಒಳಗೊಂಡ ಸ್ವತಂತ್ರ ಸಹಾಯಕ ಸಮಿತಿಯನ್ನು ಸ್ಥಾಪಿಸಬೇಕು. ಬಾಧಿತ ಕುಟುಂಬಗಳಿಗೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಖಚಿತಪಡಿಸಬೇಕು. ತನಿಖೆಯನ್ನು ಪ್ರಭಾವಿಸುವ ರೀತಿಯಲ್ಲಿ ಹೇಳಿಕೆ ನೀಡುವ, ಪತ್ರ ಬರೆಯುವ ಮತ್ತು ಒತ್ತಡ ಹೇರುವ ಮೂಲಕ ಸತ್ಯವನ್ನು ಮುಚ್ಚಿಹಾಕುವುದರಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು- ರಾಜಕೀಯ ನಾಯಕರು ಮತ್ತು ಅವರ ಸಂಘಟನೆಗಳನ್ನೂ ಸೇರಿದಂತೆ- ಹೊಣೆಗಾರರನ್ನಾಗಿ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಆಯೋಗ ಸರ್ಕಾರವನ್ನು ಆಗ್ರಹಿಸಬೇಕು.
6. ಮಾಧ್ಯಮಗಳ ಮುಖ್ಯಸ್ಥರ ಸಭೆ: ಮಾಧ್ಯಮಗಳು ವಿಶೇಷವಾಗಿ ಕೆಲವು ಟಿ.ವಿ ಚಾನಲ್‌ಗಳು ಈ ಸಂದರ್ಭದಲ್ಲಿ ವಹಿಸುತ್ತಿರುವ ನಕಾರಾತ್ಮಕ ಪಾತ್ರವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಮಹಿಳಾ ಆಯೋಗವೇ ಕರೆಯಬೇಕು. ಇಂತಹ ಸೂಕ್ಷ್ಮ ವಿಚಾರಗಳಲ್ಲಿ, ಮಾಧ್ಯಮಗಳ ಪಾತ್ರವೇನು, ಅವರು ಜಬಾಬ್ದಾರಿಯುತ ವರ್ತನೆ ತೋರುವ ಅಗತ್ಯವೇನು ಎಂಬುದನ್ನು ಒತ್ತಿ ಹೇಳಬೇಕು.
7. ಸಾರ್ವಜನಿಕ ಜಾಗೃತಿ ಮತ್ತು ಸಂವೇದನೆ: ಮಹಿಳೆಯರ ವಿರುದ್ಧದ ಹಿಂಸಾಚಾರವು ಯಾವುದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದು ಒತ್ತಿಹೇಳುವ ರಾಜ್ಯವ್ಯಾಪಿ ಅಭಿಯಾನಗಳನ್ನು ಪ್ರಾರಂಭಿಸಬೇಕು.
ಈ ಕೆಳಗಿನ ಕೆಲವು ಬೆಳವಣಿಗೆಗಳು ಗಂಭೀರ ಆತಂಕಕ್ಕೆ ಕಾರಣವಾಗಿವೆ.
ಆದೇಶವು ʼಇದು ಕಳೆದ 20 ವರ್ಷಗಳಲ್ಲಿ ನಡೆದ ಎಲ್ಲ ಘಟನೆಗಳ ತನಿಖೆʼ ಎಂದು ಸ್ಪಷ್ಟವಾಗಿ ಹೇಳಿದ್ದರೂ, ತನಿಖೆ ಕೇವಲ ಈಚೆಗೆ ಸಾಕ್ಷಿ ಹೇಳಲು ಮುಂದೆ ಬಂದಿರುವ ದೇವಾಲಯದ ಮಾಜಿ ನೌಕರನ ಹೇಳಿಕೆ ಮತ್ತು ಅದರ ಸುತ್ತಲಿನ ಸಂಗತಿಗಳ ವಿಚಾರಣೆಯನ್ನೇ ಕೇಂದ್ರೀಕರಿಸಿದಂತೆ ಕಂಡುಬರುತ್ತಿದೆ. ಮೂಲತಃ ಎಸ್ ಐಟಿ ರಚನೆಯ ಆಶಯದಿಂದ ದೂರ ಸರಿದಿದೆಯೇ ಎಂಬ ಗಂಭೀರ ಪ್ರಶ್ನೆ ಮೂಡುವಂತೆ ಮಾಡಿದೆ. ಇದಲ್ಲದೆ ಈ ತನಿಖೆಯನ್ನು ಕೆಲವು ಟಿ.ವಿ ಮಾಧ್ಯಮಗಳು ಎಸ್.ಐ.ಟಿ ಎಂಬುದು ʼಗುಂಡಿ ಅಗೆಯುವ ಇಲಾಖೆʼಯೆಂಬಂತೆ ಬಿಂಬಿಸುತ್ತ ಅದನ್ನೊಂದು ನಗೆಪಾಟಲಿನ ಸಂಗತಿಯಾಗಿಸುವ ಪ್ರಯತ್ನ ಮಾಡಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಹಲವು ಅಮಾಯಕರ ದುರಂತ ಸಾವುಗಳು ಹೀಗೆ ಒಂದು ಪ್ರಹಸನವಾಗುವಂತೆ ಆದದ್ದು ಅತ್ಯಂತ ದುರದೃಷ್ಟಕರ ಎಂದು ತಿಳಿಸಿದೆ.
ಇತ್ತೀಚಿನ ವಿಧಾನಸಭಾ ಅಧಿವೇಶನದಲ್ಲಿ ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಘಾಸಿಯಾಗಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಹೇಳಿಕೆಯನ್ನು ನೀಡುತ್ತಾ ಬರಲಾಗಿದೆ. ಇಂತಹ ಹೇಳಿಕೆಗಳು ವಿಧಿವಿಜ್ಞಾನ ಸಾಕ್ಷ್ಯ ಅಥವಾ ಸಾಕ್ಷಿಗಳ ಹೇಳಿಕೆಗಳಿಗಾಗಿ ಕಾಯದೆ ಅಧಿಕಾರ ಸ್ಥಾನದಲ್ಲಿರುವವರು ಪ್ರಭಾವಿ ವ್ಯಕ್ತಿಗಳನ್ನು ಆರೋಪದಿಂದ ಪಾರುಮಾಡುವ ಆತುರದಲ್ಲಿದ್ದಾರೆಂಬುದನ್ನು ತೋರಿಸುತ್ತದೆ. ಇದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆ ಮತ್ತು ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಸುಜಾತಾ ಭಟ್ ಅವರು ತನ್ನ ಮಗಳು ಕಾಣೆಯಾದಳೆಂದು ಹೇಳಿಕೊಂಡು ಬಂದ ಪ್ರಕರಣದಲ್ಲಿ, ಮಾಧ್ಯಮಗಳು ಅವರನ್ನು ಬೇಟೆಯಾಡುತ್ತಿರುವ ರೀತಿಯಂತೂ ಆಘಾತಕಾರಿಯಾಗಿದೆ. ಅವರ ಹೇಳಿಕೆಯ ಸತ್ಯಾಸತ್ಯತೆ ಬೇರೆ ವಿಚಾರ. ಅವರು ಎಸ್.ಐ.ಟಿ ಮುಂದೆ ಹೇಳಿಕೆ ನೀಡಿದ್ದಾರೆ, ಅದರ ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಪ್ರಕಾರ ಮುಂದಿನ ನಡೆ ನಿರ್ಧರಿಸುವುದು ತಂಡದ ಮುಂದಿರುವ ವಿಚಾರ. ಆದರೆ, ಅದಕ್ಕೆ ಮೊದಲೇ ಮಾಧ್ಯಮಗಳೇ ನ್ಯಾಯಾಧೀಶರ ಪಟ್ಟಕ್ಕೇರಿ ಮಹಿಳೆಯೊಬ್ಬರನ್ನು ವಿನಾಕಾರಣ ಮೀಡಿಯಾ ಟ್ರಯಲ್ ನಡೆಸುವುದು, ಆ ನೆಪದಲ್ಲಿ ಘೋರವಾದ ಮಾನಸಿಕ ಹಿಂಸೆಗೆ ಗುರಿಪಡಿಸುವುದು ಯಾವ ಕಾರಣಕ್ಕೂ ಸರಿಯಲ್ಲ, ಇದನ್ನು ನಾವು ಕಟುವಾಗಿ ಖಂಡಿಸುತ್ತೇವೆ.
ತನಿಖೆ ಪ್ರಗತಿಯಲ್ಲಿರುವಾಗಲೇ, ಪ್ರಕರಣವನ್ನು ವೈಭವೀಕರಿಸಿ, ಧರ್ಮ ಮತ್ತು ದೇವರನ್ನು ನಡುವೆ ಎಳೆತಂದು ವಿರೋಧ ಪಕ್ಷದ ನಾಯಕರು, ಬಿಜೆಪಿ, ಜೆಡಿಎಸ್ ಶಾಸಕರು ಮತ್ತು ಸಂಘಟನೆಗಳು ಧರ್ಮಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವ, ಉದ್ವಿಗ್ನ ವಾತಾವರಣ ಸೃಷ್ಟಿಸುವ ಮತ್ತು ಆಕ್ರಮಣಕಾರಿ ಮಾತುಗಳನ್ನಾಡುವ ಪ್ರವೃತ್ತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ, ಈ ಬೆಳವಣಿಗೆಗಳನ್ನು ತಡೆಯುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ.
ತನಿಖೆ ಮಹಿಳೆಯರ ಘನತೆ-ಸುರಕ್ಷತೆಯನ್ನು ಕೇಂದ್ರೀಕರಿಸಬೇಕು; ರಾಜಕೀಯ-ಧಾರ್ಮಿಕ ವಿಚಾರಗಳನ್ನಲ್ಲ:
ಈ ಇಡೀ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ನಾವು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇವೆ.